ಕನ್ನಡಪ್ರಭ ವಾರ್ತೆ ಹಿರಿಯೂರು ತಾಲೂಕಿನ ರಂಗೇನಹಳ್ಳಿ ಗ್ರಾಮದ ಯುವತಿಯೋರ್ವಳು ಗಿಡಮೂಲಿಕೆಯನ್ನು ಔಷಧಿ ಸಸ್ಯ ಎಂದು ಸೇವಿಸಿ ಮೃತಪಟ್ಟ ಹಿನ್ನಲೆ ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ನಾಗಸಮುದ್ರ ಅವರು ಸಂತ್ರಸ್ಥರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.
ನಾಟಿವೈದ್ಯಕ್ಕಿಂತ ಆಯುರ್ವೇದ ವೈದ್ಯ ಪದ್ಧತಿಯು ಅತ್ಯಂತ ವೈಜ್ಞಾನಿಕ ಹಾಗೂ ಸುರಕ್ಷಿತವಾಗಿದೆ. ಕೆಲವೊಮ್ಮೆ ಗಿಡದ ಎಲೆಗಳು ಒಂದೇ ತೆರನಾಗಿದ್ದು, ಔಷಧಿ ಸಸ್ಯವನ್ನು ಗುರುತಿಸುವುದು ಕಷ್ಟವಾಗುತ್ತದೆ. ಅಂತ ಸಮಯದಲ್ಲಿ ಹತ್ತಿರದ ಆಯುರ್ವೇದ ವೈದ್ಯಾಧಿಕಾರಿಗಳನ್ನು ಭೇಟಿ ಮಾಡಿ ಆ ಗಿಡವು ಸುರಕ್ಷಿತವೇ ಇಲ್ಲವೇ ಎಂಬುದನ್ನು ಖಾತ್ರಿಪಡಿಸಿಕೊಂಡು ನಂತರ ಔಷಧಿಯಾಗಿ ಬಳಸಬೇಕು. ಮನೆ ಮದ್ದು ಹಾಗೂ ಔಷಧಿ ಸಸ್ಯಗಳನ್ನು ಬಳಸುವುದಾದರೆ ಅದರ ಬಗ್ಗೆ ಪೂರ್ಣ ತಿಳುವಳಿಕೆ ಇರುವವರೊಂದಿಗೆ ವಿಚಾರಿಸಿ ಸೇವಿಸಬೇಕು. ಸಾಮಾನ್ಯವಾಗಿ ಸಾರ್ವಜನಿಕರು ತಿಳಿದುಕೊಂಡಂತೆ ಎಲ್ಲಾ ಗಿಡಗಳು ಆರೋಗ್ಯಕ್ಕೆ ಪೂರಕವಾಗಿ ಸುರಕ್ಷಿತವಾಗಿರುವುದಿಲ್ಲ. ಸರಿಯಾದ ವಿಧಾನದಲ್ಲಿ ಸರಿಯಾದ ಪ್ರಮಾಣದಲ್ಲಿ ಸೇವಿಸದಿದ್ದರೆ ಹಾಗೂ ವಿವೇಚನಾ ರಹಿತವಾಗಿ ಸೇವಿಸಿದರೆ ಅಪಾಯ ತಪ್ಪಿದ್ದಲ್ಲ. ಆಯುರ್ವೇದ ಚಿಕಿತ್ಸೆಗಳು ಸರ್ಕಾರದ ವತಿಯಿಂದಲೇ ಆಯುಷ್ ಚಿಕಿತ್ಸಾಲಯಗಳಲ್ಲಿ ಉಚಿತವಾಗಿ ಲಭ್ಯ ಇವೆ ಇವುಗಳ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು. ಈ ವೇಳೆ ಹಿರಿಯೂರು ಆಯುರ್ವೇದ ಸರ್ಕಾರಿ ಆಸ್ಪತ್ರೆಯ ತಜ್ಞವೈದ್ಯ ಡಾ. ಟಿ.ಶಿವಕುಮಾರ್ ಹಾಜರಿದ್ದರು.