ಅಡ್ಡ ಪರಿಣಾಮರಹಿತ ಚಿಕಿತ್ಸಾ ಪದ್ಧತಿ ಆಯುರ್ವೇದ: ರೋಹಿಣಿ

KannadaprabhaNewsNetwork | Published : Oct 30, 2024 12:44 AM

ಸಾರಾಂಶ

ಮೇಕೇರಿ ಬಳಿಯ ಸತ್ಯಸಾಯಿ ಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಯುಷ್ ಇಲಾಖೆ ಹಾಗೂ ನೀಮಾ ಕೊಡಗು ಸಹಯೋಗದೊಂದಿಗೆ ‘ಮಹಿಳಾ ಸಬಲೀಕರಣಕ್ಕಾಗಿ ಆಯುರ್ವೇದ’ ಘೋಷವಾಕ್ಯದಲ್ಲಿ 9ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಆಯುರ್ವೇದ ಯಾವುದೇ ಅಡ್ಡ ಪರಿಣಾಮ ಇಲ್ಲದ ಚಿಕಿತ್ಸಾ ಪದ್ಧತಿ. ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಸಾರ್ವಜನಿಕರು ಒಲವು ತೋರಿಸಬೇಕೆಂದು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮುಖ್ಯ ಆಡಳಿತ ಅಧಿಕಾರಿ ರೋಹಿಣಿ ಹೇಳಿದ್ದಾರೆ.

ಮೇಕೇರಿ ಬಳಿಯ ಸತ್ಯಸಾಯಿ ಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಯುಷ್ ಇಲಾಖೆ ಹಾಗೂ ನೀಮಾ ಕೊಡಗು ಸಹಯೋಗದೊಂದಿಗೆ ‘ಮಹಿಳಾ ಸಬಲೀಕರಣಕ್ಕಾಗಿ ಆಯುರ್ವೇದ’ ಘೋಷವಾಕ್ಯದಲ್ಲಿ ನಡೆದ 9ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ ಶೈಲಜಾ ಜಿ. ಮಾತನಾಡಿ, ಜಾಗತಿಕ ಆರೋಗ್ಯಕ್ಕಾಗಿ ಆಯುರ್ವೇದ ನಾವೀನ್ಯತೆ ಕುರಿತು ಮಾಹಿತಿ ನೀಡಿದರು.

ಆಯುಷ್ ಇಲಾಖೆಯಿಂದ ಒಂದು ವಾರದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಹೆಣ್ಣು ಮಕ್ಕಳ ಯೋಗ ಕ್ಷೇಮದಲ್ಲಿ ಆಯುರ್ವೇದದ ಪಾತ್ರ, ಪರಿಸರ ರಕ್ಷಣೆ ಮತ್ತು ಸಸ್ಯ ಹಾಗೂ ಪ್ರಾಣಿಗಳ ಯೋಗ ಕ್ಷೇಮದಲ್ಲಿ ಆಯುರ್ವೇದದ ಪಾತ್ರ ಹಾಗೂ 22-45 ವಯಸ್ಸಿನ ಮಹಿಳೆಯರ ಯೋಗ ಕ್ಷೇಮದಲ್ಲಿ ಆಯುರ್ವೇದದ ಪಾತ್ರ, ಮಾನವನ ಸ್ವಾಸ್ಥ್ಯ ರಕ್ಷಣೆ ಹಾಗೂ ಯೋಗ ಕ್ಷೇಮದಲ್ಲಿ ಆಯುರ್ವೇದದ ಪಾತ್ರ ಮತ್ತು 45 ವರ್ಷ ಮೇಲ್ಪಟ್ಟ ಮಹಿಳೆಯರ ಯೋಗ ಕ್ಷೇಮದಲ್ಲಿ ಆಯುರ್ವೇದದ ಪಾತ್ರಗಳ ಬಗ್ಗೆ ನಡೆಸಲಾದ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.

ಜನ ಸಾಮಾನ್ಯರಲ್ಲಿ ಆಯುರ್ವೇದ ಮತ್ತು ಆಯುಷ್ ಪದ್ಧತಿ ಮಹತ್ವ ತಿಳಿಸಿ ಅರಿವು ಮೂಡಿಸುವ ಉದ್ದೇಶದಿಂದ ಆಯುರ್ವೇದ ದಿನವನ್ನು ಎಲ್ಲೆಡೆ ಆಚರಿಸಲಾಗುತ್ತಿದೆ ಎಂದು ನುಡಿದರು.

ಕೊಡಗಿನಾದ್ಯಂತ ಆಯುಷ್ ಪದ್ಧತಿಯನ್ನು ಮನೆ ಮನೆಗೆ ತಲುಪಿಸುವ ಹಾಗೂ ‘ನನ್ನ ಆರೋಗ್ಯ ನನ್ನ ಹಕ್ಕು’ ಎಂಬ ಅಂತಾರಾಷ್ಟ್ರೀಯ ಆರೋಗ್ಯ ದಿನದ ಘೋಷವಾಕ್ಯದಂತೆ ಕಾರ್ಯ ನಿರ್ವಹಿಸಲು ಶ್ರಮಿಸಲಾಗಿದೆ ಎಂದರು.

ಮೇಕೇರಿ ಸತ್ಯಸಾಯಿ ಮಂದಿರ ಅಧ್ಯಕ್ಷ ಸೋಮಣ್ಣ ಮಾತನಾಡಿ, ಆಯುರ್ವೇದ ಪದ್ಧತಿ ಪ್ರತಿಯೊಬ್ಬರೂ ಅನುಸರಿಸಿ ಆರೋಗ್ಯ ಕಾಪಾಡಿಕೊಳ್ಳುವತ್ತ ಗಮನಹರಿಸಬೇಕು ಎಂದರು.

ಕುಶಾಲನಗರದ ಯೋಗಕ್ಷೇಮ ಆಸ್ಪತ್ರೆಯ ಡಾ. ಶ್ಯಾಮ್ ಭಟ್ ‘ಮಹಿಳಾ ಸಬಲೀಕರಣಕ್ಕಾಗಿ ಆಯುರ್ವೇದ’ ಎಂಬ ವಿಷಯ ಕುರಿತು ಮಾತನಾಡಿ, ‘ಮಹಿಳೆಯರ ಆರೋಗ್ಯ ಕುಟುಂಬದವರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಆದ್ದರಿಂದ ಕುಟುಂಬದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ ಎಂದರು.

ಕುಟುಂಬದಲ್ಲಿ ಗರ್ಭಿಣಿಯರು, ಬಾಣಂತಿಯರು ಇದ್ದಲ್ಲಿ ಅವರ ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವವರು ಹಿರಿಯ ಮಹಿಳೆಯರು ಆಗಿದ್ದಾರೆ. ಆರ್ಯುವೇದದಲ್ಲಿಯೂ ಸಹ ಇದನ್ನೆ ಹೇಳಲಾಗುತ್ತದೆ ಎಂದರು.

ಕೊಡಗು ನೀಮಾ ಸಂಸ್ಥೆ ಅಧ್ಯಕ್ಷ ಡಾ. ರಾಜಾರಾಂ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಆಯುರ್ವೇದಕ್ಕೆ ಜಾಗತಿಕ ಮಾನ್ಯತೆ ದೊರೆತಿರುವುದು ವಿಶೇಷ ಎಂದರು.

ಕೊಡಗು ಜಿಲ್ಲಾ ಆಯುಷ್ ಇಲಾಖೆ ವೈದ್ಯಾಧಿಕಾರಿಗಳು ಇದ್ದರು. ಸುಮಾರು 150 ಜನರು ಕಾರ್ಯಕ್ರಮದ ಉಪಯೋಗ ಪಡೆದುಕೊಂಡರು. ಉಚಿತ ಆರೋಗ್ಯ ತಪಾಸಣೆ ನಡೆಯಿತು. ಯೋಗ ಪ್ರಾತ್ಯಕ್ಷಿಕೆ ಹಾಗೂ ಶ್ರೀ ಧನ್ವಂತರಿ ಹೋಮ ಜರುಗಿತು.

ಉಪ ಮುಖ್ಯ ವೈದ್ಯಾಧಿಕಾರಿ ಡಾ. ಶುಭಾ.ಕೆ.ಜಿ. ಪ್ರಾರ್ಥಿಸಿದರು. ಡಾ. ಸೌಮ್ಯ ನಿರೂಪಿಸಿದರು, ನಿಮಾ ಕೊಡಗು ಸಂಸ್ಥೆ ಸದಸ್ಯ ಡಾ.ರೋಷನ್ ಸ್ವಾಗತಿಸಿದರು.

Share this article