ಕನ್ನಡಪ್ರಭ ವಾರ್ತೆ ರಾಯಚೂರು
ಇಲ್ಲಿನ ರಿಮ್ಸ್ ಬೋಧಕ ಆಸ್ಪತ್ರೆ ಕಾಲೇಜಿನ ಸಭಾಂಗಣದಲ್ಲಿ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವತಿಯಿಂದ ಪಿಎಂ- ಅಭಿಮ್ ಯೋಜನೆಯಡಿ ರೂ.21.85 ಕೋಟಿ ರೂ.ಗಳ (ಕೇಂದ್ರ ಸರ್ಕಾರ 60: ರಾಜ್ಯ ಸರ್ಕಾರ 40 ಅನುದಾನ) ಅಂದಾಜು ವೆಚ್ಚದಲ್ಲಿ 50 ಹಾಸಿಗೆಗಳ ತೀವ್ರ ನಿಗಾ ಘಟಕದ ನಿರ್ಮಾಣಕ್ಕೆ ಶುಂಕುಸ್ಥಾಪನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಮಂಗಳವಾರ ಚಾಲನೆ ನೀಡಿದರು.ನಂತರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಾದ್ಯಂತ 70 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದರು.
ಉತ್ತರಾಖಂಡದ ಏಮ್ಸ್-ರಿಷಿಕೇಶ, ತೆಲಂಗಾಣದ ಏಮ್ಸ್-ಬೀಬಿನಗರ, ಅಸ್ಸಾಂನ ಏಮ್ಸ್-ಗುವಾಹಟಿ, ಮಧ್ಯಪ್ರದೇಶದ ಏಮ್ಸ್-ಭೋಪಾಲ್, ರಾಜಸ್ಥಾನದ ಏಮ್ಸ್-ಜೋಧಪುರ, ಬಿಹಾರದ ಏಮ್ಸ್- ಪಟ್ನಾ, ಏಮ್ಸ್-ಬಿಲಾಸ್ಪುರ್, ಹಿಮಾಚಲ ಪ್ರದೇಶದ ಏಮ್ಸ್-ಬಿಲಾಸ್ಪುರ್ ಉತ್ತರ ಪ್ರದೇಶ, ಛತ್ತೀಸಗಢದ ಏಮ್ಸ್-ರಾಯಪುರ, ಆಂಧ್ರಪ್ರದೇಶದ ಏಮ್ಸ್-ಮಂಗಳಗಿರಿ ಮತ್ತು ಮಣಿಪುರದ ರಿಮ್ಸ್-ಇಂಫಾಲ್ನಲ್ಲಿ ಈ ಸೇವೆ ಲಭ್ಯವಿದೆ ಎಂದು ಕಾರ್ಯಕ್ರಮದಲ್ಲಿ ಕೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳು ವಿವರಿಸಿದರು.ನಂತರ ರಾಯಚೂರು ನಗರ ಕ್ಷೇತ್ರದ ಶಾಸಕರಾದ ಡಾ.ಶಿವರಾಜ ಎಸ್.ಪಾಟೀಲ್ ಅವರು ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಗಳನ್ನು ನಿರ್ದಿಷ್ಟ ಕಾಲಾವಧಿಯಲ್ಲಿ ಪ್ರತಿಯೊಬ್ಬರಿಗೂ ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಲರೂ ಯೋಜನೆಗಳ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ರಿಮ್ಸ್ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೋವಿಡ್ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಯೋಧರಂತೆ ಕಾರ್ಯ ನಿರ್ವಹಿಸಿದ್ದು, ಅವರ ಕಾರ್ಯ ಉತ್ತಮವಾಗಿತ್ತು. ವೈದ್ಯರಿಗೆ ಸಾರ್ಥಕ ಭಾವ ಮೂಡಿತ್ತು. ಸಂಕಷ್ಟದ ಸಂದರ್ಭದಲ್ಲಿಯೂ ಎದೆಗುಂದದೆ ಸೇವೆ ಸಲ್ಲಿಸಿದ್ದಾರೆಂದು ಎಂದು ತಿಳಿಸಿದರು.ವಿದ್ಯಾರ್ಥಿಗಳು ಯಾವುದೇ ಆತಂಕಕ್ಕೆ ಒಳಗಾಗದೆ ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸ ಮಾಡಿ ರೋಗಿಗಳೊಂದಿಗೆ ಉತ್ತಮ ಒಡನಾಟ ಹೊಂದಬೇಕು. ಮುಂದಿನ ಆರು ತಿಂಗಳು ಅಥವಾ ಒಂದು ವರ್ಷದಲ್ಲಿ ಕಲ್ಯಾಣ ಕರ್ನಾಟಕದಲ್ಲಿ ರಿಮ್ಸ್ ಆಸ್ಪತ್ರೆ ಅತ್ಯುತ್ತಮ ಆಸ್ಪತ್ರೆಯಾಗಿ ಕಾರ್ಯ ನಿರ್ವಹಿಸಲಿದೆ. ಇದಕ್ಕಾಗಿ ಜಿಲ್ಲಾಧಿಕಾರಿಗಳು ಮಹತ್ವ ಕಾಳಜಿವಹಿಸಿದ್ದು, ಅವರು ಉತ್ತಮ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷರಾದ ನರಸಮ್ಮ ನರಸಿಂಹಲು ಮಾಡಗಿರಿ, ರಿಮ್ಸ್ ನಿರ್ದೇಶಕ ಡಾ.ರಮೇಶ ಬಿ.ಹೆಚ್., ಮುಖ್ಯ ಆಡಳಿತಾಧಿಕಾರಿ ಡಾ.ಕೆ.ಆರ್.ದುರುಗೇಶ್, ವಿಶೇಷಾಧಿಕಾರಿ ಡಾ.ರಮೇಶ ಸಾಗರ, ವೈದ್ಯಕೀಯ ಅಧೀಕ್ಷಕ ಡಾ.ಬಾಸ್ಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಸುರೇಂದ್ರ ಬಾಬು, ರಿಮ್ಸ್ ಬೋಧಕ ಆಸ್ಪತ್ರೆ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ಬಸವರಾಜ ಎಂ.ಪಾಟೀಲ್,ದೀಪಾ,ಜಿಲ್ಲಾ ಶಸ್ತ್ರ ಚಿಕಿತ್ಸ ಡಾ.ವಿಜಯಶಂಕರ, ಸೇರಿ ವೈದ್ಯಾಧಿಕಾರಿಗಳು,ವಿದ್ಯಾರ್ಥಿಗಳು ಇದ್ದರು.---