ಒಡೆದಿದ್ದ ದೇಶವನ್ನು ಒಗ್ಗೂಡಿಸಿದವರು ಪಟೇಲ್‌: ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್

KannadaprabhaNewsNetwork | Published : Oct 30, 2024 12:45 AM

ಸಾರಾಂಶ

543 ಸಂಸ್ಥಾನಗಳನ್ನು ಭಾರತದ ಒಕ್ಕೂಟದೊಳಗೆ ಸೇರಿಸಲು ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡಿದವರು, ಮತ್ತೆ ಒಂದು ಸಂಕಲ್ಪದೊಡನೆ ಕೆಲಸ ಮಾಡಿದವರು ಸರ್ದಾರ್ ವಲ್ಲಭಾಯಿ ಪಟೇಲರು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಹೇಳಿದರು. ಚಾಮರಾಜನಗರದಲ್ಲಿ ದೇಶ ಏಕತೆಗಾಗಿ ಓಟ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.

ಸರ್ದಾರ್‌ ಪಟೇಲ್‌ ಜನ್ಮದಿನ । ಬಿಜೆಪಿಯಿಂದ ದೇಶದ ಏಕತೆಗಾಗಿ ಏಕತಾ ಓಟ । ಡಾ.ಬಿ.ಆರ್‌.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಭಾರತ ದೇಶ ಸ್ವತಂತ್ರವಾದಾಗ 543 ಸಂಸ್ಥಾನಗಳಾಗಿ ಹರಿದು ಹಂಚಿ ಹೋಗಿತ್ತು. ಈ 543 ಸಂಸ್ಥಾನಗಳನ್ನು ಭಾರತದ ಒಕ್ಕೂಟದೊಳಗೆ ಸೇರಿಸಲು ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡಿದವರು, ಮತ್ತೆ ಒಂದು ಸಂಕಲ್ಪದೊಡನೆ ಕೆಲಸ ಮಾಡಿದವರು ಸರ್ದಾರ್ ವಲ್ಲಭಾಯಿ ಪಟೇಲರು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಹೇಳಿದರು.

ಸರ್ದಾರ್ ವಲ್ಲಭಾಯಿ ಪಟೇಲ್ ಜನ್ಮ ದಿನದ ಪ್ರಯುಕ್ತ ನಗರದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಿದ್ದ ದೇಶ ಏಕತೆಗಾಗಿ ಓಟ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.

ಬಿಜೆಪಿ ಇಡೀ ದೇಶದಾದ್ಯಂತ ನಮ್ಮ ರಾಷ್ಟ್ರದ ಪ್ರಥಮ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ದೇಶ ಐಕ್ಯತೆ, ಸಮಾನತೆ, ಸಾರ್ವಭೌಮ ಸಂದೇಶ ಸಾರುವ ಒಂದು ದೇಶ ಏಕತೆಗಾಗಿ ಓಟ ಕಾರ್ಯಕ್ರಮವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸೂಚನೆ ಮೇರೆಗೆ ಅಯೋಜಿಸಿದ್ದು, ಚಾಮರಾಜನಗರದಲ್ಲೂ ಯಶ್ವಸಿಯಾಗಿ ನಡೆಸಲಾಗಿದೆ ಎಂದು ಹೇಳಿದರು.

ಸರ್ದಾರ್‌ ವಲ್ಲಭಾಯಿ ಪಟೇಲ್‌, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ಇವೆರಡೂ ಸೇರಿ ಏಕ ಭಾರತವಾಗಿದೆ. ಸರ್ದಾರ್ ಪಟೇಲ್ ಅವರ ಜಾಗದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ದೇಶವನ್ನು ಅಷ್ಟು ಸುಲಭವಾಗಿ ಸಂಘಟಿಸಿ ಏಕ ಭಾರತ ಮಾಡಲು ಕಷ್ಟವಾಗುತ್ತಿತ್ತು ಎಂದು ಅಭಿಪ್ರಾಯಪಟ್ಟರು.

543 ಸಂಸ್ಥಾನಗಳು ಭಾರತದ ಒಕ್ಕೂಟದೊಳಗೆ ಸೇರಬೇಕೆಂದು ತೀರ್ಮಾನ ಮಾಡಿದಾಗ ಹೈದರಾಬಾದ್ ಕರ್ನಾಟಕ, ಜಮ್ಮು ಕಾಶ್ಮೀರ ಸಂಸ್ಥಾನಗಳು ಅಡ್ಡಿಪಡಿಸಿದವು. ಹೈದರಬಾದ್ ಕರ್ನಾಟಕವನ್ನು ಪಾಕಿಸ್ತಾನಕ್ಕೆ ಸೇರಿಸುತ್ತೇನೆ ಎಂದು ಹೈದರಬಾದ್ ನಿಜಾಂ ನಿರ್ಣಯ ಕೈಗೊಂಡಾಗ ಸರ್ದಾರ್‌ ವಲ್ಲಭಾಯಿ ಪಟೇಲ್‌, ಜವಾಹರ್‌ ಲಾಲ್ ನೆಹರು ಅವರು ಮಿಲಿಟರಿ ಕಳುಹಿಸಿ ಹೈದರಾಬಾದ್ ಕರ್ನಾಟಕವನ್ನು ಬಲವಂತವಾಗಿ ಭಾರತ ದೇಶದ ಒಕ್ಕೂಟದೊಳಗೆ ಸೇರಿಸಿದರು ಎಂದರು.

ಹೈದರಾಬಾದ್ ಕರ್ನಾಟಕ ಸ್ವತಂತ್ರವಾಗಿದ್ದರೆ ದಕ್ಷಿಣ ಕರ್ನಾಟಕ ಏನಾಗುತ್ತಿತ್ತು ಎಂದು ಊಹೆ ಮಾಡಿಕೊಳ್ಳಿ. ಆದರೆ ದುರಂತ ಎಂದರೆ ಜಮ್ಮು ಕಾಶ್ಮೀರವನ್ನು ಭಾರತ ದೇಶದ ಒಕ್ಕೂಟದೊಳಗಡೆ ಸೇರಿಸಿಕೊಂಡರೂ ಸಹ ಅಂದಿನ ಕಾಂಗ್ರೆಸ್ ಸರ್ಕಾರ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕೊಡುವ 370ರ ಅನುಚ್ಛೇದವನ್ನು ಸಂವಿಧಾನದಲ್ಲಿ ಸೇರಿಸಿದರು. ನೆಹರು ಅವರು ಇದನ್ನು ಸೇರಿಸುವಾಗ ಅಂಬೇಡ್ಕರ್ ಅವರು ವಿರೋಧಿಸಿದರು.ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ 370ರ ಅನುಚ್ಛೇದ ರದ್ದುಪಡಿಸಿದರು. ಜಮ್ಮು ಕಾಶ್ಮೀರವನ್ನು ಭಾರತದ ಒಕ್ಕೂಟದೊಳಗೆ ಸೇರಿಸಿದ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ ಎಂದರು.

ನಗರದ ಚಾಮರಾಜೇಶ್ವರ ದೇವಸ್ಥಾನದಿಂದ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್‌, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಅವರ ನೇತೃತ್ವದಲ್ಲಿ ಆರಂಭವಾದ ಏಕತಾ ಓಟ ಜಿಲ್ಲಾಡಳಿತ ‌ಭವನಕ್ಕೆ ತಲುಪಿತು. ಅಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಮಾರ್ಲಾಪಣೆ ಮಾಡುವ ಮೂಲಕ ಮುಕ್ತಾಯವಾಯಿತು..

ನಗರಸಭಾ ಅಧ್ಗಕ್ಷ ಸುರೇಶ್, ಬಿಜೆಪಿ ನಗರಮಂಡಲ ಅಧ್ಯಕ್ಷ ಶಿವರಾಜ್, ಜಿಲ್ಲಾ ಉಪಾಧ್ಯಕ್ಷ ವಿರಾಟ್ ಶಿವು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊನ್ನೂರು ಮಹದೇವಸ್ವಾಮಿ, ಯಳಂದೂರು ಮಂಡಲ ಅಧ್ಯಕ್ಷ ಅನಿಲ್, ನಗರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಕೂಸಣ್ಣ, ಮಹೇಶ್, ಎಸ್ ಟಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಜಯಸುಂದರ್, ಜಿಲ್ಲಾ ಉಪಾಧ್ಯಕ್ಷ ಬುಲೆಟ್ ಚಂದ್ರು, ನಗರಸಭಾ ಮಾಜಿ ಸದಸ್ಯ ಶಿವಣ್ಣ, ಜಿಲ್ಲಾ ಮಾಧ್ಯಮ ಸಹ ಪ್ರಮುಖ್ ಶಿವಣ್ಣ ರಾಮಸಮುದ್ರ, ಯುವ ಮೋರ್ಚಾದ ಅಧ್ಯಕ್ಷ ಸೂರ್ಯ, ಪ್ರಧಾನ ಕಾರ್ಯದರ್ಶಿ ಆನಂದ್ ಭಗೀರಥ, ಚಾಮುಲ್ ಮಾಜಿ ನಿರ್ದೇಶಕ ಕಿಲಗೆರೆ ಬಸವರಾಜು, ಮಾರ್ಕೆಟ್ ಕುಮಾರ್, ಸುದರ್ಶನ್ ಆಳ್ವಾ, ನಾಗೇಂದ್ರಬಾಬು, ಸಿ.ವಿ.ಮಣಿಕಂಠ, ಬಂಗಾರನಾಯಕ, ಮಹದೇವಸ್ವಾಮಿ ಭಾಗವಹಿಸಿದ್ದರು.

Share this article