ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ನಮ್ಮೆಲ್ಲರ ಆದ್ಯ ಕರ್ತವ್ಯ: ನ್ಯಾ.ಬನಸೋಡೆ

KannadaprabhaNewsNetwork | Published : Oct 30, 2024 12:45 AM

ಸಾರಾಂಶ

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ ಬೀದರ್

ಭಾರತ ದೇಶ ವಿಶಾಲವಾದ ದೇಶ, ದೇಶದ ಅಭಿವೃದ್ಧಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವುದರಿಂದ ಭ್ರಷ್ಟಾಚಾರ ನಿರ್ಮೂಲನೆ ಮಾಡುವುದು ನಮ್ಮೆಲ್ಲರ ಕರ್ತವ್ಯ ವಾಗಿದೆ. ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸಿಜೆಎಂ ಮತ್ತು ಬೀದರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಕಾಶ ಎ.ಬನಸೋಡೆ ಹೇಳಿದರು.

ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೀದರ್‌, ಜಿಲ್ಲಾಡಳಿತ, ಜಿ.ಪಂ, ಪೊಲೀಸ್ ಇಲಾಖೆ, ಕರ್ನಾಟಕ ಲೋಕಾ ಯುಕ್ತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೀದರ ಇವರುಗಳ ಸಂಯುಕ್ತಾಶ್ರಯದಲ್ಲಿ ಅ. 29ರಿಂದ ನ.4ರ ವರೆಗೆ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ -2024 (ಸತ್ಯನಿಷ್ಟ ಸಂಸ್ಕೃತಿಗೆ ರಾಷ್ಟ್ರದ ಸಮೃದ್ಧಿ) ಕಾರ್ಯಕ್ರಮ ಭ್ರಷ್ಠಾಚಾರ ನಿರ್ಮೂಲನೆ ಕುರಿತು ಅಧಿಕಾರಿ ಮತ್ತು ಸಿಬ್ಬಂದಿಗೆ ಪ್ರತಿಜ್ಞಾವಿಧಿ ಬೋಧಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಗತ್ತಿನಲ್ಲಿ ಭಾರತವು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿದೆ. ನಾವು ಸ್ವೀಕರಿಸಿದ ಪ್ರತಿಜ್ಞಾ ವಿಧಿಯಂತೆ ಭ್ರಷ್ಟಾಚಾರ ನಿರ್ಮೂಲನೆಗೆ ನಾವೆಲ್ಲರೂ ಸಜ್ಜಾಗಬೇಕಿದೆ. ನಮ್ಮ ನಿಮ್ಮೆಲ್ಲರ ಕರ್ತವ್ಯ ಕೂಡ ಆಗಿದೆ. ಭ್ರಷ್ಟಾಚಾರ ದೇಶದ ಪಿಡುಗು, ಭ್ರಷ್ಟಾಚಾರ ನಿಯಂತ್ರಿಸಲು ಸಿಬಿಐ, ಲೋಕಾಯುಕ್ತ, ಇಡಿ ಎಂತಹ ಸಂಸ್ಥೆಗಳು ಕೆಲಸ ಮಾಡುತ್ತಿವೆ. ನಾವೆಲ್ಲರೂ ಕರ್ತವ್ಯ ನಿಷ್ಠೆಯಿಂದ ಕೆಲಸ ಮಾಡೋಣ ಎಂದರು.

ವಿಶೇಷ ಆಹ್ವಾನಿತರಾಗಿ ಆಗಮಿಸಿದ ಕಲಬುರಗಿ ಲೋಕಾಯುಕ್ತ ಎಸ್.ಪಿ. ಉಮೇಶ ಬಿ.ಕೆ. ಅವರು ಮಾತನಾಡಿ, ಸರ್ಕಾರದ ಎಲ್ಲಾ ಸೇವೆಗಳು ಅಭಿವೃದ್ಧಿ ಕಾರ್ಯಗಳನ್ನು ಸರ್ಕಾರಿ ನೌಕರರು ಜನರಿಗೆ ಪ್ರಮಾಣಿಕವಾಗಿ ತಲುಪುವಂತೆ ಮಾಡಿದಾಗ ದೇಶ ಅಭಿವೃದ್ಧಿ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.

ನಾವೆಲ್ಲರೂ ಸಾರ್ವಜನಿಕ ಸೇವೆಯನ್ನು ಉತ್ತಮವಾಗಿ ನಿರ್ವಹಿಸಬೇಕು. ಸಾರ್ವಜನಿಕರ ಸೇವೆಗಳು ನಿಗಧಿತ ವೇಳೆಗೆ ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ಮಾಡಬೇಕು ಎಂದೂ ಹೇಳಿದರು.

ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಮಾತನಾಡಿ, ಎಲ್ಲರೂ ಕೈ ಜೋಡಿಸಿ ಒಳ್ಳೆಯ ಕೆಲಸ ಮಾಡಿದರೆ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಉತ್ತಮ ಹೆಸರು ಬರಲು ಸಾಧ್ಯ.

ನಾವು ಉತ್ತಮ ಸಾಧನೆ ಮಾಡಿದಾಗ ಮಾತ್ರ ನಮ್ಮ ಹೆಸರು ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟರು.

ಈ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ, ಸಹಾಯಕ ಆಯುಕ್ತರಾದ ಎಂ.ಡಿ.ಶಕೀಲ್, ಲೋಕಾಯುಕ್ತ ಡಿವೈಎಸ್ಪಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.ಎಲ್ಲಾ ಸರ್ಕಾರಿ ನೌಕರರು ಸರ್ಕಾರದ ಆಶಯದಂತೆ ಪ್ರಾಮಾಣಿಕ, ನಿಷ್ಠೆ, ಬದ್ಧತೆಯಿಂದ ತಮ್ಮ ಕೆಲಸಗಳನ್ನು ಕಾರ್ಯನಿರ್ವಹಿಸಿದ್ದಲ್ಲಿ ಒಳ್ಳೆಯ ಹೆಸರು ತರಲು ಸಾಧ್ಯ. ಯಾವುದೇ ಒಬ್ಬ ನೌಕರ ತನ್ನನ್ನು ತಾನು ಮೊದಲು ಸುಧಾರಿಸಿಕೊಳ್ಳಬೇಕು ತಮ್ಮ ಮನೆಯಿಂದಲೇ ಒಳ್ಳೆಯ ಕಾರ್ಯ ಆರಂಭಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹೇಳಿದರು.

Share this article