ರಾಜ್ಯದಲ್ಲಿ ತೀವ್ರ ಬರಗಾಲವಿರುವ ಹಿನ್ನೆಲೆ ಮೇವು ಕೊರತೆ ಎದುರಾಗುವ ಸಾಧ್ಯತೆ ಇದೆ. ಈ ಸಂದರ್ಭ ಜಾನುವಾರುಗಳಿಗೆ ಪೂರಕ ಪೌಷ್ಟಿಕ ಮೇವು ಒದಗಿಸುವ ಜತೆಗೆ ರೈತರ ಮೇವು ಖರ್ಚಿನ ಹೊರೆ ತಗ್ಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ 2026-27ನೇ ಸಾಲಿನಲ್ಲಿ ರಾಜ್ಯದ 31 ಜಿಲ್ಲೆಗಳಲ್ಲಿ 12 ಸಾವಿರ "ಅಜೋಲಾ ಘಟಕ "ಗಳನ್ನು ಸ್ಥಾಪಿಸಲು ಮುಂದಾಗಿದೆ.
ಗದಗ ಜಿಲ್ಲೆಗೆ 350 ಘಟಕ, ಪ್ರತಿ ಘಟಕಕ್ಕೆ 3150 ಸಹಾಯಧನ, ಜಾನುವಾರು ಸಾಕಾಣಿಕೆ ರೈತರಿಗೆ ಪೂರಕ ಪೌಷ್ಟಿಕ ಮೇವಿಗೆ ಅನುಕೂಲ
ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ ಗದಗ
ರಾಜ್ಯದಲ್ಲಿ ತೀವ್ರ ಬರಗಾಲವಿರುವ ಹಿನ್ನೆಲೆ ಮೇವು ಕೊರತೆ ಎದುರಾಗುವ ಸಾಧ್ಯತೆ ಇದೆ. ಈ ಸಂದರ್ಭ ಜಾನುವಾರುಗಳಿಗೆ ಪೂರಕ ಪೌಷ್ಟಿಕ ಮೇವು ಒದಗಿಸುವ ಜತೆಗೆ ರೈತರ ಮೇವು ಖರ್ಚಿನ ಹೊರೆ ತಗ್ಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ 2026-27ನೇ ಸಾಲಿನಲ್ಲಿ ರಾಜ್ಯದ 31 ಜಿಲ್ಲೆಗಳಲ್ಲಿ 12 ಸಾವಿರ "ಅಜೋಲಾ ಘಟಕ "ಗಳನ್ನು ಸ್ಥಾಪಿಸಲು ಮುಂದಾಗಿದೆ.
ಮಳೆ ಕೊರತೆ, ಬರ ಅಥವಾ ಹಸಿರು ಮೇವಿನ ಲಭ್ಯತೆ ಕಡಿಮೆಯಾಗುವ ಸಂದರ್ಭದಲ್ಲಿ ಜಾನುವಾರುಗಳಿಗೆ ಪರ್ಯಾಯವಾಗಿ ಪೂರಕ ಮೇವು ಒದಗಿಸುವುದು ಯೋಜನೆಯ ಪ್ರಮುಖ ಉದ್ದೇಶ. ಕಡಿಮೆ ಸ್ಥಳದಲ್ಲಿ, ನಿಯಂತ್ರಿತ ನೀರಿನ ಬಳಕೆಯೊಂದಿಗೆ ಅಜೋಲಾ ಬೆಳೆಸಲು ಸಾಧ್ಯವಾಗುವುದರಿಂದ ಜಾನುವಾರು ಸಾಕಾಣಿಕೆ ಮಾಡುವ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಮನೆಯಲ್ಲಿಯೇ ಪೂರಕ ಮೇವು ಉತ್ಪಾದಿಸುವ ಅವಕಾಶ ಸಿಗಲಿದೆ.
ರೈತರಿಗೆ ಏನು ಲಾಭ?:
ಅಜೋಲಾ ಉತ್ಪಾದನೆಯಿಂದ ಜಾನುವಾರುಗಳಿಗೆ ಪೂರಕ ಆಹಾರ ದೊರೆಯುವುದರ ಜತೆಗೆ ಹೊರಗಿನಿಂದ ಖರೀದಿಸುವ ಮೇವಿನ ಮೇಲಿನ ಅವಲಂಬನೆ ಕಡಿಮೆಯಾಗಬಹುದು. ವಿಶೇಷವಾಗಿ ಬರಪೀಡಿತ ಪ್ರದೇಶಗಳಲ್ಲಿ ಹಸಿರು ಮೇವಿನ ಕೊರತೆಯ ಸಂದರ್ಭ ರೈತರಿಗೆ ಇದು ಹೆಚ್ಚುವರಿ ಆಸರೆಯಾಗಲಿದೆ. ಹಾಲು ಉತ್ಪಾದನೆಗೆ ಸಂಬಂಧಿಸಿದ ಜಾನುವಾರುಗಳ ಪೌಷ್ಟಿಕ ಆಹಾರ ನಿರ್ವಹಣೆಯಲ್ಲೂ ಅಜೋಲಾವನ್ನು ಪೂರಕವಾಗಿ ಬಳಸುವ ಅವಕಾಶವಿದೆ. ಇಲಾಖೆಯ ಮಾರ್ಗಸೂಚಿಯಲ್ಲಿ ಅಜೋಲಾ ಘಟಕಗಳ ಸ್ಥಾಪನೆಗೆ ಅಗತ್ಯ ಸಾಮಗ್ರಿ, ಬೀಜ ಹಾಗೂ ಕೂಲಿ ವೆಚ್ಚವನ್ನು ಒಳಗೊಂಡು ಪ್ರತಿ ಘಟಕಕ್ಕೆ ₹3150 ಸರ್ಕಾರ ನಿಗದಿಪಡಿಸಿದೆ.
ಕಡಿಮೆ ಜಾಗದಲ್ಲಿ ಮೇವು ಉತ್ಪಾದನೆ:
ಅಜೋಲಾ ಘಟಕವನ್ನು ರೈತರ ಜಾನುವಾರು ಕೊಟ್ಟಿಗೆ ಸಮೀಪ ಅಥವಾ ಲಭ್ಯವಿರುವ ಸಣ್ಣ ಜಾಗದಲ್ಲಿ ನಿರ್ಮಿಸಬಹುದಾಗಿದೆ. ಇಲಾಖೆಯ ಮಾದರಿಯಲ್ಲಿ ಘಟಕ ನಿರ್ಮಾಣಕ್ಕೆ ಶೇಡ್ ನೆಟ್, ಎಚ್ ಡಿಪಿಇ ಶೀಟ್, ಗೋಮಯ, ಸೂಪರ್ ಫಾಸ್ಫೇಟ್ ಹಾಗೂ ಅಜೋಲಾ ಸ್ಟಾರ್ಟರ್ ಕಲ್ಚರ್, ಇನಾಕ್ಯುಲಂ ಸೇರಿದಂತೆ ಅಗತ್ಯ ಸಾಮಗ್ರಿ ಪರಿಗಣಿಸಲಾಗಿದೆ. ಸಾಮಗ್ರಿ ವೆಚ್ಚದ ಜತೆಗೆ ಕೂಲಿ ವೆಚ್ಚವೂ ಘಟಕದ ಅನುದಾನವನ್ನು ಸೇರಿಸಿದೆ. ಅಜೋಲಾ ಘಟಕಗಳ ಯಶಸ್ವಿ ನಿರ್ವಹಣೆಗೆ ಸ್ವಚ್ಛ ನೀರು, ಸೂಕ್ತ ಸ್ಥಳ ಹಾಗೂ ನಿಯಮಿತ ನಿರ್ವಹಣೆ ಅತ್ಯಗತ್ಯದ ಬಗ್ಗೆ ಸ್ಪಷ್ಟವಾದ ಸೂಚನೆ ನೀಡಲಾಗಿದೆ.
ಯಾವ ಜಿಲ್ಲೆಗೆ ಎಷ್ಟು ಘಟಕ?:
ಬಾಗಲಕೋಟೆ 500, ಬೆಂಗಳೂರು ನಗರ 250, ಬೆಂಗಳೂರು ಗ್ರಾಮಾಂತರ 200, ಬೆಳಗಾವಿ 750, ಬಳ್ಳಾರಿ 250, ಬೀದರ್ 400, ವಿಜಯಪುರ 650, ಚಾಮರಾಜನಗರ 250, ಚಿಕ್ಕಬಳ್ಳಾಪುರ 400, ಚಿಕ್ಕಮಗಳೂರು 450, ಚಿತ್ರದುರ್ಗ 300, ದಕ್ಷಿಣ ಕನ್ನಡ 450, ದಾವಣಗೆರೆ 300, ಧಾರವಾಡ 400, ಗದಗ 350, ಹಾಸನ 400, ಹಾವೇರಿ 400, ಕಲಬುರಗಿ 550, ಕೊಡಗು 250, ಕೋಲಾರ 300, ಕೊಪ್ಪಳ 350, ಮಂಡ್ಯ 350, ಮೈಸೂರು 450, ರಾಯಚೂರು 400, ರಾಮನಗರ 250, ಶಿವಮೊಗ್ಗ 350, ತುಮಕೂರು 500, ಉಡುಪಿ 350, ಉತ್ತರ ಕನ್ನಡ 600, ವಿಜಯನಗರ 300 ಹಾಗೂ ಯಾದಗಿರಿ 300 ಘಟಕಗಳ ಗುರಿ ನಿಗದಿಯಾಗಿದೆ. ಒಟ್ಟು 12 ಸಾವಿರ ಘಟಕಗಳು.ಜಿಲ್ಲೆಗೆ 350 ಅಜೋಲಾ ಘಟಕಗಳು ಹಂಚಿಕೆ:
ರಾಜ್ಯದ ಗುರಿಯಲ್ಲಿ ಗದಗ ಜಿಲ್ಲೆಗೆ 350 ಅಜೋಲಾ ಘಟಕಗಳು ಹಂಚಿಕೆಯಾಗಿದ್ದು, ಪ್ರತಿ ಘಟಕಕ್ಕೆ ₹3150ರಂತೆ ಒಟ್ಟು ₹11.02 ಲಕ್ಷ ಅನುದಾನ ನಿಗದಿಯಾಗಿದೆ. ಜಿಲ್ಲೆಯಲ್ಲಿ ತಾಲೂಕುವಾರು ಗುರಿ ಹಂಚಿಕೆ ಮಾಡಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಘಟಕಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಾರೆ ಇಲಾಖೆಯ ಹಿರಿಯ ಅಧಿಕಾರಿಗಳು.ಜಾನುವಾರು ಸಾಕಾಣಿಕೆಗೆ ಉಪಯುಕ್ತ:
ಒಟ್ಟಾರೆ, ಮೇವು ಕೊರತೆ ಎದುರಾದಾಗ ರೈತರು ಜಾನುವಾರುಗಳನ್ನು ಉಳಿಸಿಕೊಳ್ಳಲು ಪರ್ಯಾಯ ಮಾರ್ಗ ಹುಡುಕಬೇಕಾದ ಪರಿಸ್ಥಿತಿಯಲ್ಲಿ, ಕಡಿಮೆ ವೆಚ್ಚದಲ್ಲಿ ಮನೆಯಲ್ಲೇ ಪೂರಕ ಮೇವು ಉತ್ಪಾದಿಸುವ ಅವಕಾಶ ಕಲ್ಪಿಸುವ ಅಜೋಲಾ ಯೋಜನೆ ಜಾನುವಾರು ಸಾಕಾಣಿಕೆ ರೈತರಿಗೆ ಉಪಯುಕ್ತವಾಗುವ ನಿರೀಕ್ಷೆ ಮೂಡಿಸಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.