ರೈತರಿಗೆ ಆದಾಯ ತಂದು ಕೊಡುವ ಚೆಂಡು ಹೂ

KannadaprabhaNewsNetwork |  
Published : Oct 30, 2024, 12:46 AM IST
ಪೋಟೊ29ಕೆಎಸಟಿ3: ಕುಷ್ಟಗಿ ತಾಲೂಕಿನ ಕೇಸೂರ ಗ್ರಾಮದ ಮರಿಯಪ್ಪ ಭಜಂತ್ರಿ ಇವರು ತೋಟವೊಂದರಲ್ಲಿ ಸಮೃದ್ದವಾಗಿ ಬೆಳೆದಿರುವ ಚೆಂಡು ಹೂ. | Kannada Prabha

ಸಾರಾಂಶ

ದೀಪಾವಳಿ ಬೆಳಕಿನ ಹಬ್ಬದ ಸಡಗರವನ್ನು ಚೆಂಡು ಹೂವಿನ ಚೆಲುವು ಮತ್ತಷ್ಟು ಇಮ್ಮಡಿಗೊಳಿಸುತ್ತದೆ.

ದೀಪಾವಳಿ ಆಚರಣೆಗೆ ಚೆಂಡು ಹೂ ಅತಿಮುಖ್ಯ । ಅಲಂಕಾರದಲ್ಲಿ ಅಗ್ರಸ್ಥಾನ ಗಿಟ್ಟಿಸಿಕೊಂಡಿರುವ ಹೂ

ಪರಶಿವಮೂರ್ತಿ ದೋಟಿಹಾಳ

ಕನ್ನಡಪ್ರಭ ವಾರ್ತೆ ಕುಷ್ಟಗಿ

ದೀಪಾವಳಿ ಬೆಳಕಿನ ಹಬ್ಬದ ಸಡಗರವನ್ನು ಚೆಂಡು ಹೂವಿನ ಚೆಲುವು ಮತ್ತಷ್ಟು ಇಮ್ಮಡಿಗೊಳಿಸುತ್ತದೆ. ಜತೆಗೆ ಲಕ್ಷ್ಮೀ ಪೂಜೆಗೆ ಮುಖ್ಯವಾಗಿ ಅಗತ್ಯವಾದ ಚೆಂಡು ಹೂ ರೈತರ ತೋಟದಲ್ಲಿ ಬೆಳೆದು ನಿಂತಿದ್ದು, ಉತ್ತಮ ಆದಾಯದ ನಿರೀಕ್ಷೆಯಿಟ್ಟಿದ್ದ ರೈತನ ಮುಖದಲ್ಲಿ ಸಂತಸ ಮನೆಮಾಡಿದೆ.

ದೀಪಾವಳಿಯ ಈ ಭಾಗದ ಜನತೆ ಸಂಭ್ರಮದಿಂದ ಆಚರಿಸುವ ಹಬ್ಬವಾಗಿದ್ದು, ಈಗಾಗಲೇ ಪ್ರತಿಯೊಬ್ಬರ ಮನೆಯಲ್ಲಿ ಸಂಭ್ರಮ ಕಂಡು ಬರುತ್ತಿದೆ. ಒಂದೆಡೆ ಮನೆ, ಅಂಗಡಿಗಳಲ್ಲಿ ಹಬ್ಬದಾಚರಣೆಗೆ ಸಿದ್ಧತೆಗಳು ಸಹ ಬಿರುಸಿನಿಂದ ನಡೆದಿವೆ. ಇನ್ನೊಂದೆಡೆ ಸುತ್ತಮುತ್ತಲಿನ ಹಳ್ಳಿಗಳ ಹೊಲಗಳಲ್ಲಿ ಚೆಂಡು, ಸೇವಂತಿ ಹೂವು ಅರಳಿ ನಿಂತಿವೆ. ಹೂವಿನ ಕೊಯ್ಲು ನಡೆಸುವ ರೈತರು ತಾವೆ ಕುಷ್ಟಗಿ, ಇಲಕಲ್, ಗಜೇಂದ್ರಗಡ, ಹುನಗುಂದ ಇನ್ನೂ ಮುಂತಾದ ನಗರಕ್ಕೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಾರೆ.

ದೀಪಾವಳಿ ಅಮಾವಾಸ್ಯೆ ಹಾಗೂ ಪಾಡ್ಯದ ಅಂಗವಾಗಿ ಮನೆಗಳು, ಅಂಗಡಿಗಳಲ್ಲಿ ಮಹಾಲಕ್ಷ್ಮೀ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸುತ್ತಾರೆ. ಅದಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ಹೂವು ಖರೀದಿಸುವುದು ವಾಡಿಕೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಚೆಂಡು ಹೂವಿಗೆ ಒಂದು ಕೆಜಿಗೆ ₹50–60 ಬೆಲೆಯಿದೆ. ಹಬ್ಬ ಸಮೀಪಿಸುತ್ತಿದ್ದು, ಬೆಲೆ ಹೆಚ್ಚಾಗುವ ಸಾಧ್ಯತೆಯೂ ಇದೆ.

ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದ ರೈತರು ಚೆಂಡು ಹೂವು ಬೆಳೆದಿರುವುದರಿಂದ ಮಾರುಕಟ್ಟೆಗೆ ಹೂ ಹೆಚ್ಚಾಗಿ ಬರಲಿದೆ ಎಂದು ಅಂದಾಜಿಸಲಾಗಿದೆ. ಹಾಕಿದ ಬಂಡವಾಳಕ್ಕೆ ಮೋಸವಾಗಲ್ಲ ಎನ್ನುವುದು ರೈತರು ಅಭಿಪ್ರಾಯವಾಗಿದೆ.ಅಲಂಕಾರದಲ್ಲಿ ಅಗ್ರಸ್ಥಾನ:

ದೀಪಾವಳಿ ಹಬ್ಬದಲ್ಲಿ ಮನೆ ಹಾಗೂ ಅಂಗಡಿಯ ಲಕ್ಷ್ಮೀ ಪೂಜೆ, ವಾಹನ ಅಲಂಕಾರಕ್ಕೆ ಹೆಚ್ಚಾಗಿ ಚೆಂಡು ಹೂ ಬಳಸುತ್ತಾರೆ. ಹೀಗಾಗಿ ಇದು ಅಗ್ರಸ್ಥಾನ ಪಡೆದುಕೊಂಡಿದೆ. ಈ ಹೂಗಳ ಮಾಲೆಗಳನ್ನು ವಾಹನ, ಅಂಗಡಿ ಮುಂಗಟ್ಟುಗಳಿಗೆ ಹಾಕಲಾಗುತ್ತದೆ. ಹಬ್ಬದ ಸಂದರ್ಭದಲ್ಲಿ ಈ ಹೂವಿಗೆ ಎಲ್ಲಿಲ್ಲದ ಬೇಡಿಕೆ.ವರದಾನ:

ಕಳೆದ ವರ್ಷ ಬರಗಾಲದಿಂದ ತತ್ತರಿಸಿದ್ದ ಕೆಲವು ರೈತರು ಹೂ ಬೆಳೆದು ಕೈಸುಟ್ಟುಕೊಂಡಿದ್ದರು. ಮಾರುಕಟ್ಟೆಗೆ ಸಾಗಿಸಲಾಗದೆ, ಒಯ್ದರೂ ಕೇಳುವವರಿಲ್ಲದೆ ಹೂವುಗಳನ್ನು ತಿಪ್ಪೆಗೆ ಎಸೆದಿದ್ದರು. ಆದರೆ ಈ ವರ್ಷ ಉತ್ತಮ ಮಳೆ ಸುರಿದಿದ್ದು, ಉತ್ತಮ ಬೆಳೆ ಬಂದಿದೆ. ಬೆಲೆಯೂ ಸಹಿತ ಉತ್ತಮವಾಗಿದೆ. ಈ ವರ್ಷದ ದೀಪಾವಳಿಯು ಚೆಂಡು ಹೂ ಬೆಳೆಗಾರರಿಗೆ ವರದಾನವಾಗುವ ಆಸೆ ಮೂಡಿಸಿದೆ.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ