29ಕ್ಕೆ ಬಿ.ವೈ.ವಿಜಯೇಂದ್ರ ಬೀದರ್ ಪ್ರವಾಸ: ಡಾ.ಶೈಲೇಂದ್ರ ಬೆಲ್ದಾಳೆ

KannadaprabhaNewsNetwork | Published : Jan 26, 2024 1:49 AM

ಸಾರಾಂಶ

ನಗರದ ಗಣೇಶ ಮೈದಾನದಲ್ಲಿ ಕಾರ್ಯಕರ್ತರ ಸಮಾವೇಶ, ಅಭಿನಂದನಾ, ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಹಾಗೂ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಬೀದರ್

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಪ್ರಥಮ ಬಾರಿಗೆ ಜನವರಿ 29ರಂದು ಜಿಲ್ಲೆಗೆ ಆಗಮಿಸುತ್ತಿರುವ ಬಿ.ವೈ ವಿಜೇಯಂದ್ರ ಅವರ ಅಭಿನಂದನಾ ಹಾಗೂ ನೂತನ ಬಿಜೆಪಿ ಜಿಲ್ಲಾಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಹಾಗೂ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.29ರಂದು ಬೆಳಗ್ಗೆ 10.30 ಗಂಟೆಗೆ ಚಿದ್ರಿ ಬಳಿಯ ಏರ್‌ಪೋರ್ಟ್‌ ಬಳಿ ಅವರನ್ನು ಸ್ವಾಗತಿಸಲಾಗುವುದು. ನಂತರ ನಗರ ಸಭೆ ಸದಸ್ಯ ಶಶಿ ಹೊಸಳ್ಳಿ ಅವರ ವಾರ್ಡ್‌ನ ಬೂತ್‌ ಸಂಖ್ಯೆ 175ರ ಯಲ್ಲಪ್ಪ ಲಾಲಪ್ಪ ವಡ್ಡರ ಅವರ ಮನೆಯಲ್ಲಿ ಬಡಾವಣೆಯ ಸಮಸ್ಯೆ ಆಲಿಸುವರು.

ಬಳಿಕ 11ರ ಸುಮಾರಿಗೆ ಬೀದರ್‌ ದಕ್ಷಿಣ ಕ್ಷೇತ್ರದ ಚಿಟ್ಟಾವಾಡಿಯಲ್ಲಿ ಬಸವೇಶ್ವರ ಮೂರ್ತಿ ಅನಾವರಣ ಕಾರ್ಯಕ್ರಮ ನಡೆಯಲಿದೆ. ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರ ಸಾನ್ನಿಧ್ಯದಲ್ಲಿ, ಲೋಕಸಭಾ ಕ್ಷೇತ್ರದ ಬಿಜೆಪಿ ಶಾಸಕರು, ಕೇಂದ್ರ ಸಚಿವರು, ಶಾಸಕರು ಸೇರಿದಂತೆ ಇನ್ನಿತರ ಜನಪ್ರತಿನಿಧಿಗಳು ಭಾಗವಹಿಸುವರು ಎಂದು ಮಾಹಿತಿ ನೀಡಿದರು.

ಬಿಡಿಎ ಮಾಜಿ ಅಧ್ಯಕ್ಷ ಬಾಬು ವಾಲಿ ಮಾತನಾಡಿ, ಬೀದರ್‌ನ ಸಿದ್ದಾರೂಢ ಮಠದಿಂದ ಗಣೇಶ ಮೈದಾನವರೆಗೆ ಬೈಕ್‌ ರ್‍ಯಾಲಿ ನಡೆಯಲಿದ್ದು, ಮಧ್ಯಾಹ್ನ 12.30ರ ಸುಮಾರಿಗೆ ವಿಜಯೇಂದ್ರ ಅವರ ಅಭಿನಂದನಾ ಸಮಾರಂಭ ಹಾಗೂ ಪಕ್ಷದ ರಾಜ್ಯ ಕಾರ್ಯದರ್ಶಿ ಹಾಗೂ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರಿಗೆ ಸನ್ಮಾನ, ನೂತನ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್‌ ಅವರ ಅಧಿಕಾರ ಸ್ವೀಕಾರ ಹಾಗೂ ಸರಳ ನಿಕಟಪೂರ್ವ ಅಧ್ಯಕ್ಷ ಶಿವಾನಂದ ಮಂಠಾಳಕರ ಅವರನ್ನು ಅಭಿನಂದಿಸಲಾಗುವುದು ಎಂದು ತಿಳಿಸಿದರು.

ಸಮಾರಂಭದ ನಂತರ ಪಕ್ಷದ ಕಚೇರಿಗೆ ಭೇಟಿ ನೀಡಿ ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸುವರು. ನಂತರ ಅಲ್ಲಿಂದ ನೇರವಾಗಿ ಕಲಬುರಗಿಗೆ ತೆರಳಿ ಸಭೆ ನಡೆಸುವರು ಎಂದು ಡಾ. ಬೆಲ್ದಾಳೆ ತಿಳಿಸಿದರು.

ಶಿವಾನಂದ ಮಂಠಾಳಕರ ನೇತೃತ್ವದಲ್ಲಿ ಸುಮಾರು 4 ಜನ ಶಾಸಕರು ಗೆಲವು ಸಾಧಿಸಿದ್ದೇವೆ. ಮುಂದಿನ ದಿನಗಳಲ್ಲಿ ಸೋಮನಾಥ ಪಾಟೀಲರ ನೇತೃತ್ವದಲ್ಲಿ ಲೋಕಸಭೆ, ಜಿಪಂ ಹಾಗೂ ತಾಪಂ ಚುನಾವಣೆಯಲ್ಲಿ ಗೆಲವು ಸಾಧಿಸುವ ಗುರಿ ಇಟ್ಟುಕೊಂಡಿದ್ದೇವೆ ಎಂದು ಡಾ. ಬೆಲ್ದಾಳೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್‌ ಸದಸ್ಯ ರಘುನಾಥರಾವ್‌ ಮಲ್ಕಾಪೂರೆ, ಪಕ್ಷದ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್, ನಿಯೋಜಿತ ಜಿಲ್ಲಾದ್ಯಕ್ಷ ಸೋಮನಾಥ ಪಾಟೀಲ್‌, ನಗರಸಭೆ ಸದಸ್ಯ ಶಶಿ ಹೊಸಳ್ಳಿ, ಮುಖಂಡರಾದ ಈಶ್ವರಸಿಂಗ್‌ ಠಾಕೂರ, ಶ್ರೀನಿವಾಸ ಚೌಧರಿ, ಬಸವರಾಜ ಪವಾರ ಇದ್ದರು.

Share this article