ಕನ್ನಡಪ್ರಭ ವಾರ್ತೆ ಹರಿಹರ
ಉದ್ಯಮಿ ಅಜೀಂ ಪ್ರೇಮ್ ಜಿ ಅಂತಹವರು ಬಹು ಅಪರೂಪ. ನಮ್ಮ ನಡುವೆ ಸಾಕಷ್ಟು ಶ್ರೀಮಂತರಿದಾರೆ ಆದರೆ ಪ್ರೇಮ್ ಜಿ ಆದರ್ಶ ಪ್ರಾಯರು. ಇಂತವರ ಸಂಖ್ಯೆ ಹೆಚ್ಚಾಗಿ ಶೈಕ್ಷಣಿಕ ಪ್ರಗತಿಗೆ ಕಾರಣರಾಗಲಿ ಎಂದು ಶಾಸಕ ಬಿ.ಪಿ.ಹರೀಶ್ ತಿಳಿಸಿದರು.ತಾಲೂಕಿನ ಗುತ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ಸರ್ಕಾರ ಹಾಗೂ ಅಜೀಂ ಪ್ರೇಮ್ ಜಿ ಪೌಂಡೇಶನ್ ಆಶ್ರಯದಲ್ಲಿ ಪೌಷ್ಟಿಕ ಆಹಾರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ, ಶಾಲಾ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು, ಶೇಂಗಾ ಚೆಕ್ಕಿ ವಿತರಣೆ ಮಾಡಿ ಮಾತನಾಡಿ, ಶಾಲಾ ಮಕ್ಕಳಲ್ಲಿ ಉಂಟಾಗುವ ಅಪೌಷ್ಟಿಕತೆ ಹೊಗಲಾಡಿಸಲು ಮೊಟ್ಟೆ, ಬಾಳೆಹಣ್ಣು, ಶೇಂಗಾ ಚೆಕ್ಕಿ ನೀಡುವ ನಿರ್ಧಾರ ಅತ್ಯುತ್ತಮ. ಇವುಗಳ ಸೇವನೆಯಿಂದ ರಾಜ್ಯದ ಶಾಲಾ ಮಕ್ಕಳ ಕಲಿಕೆ ಆಸಕ್ತಿ ಹೆಚ್ಚಾಗಿ ಭವಿಷ್ಯದ ಉತ್ತಮ ಪ್ರಜೆಗಳಾಗಿ ನಿರ್ಮಾಣ ಆಗಲಿ ಎಂಬ ಸದುದ್ದೇಶದಿಂದ ಅಜೀಂ ಪ್ರೇಮ್‍ಜಿ ಪೌಂಡೇಶನ್ ಫಾರ್ ಡೆವೆಲಪ್‍ಮೆಂಟ್ ಖಾಸಗಿ ಸಂಸ್ಥೆ ಉತ್ತಮ ಕಾರ್ಯಕ್ಕೆ ಮುಂದಾಗಿರುವುದು ಸಂತಸ ತಂದಿದೆ ಎಂದರು.
ಪೂರ್ವ ಪ್ರಾಥಮಿಕ ಶಾಲೆಗಳು ಸೇರಿದಂತೆ ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ವಾರದಲ್ಲಿ ನಾಲ್ಕು ದಿನಗಳ ಕಾಲ ಪೂರಕ ಪೌಷ್ಟಿಕ ಆಹಾರವಾಗಿ ಕೊಡಲಾಗುತ್ತದೆ. ಮೂರು ವರ್ಷಗಳ ಕಾಲ ಪ್ರತಿ ಸೋಮವಾರದಿಂದ ಗುರುವಾರದವರೆಗೆ ಪೌಷ್ಟಿಕ ಆಹಾರ ಸರಬರಾಜು ಮಾಡಲಾಗುತ್ತದೆ ಎಂದರು.ನಗರಸಭೆ ಅಧ್ಯಕ್ಷರಾದ ಕವಿತಾ ಮಾರುತಿ ಬೇಡರ್, ಉಪಾಧ್ಯಕ್ಷ ಜಂಭಣ್ಣ, ಎಸ್.ಡಿ.ಎಂ.ಸಿ ಅಧ್ಯಕ್ಷ ಬುಳ್ಳಪ್ಪರ ಮರಿಯಪ್ಪ, ಉಪಾಧ್ಯಕ್ಷೆ ರೂಪಾ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆರ್. ವೀರೇಶ್, ಬಿಆರ್‌ಸಿ ಎಚ್. ಕೃಷ್ಣಪ್ಪ, ಸಿಆರ್‌ಪಿ ಕೆ.ಎನ್. ಬಸವರಾಜಯ್ಯ, ಅಕ್ಷರ ದಾಸೋಹ ಕಚೇರಿ ಎಸ್.ಎನ್. ರವಿಕುಮಾರ, ವೆಂಕಟೇಶ್ ಹಾಗೂ ಗ್ರಾಮ ಮುಖಂಡರಾದ ಮಂಜಪ್ಪ, ನಾಗರಾಜ, ಗುರುನಾಥಪ್ಪ, ಕುರುಬರ ನಿಂಗಪ್ಪ, ಹೊನ್ನಪ್ಪ, ಹನುಮಂತಪ್ಪ, ಅಕ್ಕಮ್ಮ, ಅಬ್ದುಲ್ ರೆಹಮಾನ್, ವಿಜಯಮ್ಮ ಇತರರಿದ್ದರು.