ಆಯುರ್ವೇದ ಚಿಕಿತ್ಸಾ ಪದ್ಧತಿ ಮಾನವನ ಆರೋಗ್ಯಕ್ಕೆ ವರದಾನ: ಎಚ್.ಆರ್.ವಿಶ್ವನಾಥ್

KannadaprabhaNewsNetwork | Published : Jul 17, 2024 12:54 AM

ಸಾರಾಂಶ

ಆರೋಗ್ಯ ಭಾಗ್ಯಕ್ಕಿಂತ ಮಿಗಿಲಾದ ಭಾಗ್ಯ ಯಾವುದು ಇಲ್ಲ. ಶ್ರೀಸಾಮಾನ್ಯರು ಹಾಗೂ ಗ್ರಾಮೀಣ ಜನರು ಶಿಸ್ತುಬದ್ಧ ಜೀವನದ ಜೊತೆಗೆ ಸೊಪ್ಪು ತರಕಾರಿಗಳು, ಹಣ್ಣು, ಹಾಲು ಮೊಟ್ಟೆ ಸೇರಿದಂತೆ ಪೌಷ್ಟಿಕಾಂಶಗಳಿಂದ ಕೂಡಿರುವ ಆಹಾರ ಪದಾರ್ಥಗಳನ್ನು ನಿಯಮಿತವಾಗಿ ಸೇವಿಸಿ ತಮ್ಮ ಅಮೂಲ್ಯವಾದ ಆರೋಗ್ಯವನ್ನು ಕಾಪಾಡಿಕೊಂಡು ನೆಮ್ಮದಿಯ ಜೀವನ ನಡೆಸಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಯಾವುದೇ ಅಡ್ಡಪರಿಣಾಮ ಬೀರದ ಆಯುರ್ವೇದ ಚಿಕಿತ್ಸಾ ಪದ್ಧತಿಯು ಮಾನವನ ಆರೋಗ್ಯ ಸಂವರ್ಧನೆಗೆ ವರದಾನವಾಗಿದೆ ಎಂದು ಪುರಸಭೆ ಮಾಜಿ ಸದಸ್ಯ ಎಚ್.ಆರ್.ವಿಶ್ವನಾಥ್ ಅಭಿಪ್ರಾಯಪಟ್ಟರು.

ಪುರಸಬಾ ವ್ಯಾಪ್ತಿಯ ಹೊಸಹೊಳಲು ಗ್ರಾಮದ ಆಯುರ್ವೇದ ಆಸ್ಪತ್ರೆಯಲ್ಲಿ ಹಿರಿಯ ನಾಗರಿಕರಿಗೆ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆರೋಗ್ಯ ದೇವತೆ ಧನ್ವವಂತರಿ ಭಾವಚಿತ್ರಕ್ಕೆ ವಿಶೇಷ ಪೂಜೆ ಮಾತನಾಡಿದರು.

ಆರೋಗ್ಯ ಭಾಗ್ಯಕ್ಕಿಂತ ಮಿಗಿಲಾದ ಭಾಗ್ಯ ಯಾವುದು ಇಲ್ಲ. ಶ್ರೀಸಾಮಾನ್ಯರು ಹಾಗೂ ಗ್ರಾಮೀಣ ಜನರು ಶಿಸ್ತುಬದ್ಧ ಜೀವನದ ಜೊತೆಗೆ ಸೊಪ್ಪು ತರಕಾರಿಗಳು, ಹಣ್ಣು, ಹಾಲು ಮೊಟ್ಟೆ ಸೇರಿದಂತೆ ಪೌಷ್ಟಿಕಾಂಶಗಳಿಂದ ಕೂಡಿರುವ ಆಹಾರ ಪದಾರ್ಥಗಳನ್ನು ನಿಯಮಿತವಾಗಿ ಸೇವಿಸಿ ತಮ್ಮ ಅಮೂಲ್ಯವಾದ ಆರೋಗ್ಯವನ್ನು ಕಾಪಾಡಿಕೊಂಡು ನೆಮ್ಮದಿಯ ಜೀವನ ನಡೆಸಬೇಕು ಎಂದರು.

ಆಯುರ್ವೇದ ಚಿಕಿತ್ಸಾ ಪದ್ಧತಿ ಮೂಲಕ ತಯಾರಿಸಿದ ಮಾತ್ರೆಗಳು ಹಾಗೂ ಚೂರ್ಣಗಳು ನಮ್ಮ ಆರೋಗ್ಯ ಸಂವರ್ಧನೆಗೆ ವರದಾನವಾಗಿದೆ. ಅಲ್ಲದೇ, ಯಾವುದೇ ಅಡ್ಡ ಪರಿಣಾಮ ಬೀರದೆ ಆರೋಗ್ಯದ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಎಂದರು.

ಗ್ರಾಮೀಣ ಜನರು ಹಾಗೂ ಹಿರಿಯ ನಾಗರಿಕರು ತಮ್ಮ ಮನೆಯ ಬಾಗಿಲಿನಲ್ಲಿಯೇ ದೊರೆಯುತ್ತಿರುವ ಗುಣಮಟ್ಟದ ಆಯುರ್ವೇದ ಚಿಕಿತ್ಸೆ ಪಡೆದುಕೊಂಡು ನೂರ್ಕಾಲ ಆರೋಗ್ಯವಂತರಾಗಿ ನೆಮ್ಮದಿಯ ಜೀವನ ನಡೆಸುವಂತೆ ಮನವಿ ಮಾಡಿದರು.

ಪುರಸಭೆ ಮಾಜಿ ಸದಸ್ಯ ಕೆ.ಆರ್.ನೀಲಕಂಠ ಮಾತನಾಡಿದರು. ಆಯುರ್ವೇದ ಚಿಕಿತ್ಸಾ ಪದ್ಧತಿ ಹಾಗೂ ಮನೆ ಮದ್ದಾಗಿ ಬಳಸುವ ಔಷಧೀಯ ಸಸ್ಯಗಳ ಮಾಹಿತಿ ಒಳಗೊಂಡಿರುವ ಪುಸ್ತಕವನ್ನು ವಿತರಿಸಲಾಯಿತು. ಈ ವೇಳೆ ತಾಲೂಕು ಆಯುಷ್ ವೈದ್ಯಾಧಿಕಾರಿ ಡಾ.ಲೋಕೇಶ್, ತಜ್ಞ ವೈದ್ಯರಾದ ಡಾ.ಚಂದ್ರಶೇಖರ್, ತಾಲೂಕು ಹಿರಿಯ ನಾಗರಿಕರ ಸಂಘದ ಉಪಾಧ್ಯಕ್ಷ ಪೋಸ್ಟ್ ಕೃಷ್ಣೇಗೌಡ, ನೇಕಾರ ಕುರುಹಿನಶೆಟ್ಟಿ, ಸಮಾಜದ ಮುಖಂಡ ಎಚ್.ಆರ್.ರಾಜೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Share this article