ಕನ್ನಡಪ್ರಭ ವಾರ್ತೆ ಇಳಕಲ್ಲ
ಬಾಗಲಕೋಟೆ ಜಿಲ್ಲೆಯ ಇಳಕಲ್ಲನ ಮೇಘರಾಜ ಗುದ್ದಟ್ಟಿ ಅವರು ಸೀರೆಯಲ್ಲಿಯೇ ಶ್ರೀರಾಮ ಮಂದಿರವನ್ನು ನಿರ್ಮಿಸಿದ್ದಾರೆ. ನೇಕಾರಿಕೆಯಲ್ಲಿಯೇ ತಮ್ಮ ಬದುಕು ಕಂಡುಕೊಂಡಿರುವ ಮೇಘರಾಜ ಅವರು ಈ ಹಿಂದೆ ಹಲವಾರು ವಿಧದ ಚಿತ್ರಗಳನ್ನು ಸೀರೆಯಲ್ಲಿ ತಯಾರಿಸಿದ್ದರು. ಈಗ ಜ.22ರಂದು ಶ್ರೀರಾಮ ಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಇಳಕಲ್ಲ ಸೀರೆಯಲ್ಲಿ ಶ್ರೀರಾಮ ಮಂದಿರ ತಯಾರಿಸಿದ್ದಾರೆ.
ಈ ಹಿಂದೆಯೂ ಕೂಡ ಮೇಘರಾಜ ಅವರು ಸಂದರ್ಭಕ್ಕೆ ತಕ್ಕಂತೆ ನಾನಾ ರೀತಿಯಲ್ಲಿ ಇಳಕಲ್ಲ ಸೀರೆಯಲ್ಲಿ ಚಿತ್ರಗಳನ್ನು ರೂಪಿಸಿದ್ದರು. ಈ ಹಿಂದೆ ಅವರು ರಾಷ್ಟ್ರಧ್ವಜ ನಿರ್ಮಿಸಿದ್ದರು. ಪುನೀತರಾಜ್‌ಕುಮಾರ್ ಅವರು ನಿಧನರಾಗಿದ್ದ ಸಂದರ್ಭದಲ್ಲಿ ಅವರ ಸವಿನೆನಪಿಗಾಗಿ ಇಳಕಲ್ಲ ಸೀರೆಯಲ್ಲಿ ಅಪ್ಪು ಚಿತ್ರವನ್ನು ನೇಯ್ದಿದ್ದರು. ಅಲ್ಲದೆ, ಚಂದ್ರಯಾನ-3 ಯಶಸ್ವಿಯಾದ ಹಿನ್ನೆಲೆಯಲ್ಲಿ ಚಂದ್ರಯಾನ-3 ಚಿತ್ರ ಬಿಡಿಸಿದ್ದರು. ಅಲ್ಲದೆ, ಕಾಂತಾರ ಚಿತ್ರ ಜಗತ್ತಿನಾದ್ಯಂತ ಯಶಸ್ವಿಯಾದ ಹಿನ್ನೆಲೆಯಲ್ಲಿ ಅದಕ್ಕೆ ಆಸ್ಕರ್ ಪ್ರಶಸ್ತಿ ಸಿಗಲೆಂದು ಕಾಂತಾರ ಚಿತ್ರವನ್ನೂ ಅವರು ಸೀರೆಯಲ್ಲಿ ಹೆಣೆದಿದ್ದರು. ಅದರಂತೆ ಐಪಿಎಲ್‌ನಲ್ಲಿ ಆರ್‌ಸಿಬಿ ಗೆಲ್ಲಲಿ ಎಂದು ಆರ್‌ಸಿಬಿ ಚಿತ್ರವನ್ನೂ ಕೂಡ ಇಳಕಲ್ಲ ಸೀರೆಯಲ್ಲಿ ತಯಾರಿಸಿದ ಹೆಗ್ಗಳಿಕೆ ಇವರದು.------
ಕೋಟ್....ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ನಾಲ್ಕು ದಿನಗಳಲ್ಲಿ ಇಳಕಲ್ಲ ಸೀರೆಯಲ್ಲಿ ಶ್ರೀರಾಮಮಂದಿರ ಚಿತ್ರದ ಸೀರೆ ಹೆಣೆದಿರುವೆ. ಅಯೋಧ್ಯೆಯಲ್ಲಿ ಇದನ್ನು ಮ್ಯೂಸಿಯಂನಲ್ಲಿ ಇಡುವುದಾದರೆ, ಇದನ್ನು ಅಲ್ಲಿಗೆ ಉಚಿತವಾಗಿ ನೀಡುತ್ತೇನೆ.
- ಮೇಘರಾಜ ಗುದ್ದಟ್ಟಿ, ಇಳಕಲ್ಲ ಸೀರೆ ತಯಾರಕ, ಇಳಕಲ್ಲ