ಕನ್ನಡಪ್ರಭ ವಾರ್ತೆ ನಂಜನಗೂಡು
ಅಯೋಧ್ಯೆಯಲ್ಲಿ ಬಾಲರಾಮ ಪ್ರತಿಷ್ಠಾಪನೆ ಹಿನ್ನೆಲೆ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸಿ ಪಟ್ಟಣದ ಶ್ರೀಕಂಠೇಶ್ವರಸ್ವಾಮಿ ದೇವಾಲಯ, ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲಮಠ ಸೇರಿದಂತೆ ವಿವಿಧೆಡೆ ಪೂಜಾ ಕೈಂಕರ್ಯಗಳು ಜರುಗಿದವು.ಬೆಳಗ್ಗೆ ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ರುದ್ರಾಭಿಷೇಕ ನೆರವೇರಿತು. ಶ್ರೀರಾಘವೇಂದ್ರಸ್ವಾಮಿಗಳ ಮೂಲಮಠದಲ್ಲಿ ಮೂಲರಾಮನ ಸ್ಮರಣೆಯೊಂದಿಗೆ ಧಾರ್ಮಿಕ ಕಾರ್ಯ ಕೈಗೊಂಡು ಭಕ್ತರಿಗೆ ಪಾನಕ, ಸಿಹಿ ವಿತರಣೆ ಮಾಡಲಾಯಿತು.
ಹೌಸಿಂಗ್ ಬೋರ್ಡ್ ಕಾಲನಿಯಲ್ಲಿರುವ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯ ಯೋಗ ಮಹಾಮನೆಯಲ್ಲಿ ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಸುಮಾರು 200 ಕ್ಕೂ ಹೆಚ್ಚು ಯೋಗ ಬಂಧುಗಳು ಸಾಮೂಹಿಕ ಅಗ್ನಿಹೋತ್ರ ಹಾಗೂ ರಾಮ ಮಂತ್ರ ಜಪ ಧ್ಯಾನದಲ್ಲಿ ಪಾಲ್ಗೊಂಡು ಪುನೀತರಾದರು. ಸಂಜೆ ವೇಳೆ ಪ್ರಧಾನ ಯೋಗ ಶಿಕ್ಷಕ ಪ್ರಕಾಶ್ ಜಿ. ಉಡಿಗಾಲ ನೇತೃತ್ವದಲ್ಲಿ ಸಾಮೂಹಿಕ ರಾಮರಕ್ಷಾ ಮಂತ್ರ ಜಪ ನಡೆಯಿತು.ಇನ್ನು ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಸಮೀಪವಿರುವ ರಾಮ ಮಂದಿರದಲ್ಲಿ ರಾಮ, ಸೀತೆ, ಲಕ್ಷ್ಮಣ ಉತ್ಸವಮೂರ್ತಿಗಳಿಗೆ ವಿಶೇಷ ಅಲಂಕಾರ ಹಾಗೂ ಹಲವು ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದ ಅರ್ಚಕರು, ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಿದರು.
ಒಕ್ಕಲಗೇರಿಯಲ್ಲಿರುವ ರಾಮಮಂದಿರ, ರಾಷ್ಟ್ರಪತಿ ರಸ್ತೆಯ 17ನೇ ತಿರುವಿನಲ್ಲಿರುವ ರಾಮಮಂದಿರ ಸೇರಿದಂತೆ ನಾನಾ ಕಡೆ ವಿಶೇಷ ಪೂಜಾ ಕಾರ್ಯಗಳು ಜರುಗಿದವು.ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಆಗುತ್ತಿದ್ದಂತೆ ವಿವಿಧ ಬಡಾವಣೆಗಳಲ್ಲಿ ರಾಮ ಭಕ್ತರು ರಾಮನ ಫ್ಲೆಕ್ಸ್ಗೆ ಪೂಜೆ ಸಲ್ಲಿಸಿ ಪ್ರಸಾದ ವಿನಿಯೋಗ ಮಾಡುವ ಮೂಲಕ ಹಬ್ಬದ ವಾತಾವರಣ ನಿರ್ಮಾಣ ಮಾಡಿದರು. ಇನ್ನು ತಾಲೂಕಿನ ನಾನಾ ಗ್ರಾಮಗಳಲ್ಲೂ ಕೂಡ ಭಕ್ತರು ಪಾನಕ, ಮಜ್ಜಿಗೆ ವಿತರಣೆ ಮಾಡುವ ಮೂಲಕ ರಾಮ ಸ್ಮರಣೆ ಮಾಡಿದರು.
ಆಯುಕ್ತ ಭೇಟಿ- ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತ ಎಚ್. ಬಸವರಾಜೇಂದ್ರ ಅವರು ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಸೋಮವಾರ ಕುಟುಂಬ ಸಮೇತರಾಗಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯದ ವತಿಯಿಂದ ಅವರಿಗೆ ಫಲತಾಂಬೂಲ ನೀಡಿ ಸತ್ಕರಿಸಲಾಯಿತು.