ಕನ್ನಡಪ್ರಭ ವಾರ್ತೆ ಉಡುಪಿ
ಇಂದಿನ ಆಹಾರ ಪದ್ಧತಿ, ಕಲಬೆರಕೆ ಆಹಾರದಿಂದುಂಟಾಗುವ ಆರೋಗ್ಯ ಸಮಸ್ಯೆಗಳಿಗೆ ಆಯುರ್ವೇದ ವೈದ್ಯ ಪದ್ಧತಿಯು ಸೂಕ್ತ ಪರಿಹಾರವಾಗಿದ್ದು, ಅದನ್ನು ಹೆಚ್ಚೆಚ್ಚು ಬಳಸುವಂತೆ ಇನ್ನಷ್ಟು ಪ್ರಚುರಪಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದರು.ಅವರು ಮಂಗಳವಾರ ನಗರದ ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ ಆಶ್ರಯದಲ್ಲಿ ಧನ್ವಂತರಿ ಜಯಂತಿಯ ಅಂಗವಾಗಿ 9ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.ಆಯುರ್ವೇದವು ನಮ್ಮ ಪೂರ್ವಜರ ಆಶೀರ್ವಾದವಾಗಿದ್ದು, ಸಾಂಪ್ರದಾಯಿಕ ವೈದ್ಯ ಪದ್ಧತಿ ಆಯುರ್ವೇದವು ರೋಗ ತಡೆಗಟ್ಟುವುದು ಮಾತ್ರವಲ್ಲ ಅರೋಗ್ಯವನ್ನು ಉತ್ತೇಜಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈ ವ್ಯೆದ್ಯ ಪದ್ಧತಿ ಬಗ್ಗೆ ನಿರ್ಲಕ್ಷ್ಯ ತೋರದೆ ಅದರಿಂದ ದೊರಕುವ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಜಿಲ್ಲೆಯಲ್ಲಿ ಉತ್ತಮ ಆಯುರ್ವೇದ ವೈದ್ಯಕೀಯ ಸೌಲಭ್ಯವಿದ್ದು, ಪ್ರತಿಯೊಬ್ಬರು ಅವುಗಳನ್ನು ಪಾಲಿಸುವ ಮೂಲಕ ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ಹೇಳಿದರು.ಜಿಲ್ಲಾ ಆಯುಷ್ ಅಧಿಕಾರಿ ಡಾ.ಸತೀಶ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ಆಯುಷ್ ಫೆಡರೇಶನ್ ಆಫ್ ಇಂಡಿಯಾ ಉಡುಪಿ ಅಧ್ಯಕ್ಷ ಡಾ. ನಾರಾಯಣ್ ಟಿ. ಅಂಚನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಕುತ್ಪಾಡಿ ಎಸ್‌ಡಿಎಂ ಕಾಲೇಜು ಆಫ್ ಆಯುರ್ವೇದ ಕಾಲೇಜು ಆಸ್ಪತ್ರೆಯ ಉಪನ್ಯಾಸಕಿ ಡಾ. ಧನೇಶ್ವರಿ, ಮಹಿಳಾ ಸಬಲೀಕರಣಕ್ಕಾಗಿ ನಾವಿನ್ಯತೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.ಕಾರ್ಯಕ್ರಮದಲ್ಲಿ ಕೆ.ಜಿ.ಎ.ಎಂ.ಒ.ಎ. ಉಡುಪಿ ಜಿಲ್ಲಾ ಅಧ್ಯಕ್ಷ ಡಾ. ನಾಗರಾಜ್, ಆಯುಷ್ ಆಸ್ಪತ್ರೆಯ ವೈದ್ಯಾಧಿಕಾರಿಗಳು, ಸಿಬ್ಬಂದಿ, ಡಾ. ಜಿ.ಶಂಕರ್ ಕಾಲೇಜಿನ ವಿದ್ಯಾರ್ಥಿನಿಯರು, ಸಾರ್ವಜನಿಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.ಡಾ. ಹೇಮಲತಾ ಸ್ವಾಗತಿಸಿದರು. ಡಾ. ಸರ್ವೋತ್ತಮ ಶೆಟ್ಟಿ ನಿರೂಪಿಸಿದರು. ಹಿರಿಯ ವೈದ್ಯಾಧಿಕಾರಿ ಡಾ. ಶ್ಯಾಮರಾವ್ ವಂದಿಸಿದರು.