ಚಿತ್ರದುರ್ಗ: ನಾವೂ ವೈದ್ಯರೇ, ನಮ್ಮನ್ನೇಕೆ ನಕಲಿ ಅಂತ ಕರೆದು ಅವಮಾನ ಮಾಡ್ದೀರಾ? ದಾಳಿ ಮಾಡಿ ಮಾನಸಿಕವಾಗಿ ಹಿಂಸೆ ಕೊಡುತ್ತೀರಾ.
ಆಯುಷ್ ವೈದ್ಯರು ಗುರುವಾರ ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಹೊರ ಹಾಕಿದ ತಣ್ಣನೆ ಆಕ್ರೋಶವಿದು. ಆರೋಗ್ಯ ಇಲಾಖೆ ಮೇಲಧಿಕಾರಿಗಳು ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸುತ್ತಿರುವ ಕ್ರಮಕ್ಕೆ ಪ್ರತಿರೋಧ ಒಡ್ಡುವ ಕಾರಣಕ್ಕೆ ಎಲ್ಲರೂ ಧಾವಿಸಿ ಬಂದಿದ್ದರು. ಯಾರು ನಕಲಿಯೋ ಅವರ ಮೇಲೆ ಕ್ರಮ ಕೈಗೊಳ್ಳಿ, ಆದರೆ ಎಲ್ಲರಿಗೂ ನಕಲಿ ಪಟ್ಟ ಕಟ್ಟಬೇಡಿ ಎಂದು ಆಗ್ರಹಿಸಿದರು.ಆಯುಷ್ ಫೆಡರೇಷನ್ ಆಫ್ ಇಂಡಿಯಾ ಜಿಲ್ಲಾ ಶಾಖೆಯಿಂದ ಒಟ್ಟಾಗಿ ಬಂದಿದ್ದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಕರ್ನಾಟಕ ಪ್ರಾಕ್ಟಿಷನರ್ ಮೆಡಿಕಲ್ ಎಸ್ಟಾಬ್ಲಿಷ್‍ಮೆಂಟ್ ಕಾಯ್ದೆಯನ್ವಯ ನೋಂದಣಿ ಮಾಡಿಸಿಕೊಂಡು ಪ್ರಾಕ್ಟೀಸ್ ಮಾಡುತ್ತಿದ್ದೇವೆ. ನೊಂದಣಿಯಾಗಿರುವ ವೈದ್ಯರ ಮೇಲೆ ದಾಳಿ ನಡೆಸಿ ನಕಲಿ ಎನ್ನುತ್ತಿರುವುದು ನಿಲ್ಲಬೇಕು ಎಂದು ಆಗ್ರಹಿಸಿದರು.
ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸುವ ಸಂದರ್ಭದಲ್ಲಿ ವೈದ್ಯರುಗಳೆನ್ನುವ ಗೌರವ ಕೊಡದೆ ಕೈಗೆ ಸಿಕ್ಕ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿಯಾಗಿಸಿ ಕಿರುಕುಳ ನೀಡುತ್ತಿದ್ದಾರೆ. ಇದು ತರವಲ್ಲದ ನಡವಳಿಕೆಯಾಗಿದ್ದು, ವೈದ್ಯಕೀಯ ಲೋಕಕ್ಕೆ ಅಪಮಾನ ಮಾಡಿದಂತಾಗುತ್ತದೆ. ಎಷ್ಟು ದಿನ ಅಂತ ನಾವು ದಾಳಿ ಸಹಿಸಿಕೊಂಡು ಇರುವುದು. ವೈದ್ಯರ ಕುಂದುಕೊರತೆ ವಿಚಾರಣಾ ಸಮಿತಿಗೆ ಆಯುಷ್ ಹಾಗೂ ಆಯುರ್ವೇದ ವ್ಯದ್ಯರೊಬ್ಬರನ್ನು ನೇಮಕ ಮಾಡಿಕೊಳ್ಳಬೇಕೆಂದು " ಪ್ರತಿಭಟನೆ ನೇತೃತ್ವವಹಿಸಿದ್ದ ಆಯುಷ್ ಫೆಡರೇಷನ್ ಆಫ್ ಇಂಡಿಯಾ ಜಿಲ್ಲಾ ಶಾಖೆ ಅಧ್ಯಕ್ಷ ಡಾ.ಗೋಪಾಲಕೃಷ್ಣ ಜಿ.ಎಸ್. ಆಗ್ರಹಿಸಿದರು.ಆಯುಷ್ ಫೆಡರೇಷನ್ ಆಫ್ ಇಂಡಿಯಾ ಜಿಲ್ಲಾ ಶಾಖೆಯ ಕಾರ್ಯದರ್ಶಿ ಡಾ.ಮಹಮದ್ ಖಾಸಿಂ, ಆಯುಷ್ ವೈದ್ಯರಾದ ಲಿಂಗದೊರೆ, ಪ್ರಶಾಂತ್,ಪಿ.ಎಂ ಮಂಜುನಾಥ, ಜ್ಯೋತಿ ಮಂಜುನಾಥ್, ಸಿರಿಯಣ್ಣ, ಉಮೇಶ್, ಶಂಕರ್‍ನಾರಾಯಣ್, ದಿವ್ಯ ಸೇರಿದಂತೆ ನೂರಾರು ವೈದ್ಯರುಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಕ್ಲಿನಿಕ್‍ಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ನಕಲಿ ವೈದ್ಯರುಗಳೆಂದು ಬಿಂಬಿಸುವ ನಡೆಗೆ ಬ್ರೇಕ್ ಹಾಕುವಂತೆ ಆಗ್ರಹಿಸಿ ಆಯುಷ್ ವೈದ್ಯರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.