ಜೈನ ಪರಂಪರೆಗಳ ಕುರಿತು ನಿಖರ ಅಧ್ಯಯನ ನಡೆಯಲಿ

KannadaprabhaNewsNetwork |  
Published : Jan 12, 2024, 01:46 AM IST
11ಡಿಡಬ್ಲೂಡಿ2ಜೆಎಸ್ಎಸ್ ಡಿ.ಆರ್.ಎಚ್. ಸಭಾಭವನದಲ್ಲಿ ನಡೆದ ‘ಜೈನಧರ್ಮ, ಸಾಹಿತ್ಯ ಮತ್ತು ಸಂಸ್ಕೃತಿ’ ಎಂಬ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಡಾ. ಶಾಂತಿನಾಥ ದಿಬ್ಬದ ಮಾತನಾಡಿದರು.  | Kannada Prabha

ಸಾರಾಂಶ

ಜೈನ ಧರ್ಮ ಕರ್ನಾಟಕಕ್ಕೆ ಉತ್ತರ ಭಾರತದಿಂದ ಬಂದದ್ದು, ಆದರೆ ಕರ್ನಾಟಕದಲ್ಲಿ ಜೈನ ಧರ್ಮದ ಪ್ರಯೋಗಗಳು ಉತ್ತರ ಭಾರತಕ್ಕಿಂತ ಭಿನ್ನವಾಗಿವೆ. ಒಂದು ಅಂದಾಜಿನ ಪ್ರಕಾರ 450ಕ್ಕೂ ಹೆಚ್ಚು ಕವಿಗಳು 520ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ. ಪ್ರತಿಯೊಂದು ಕೃತಿಯೂ ತನ್ನದೇ ವೈಶಿಷ್ಟ್ಯತೆ ಹೊಂದಿದೆ.

ಧಾರವಾಡ: ಜೈನ ಪರಂಪರೆಗಳ ಕುರಿತಾದ ನಿಖರವಾದ ಅಧ್ಯಯನ ನಡೆಯಬೇಕಿದೆ. ಅದಕ್ಕಾಗಿ ಹೊಸ ತಲೆಮಾರಿನ ಸಂಶೋಧಕರು ವಿಭಿನ್ನ ಆಯಾಮಗಳಲ್ಲಿ ಅಭ್ಯಸಿಸುವ ಕ್ರಮ ರೂಢಿಸಿಕೊಳ್ಳಬೇಕು ಎಂದು ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವಿಶ್ರಾಂತ ಕುಲಸಚಿವ ಡಾ. ಶಾಂತಿನಾಥ ದಿಬ್ಬದ ಹೇಳಿದರು.

ಜೆಎಸ್ಸೆಸ್ ಡಿ.ಆರ್.ಎಚ್. ಸಭಾಭವನದಲ್ಲಿ ಜೆಎಸ್ಸೆಸ್ ಡಾ. ಡಿ.ವೀರೇಂದ್ರ ಹೆಗ್ಗಡೆ ಸಂಶೋಧನಾ ಕೇಂದ್ರ ಹಾಗೂ ಬಸು ಪ್ರಕಾಶನದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಜೈನಧರ್ಮ, ಸಾಹಿತ್ಯ ಮತ್ತು ಸಂಸ್ಕೃತಿ ಎಂಬ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ನುಡಿಗಳನ್ನು ಆಡಿದ ಅವರು, ಕ್ರಿಪೂ ಕಾಲಘಟ್ಟದಲ್ಲಿಯೇ ಭಾರತೀಯ ಪರಂಪರೆಯಲ್ಲಿ ಜೈನ ಧರ್ಮದ ಪ್ರಭಾವ ಸಾಕಷ್ಟಿತ್ತು. ಸಾಮಾನ್ಯವಾಗಿ ಪ್ರಾಚೀನ ಜೈನ ಕಾವ್ಯಗಳಲ್ಲಿ ಅಂದಿನ ರಾಜಕೀಯ, ಆಡಳಿತ, ಧರ್ಮ, ಸಂಸ್ಕೃತಿ ಮುಂತಾದ ವಿಷಯಗಳು ಕಾಣ ಸಿಗುತ್ತವೆ. ಅಂದಿನ ಕಾಲದ ಅಧ್ಯಯನಕ್ಕೆ ಪ್ರಾಚೀನ ಜೈನ ಕಾವ್ಯಗಳು ಪೂರಕವಾಗಿವೆ. ಜೈನ ನಂಬಿಕೆಯ ಪ್ರಕಾರ ಜೈನ ಧರ್ಮವು ಶಾಶ್ವತ ಮತ್ತು ಸಾರ್ವತ್ರಿಕವಾಗಿದೆ. ಇದು ಎಲ್ಲ ಜಾತಿ ಮತ್ತು ವರ್ಗದ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳು, ದೇವತೆಗಳು ಮತ್ತು ನರಕದಲ್ಲಿರುವ ಆತ್ಮಗಳಿಗೂ ಮುಕ್ತವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬಳ್ಳಾರಿ ಕೃಷ್ಣದೇವರಾಯ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಸಿದ್ದು ಅಲಗೂರ, ಜೈನ ಧರ್ಮ ಕರ್ನಾಟಕಕ್ಕೆ ಉತ್ತರ ಭಾರತದಿಂದ ಬಂದದ್ದು, ಆದರೆ ಕರ್ನಾಟಕದಲ್ಲಿ ಜೈನ ಧರ್ಮದ ಪ್ರಯೋಗಗಳು ಉತ್ತರ ಭಾರತಕ್ಕಿಂತ ಭಿನ್ನವಾಗಿವೆ. ಒಂದು ಅಂದಾಜಿನ ಪ್ರಕಾರ 450ಕ್ಕೂ ಹೆಚ್ಚು ಕವಿಗಳು 520ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ. ಪ್ರತಿಯೊಂದು ಕೃತಿಯೂ ತನ್ನದೇ ವೈಶಿಷ್ಟ್ಯತೆ ಹೊಂದಿದೆ. ಇಂತಹ ವಿಶೇಷಗಳನ್ನು ಪುನರ್ ಅವಲೋಕಿಸುವ ವಿಚಾರ ಸಂಕಿರಣಗಳು ಮತ್ತೆ-ಮತ್ತೆ ನಡೆಯಬೇಕು ಎಂದರು.

ಸಂಯೋಜನಾಧಿಕಾರಿ ಡಾ. ಜೆ.ಎ. ಹಡಗಲಿ, ಸಂಶೋಧನಾ ಮಾರ್ಗದರ್ಶಕ ಡಾ. ವೈ.ಎಂ. ಭಜಂತ್ರಿ, ಡಾ. ಬಿ.ಜಿ. ಬಿರಾದಾರ, ಡಾ.ಎಚ್.ವಿಷ್ಣುವರ್ಧನ, ಡಾ. ವಿ.ಜಿ. ಪೂಜಾರ, ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಅಧ್ಯಾಪಕ ಡಾ. ಶಿವಾನಂದ ಟವಳಿ, ದೀಪಾ ಸಂಕಪಾಳೆ, ಬಸಲಿಂಗಪ್ಪ ಅರವಳದ, ಧಾರವಾಡ ಜೈನ ಮಿಲನ್‌ದ ಪದಾಧಿಕಾರಿಗಳಾದ ಸುಜಾತಾ ಹಡಗಲಿ, ಸಂಗೀತಾ ಉಪಾಧ್ಯೆ, ಸುನಂದಾ ವರೂರ ಇದ್ದರು.

ಪ್ರಬಂಧ ಮಂಡನಕಾರರಾಗಿ ಆಗಮಿಸಿದ್ದ ಡಾ.ಅಕ್ಕಮಹಾದೇವಿ ರೊಟ್ಟಿಮಠ, ಶಮಂತಕುಮಾರ ಕೆ.ಎಸ್. ತಮ್ಮ ಅಭಿಪ್ರಾಯ ಹಂಚಿಕೊಂಡರು. ಡಾ. ವಿ.ಜಿ. ಪೂಜಾರ ನಿರೂಪಿಸಿದರು. ಡಾ. ಸಂಗಯ್ಯಾ ಶಿವಪ್ಪಯ್ಯನಮಠ ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೀದಿನಾಯಿಗಳ ಕೊರಳಲ್ಲಿ ದೇವರಾಜೇಗೌಡ ಫೋಟೋ
ಸರ್ಕಾರಿ ಶಾಲೆಗಳು ಅಭಿವೃದ್ಧಿಯಾದರೆ ಗ್ರಾಮ ಅಭಿವೃದ್ಧಿ