ಐದರಿಂದ ಎರಡಕ್ಕೆ ಇಳಿದ ಬಸ್‌ಗಳ ಸಂಖ್ಯೆ, ಬೇರೆ ರೂಟ್‌ಗಳಿಗೆ ಈ ಬಸ್‌ಗಳ ವರ್ಗ
ಸುಮಾರು ಒಂಭತ್ತು ವರ್ಷಗಳ ಹಿಂದೆ ಬಿ.ಸಿ.ರೋಡ್-ಕಾಸರಗೋಡು ನಡುವೆ ಅಂತಾರಾಜ್ಯ ಕೆಸ್ಸಾರ್ಟಿಸಿ ಬಸ್ ಸಂಚಾರ ಆರಂಭಗೊಂಡಿತ್ತು. ಆರಂಭದಲ್ಲಿ ಐದು ಬಸ್‌ಗಳನ್ನು ಓಡಿಸಲಾಗುತ್ತಿತ್ತು. ದಿನದಲ್ಲಿ 28 ಸಾವಿರ ರು. ವರೆಗೂ ಆದಾಯ ತರುತ್ತಿತ್ತು. ಕೊರೋನಾ ಬಳಿಕ ಬಸ್‌ಗಳ ಸಂಖ್ಯೆ ಎರಡಕ್ಕೆ ಕಡಿತಗೊಂಡಿತ್ತು.
ಕೊರೋನಾ ಬಳಿಕ ಮೂರು ಬಸ್‌ಗಳ ಓಡಾಟ ಇದ್ದುದು ಕಳೆದ ಕೆಲವು ಸಮಯದಿಂದ ಎರಡಕ್ಕೆ ಇಳಿದಿತ್ತು. ಸಾರ್ವಜನಿಕರ ತೀವ್ರ ಆಕ್ಷೇಪದ ಬಳಿಕ ಮತ್ತೆ ಒಂದು ಬಸ್‌ನ್ನು ಓಡಾಟಕ್ಕೆ ಇಳಿಸಲಾಗಿದೆ. ಇನ್ನೂ ಎರಡು ಬಸ್‌ಗಳು ಸಂಚಾರ ನಡೆಸುತ್ತಿಲ್ಲ. ಆದಾಯದ ಕೊರತೆ ನೆಪದಲ್ಲಿ ಈ ಬಸ್‌ಗಳ ಓಡಾಟ ಸ್ಥಗಿತಗೊಳಿಸಲಾಗಿದೆ ಎನ್ನುವುದು ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಸಮಜಾಯಿಷಿ.
ಕಾಸರಗೋಡು-ಮಂಗಳೂರು ಅಂತಾರಾಜ್ಯ ಸಾರಿಗೆಗೆ ವಿದ್ಯಾರ್ಥಿ ಪಾಸ್‌ನಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿ ಕಾಸರಗೋಡು-ಬಿ.ಸಿ.ರೋಡ್ ಬಸ್‌ಗೂ ಅಂತಾರಾಜ್ಯ ವಿದ್ಯಾರ್ಥಿ ಪಾಸ್‌ಗೆ ಅವಕಾಶ ನೀಡಲಾಗಿದೆ. ಇದರಿಂದಾಗಿ ಕಾಸರಗೋಡಿನಿಂದ ದೇರಳಕಟ್ಟೆ, ಕೊಣಾಜೆಯ ಶಿಕ್ಷಣ ಸಂಸ್ಥೆಗಳಿಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಅಂತಾರಾಜ್ಯ ಪಾಸ್ ನೆರವಾಗುತ್ತಿದೆ. ಅದೇ ರೀತಿ ಮುಡಿಪಿನಿಂದಲೂ ಮೆಲ್ಕಾರ್ ವರೆಗೆ ವಿದ್ಯಾರ್ಥಿಗಳಿಗೆ ಪಾಸ್ ನೀಡಲಾಗಿದೆ. ಇಷ್ಟೆಲ್ಲ ಸೌಲಭ್ಯಗಳನ್ನು ಕಲ್ಪಿಸಿದ ಬಳಿಕ ಈ ಅಂತಾರಾಜ್ಯ ಸಂಚಾರದಲ್ಲಿ ಬಸ್‌ಗಳ ಸಂಖ್ಯೆ ಕಡಿತಗೊಳಿಸುವುದರಿಂದ ವಿದ್ಯಾರ್ಥಿಗಳು ಹಣ ನೀಡಿ ಖಾಸಗಿ ಬಸ್‌ಗಳಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಬಂದೊದಗಿದೆ.
ಸುಮಾರು 18 ಕಿ.ಮೀ. ದೂರದ ಮುಡಿಪು-ಬಿ.ಸಿ.ರೋಡ್ ನಡುವೆ ಖಾಸಗಿ ಬಸ್ ಕ್ರಮಿಸಲು ಒಂದು ಗಂಟೆ ಬೇಕಾಗುತ್ತದೆ. ಆದರೆ ಈ ಕೆಎಸ್ಸಾರ್ಟಿಸಿ ಬಸ್ ಕೇವಲ ಅರ್ಧ ಗಂಟೆಯಲ್ಲಿ ಸಂಚರಿಸುತ್ತದೆ. ಹಾಗಾಗಿ ವಿದ್ಯಾರ್ಥಿಗಳು, ಪ್ರಯಾಣಿಕರು ಕೆಎಸ್ಸಾರ್ಟಿಸಿ ಬಸ್‌ನ್ನು ನೆಚ್ಚಿಕೊಳ್ಳುತ್ತಿದ್ದರು. ಆದರೆ ಈ ಬಸ್‌ನ ಸಂಚಾರವೇ ಮೊಟಕುಗೊಳ್ಳುತ್ತಿರಬೇಕಾದರೆ, ಪ್ರಯಾಣಿಕರು ಹೇಗೆ ಇದೇ ಬಸ್‌ನ್ನು ನೆಚ್ಚಿಕೊಂಡು ಪ್ರಯಾಣಿಸಬೇಕು ಎಂದು ಪ್ರಶ್ನಿಸುತ್ತಾರೆ ಮುಡಿಪಿನ ಕೆಎಸ್ಸಾರ್ಟಿಸಿ ಪರ ಹೋರಾಟಗಾರರು.
ಆದಾಯದ ಕೊರತೆ ಹಿನ್ನೆಲೆಯಲ್ಲಿ ಐದು ಬಸ್‌ಗಳ ಸಂಖ್ಯೆಯನ್ನು ಎರಡಕ್ಕೆ ಇಳಿಸಿ ಈಗ ಮತ್ತೆ ಮೂರು ಬಸ್‌ಗಳನ್ನು ಓಡಿಸಲಾಗುತ್ತಿದೆ. ಪ್ರಯಾಣಿಕರಿಂದ ಉತ್ತಮ ಸ್ಪಂದನ ಸಿಕ್ಕಿದರೆ ಬಾಕಿಯುಳಿದ ಎರಡು ಬಸ್‌ಗಳನ್ನೂ ಶೀಘ್ರವೇ ಸಂಚಾರಕ್ಕೆ ಇಳಿಸಲಾಗುವುದು.-ಹರಿಬಾಬು, ವಿಭಾಗೀಯ ನಿಯಂತ್ರಣಾಧಿಕಾರಿ, ಪುತ್ತೂರು