ಬಿ.ಎ.ಗುಡಿಪಾಳ್ಯ ಶಾಲೆಯಲ್ಲಿ ಮಕ್ಕಳ ಸಂತೆ ಸಡಗರ

KannadaprabhaNewsNetwork |  
Published : Dec 23, 2023, 01:46 AM ISTUpdated : Dec 23, 2023, 01:47 AM IST
ತರಕಾರಿ ಖರೀದಿಸಿ ಚಾಲನೆ ನೀಡಿದ ಪಾಲಿಕೆ ಆಯುಕ್ತೆ ಅಶ್ವಿಜ | Kannada Prabha

ಸಾರಾಂಶ

ನಗರದ 20 ನೇ ವಾರ್ಡಿನ ಬಿ.ಎ. ಗುಡಿಪಾಳ್ಯದ ಸರ್ಕಾರಿ ಶಾಲೆಯಲ್ಲಿ ನಡೆದ ಮಕ್ಕಳ ಸಂತೆಮೇಳದಲ್ಲಿ ವಿದ್ಯಾರ್ಥಿಗಳು ಹಣ್ಣು, ತರಕಾರಿ, ಹೂವು, ತಿಂಡಿ ಪದಾರ್ಥಗಳನ್ನು ಮಾರಾಟ ಮಾಡಿ ತಮ್ಮ ವ್ಯಾಪಾರ ಕೌಶಲ್ಯ ಪ್ರದರ್ಶಿಸಿ ಸಡಗರಪಟ್ಟರು.

ತರಕಾರಿ ಖರೀದಿಸಿ ಚಾಲನೆ ನೀಡಿದ ಪಾಲಿಕೆ ಆಯುಕ್ತೆ ಅಶ್ವಿಜ

ಕನ್ನಡಪ್ರಭ ವಾರ್ತೆ ತುಮಕೂರು

ನಗರದ 20 ನೇ ವಾರ್ಡಿನ ಬಿ.ಎ. ಗುಡಿಪಾಳ್ಯದ ಸರ್ಕಾರಿ ಶಾಲೆಯಲ್ಲಿ ನಡೆದ ಮಕ್ಕಳ ಸಂತೆಮೇಳದಲ್ಲಿ ವಿದ್ಯಾರ್ಥಿಗಳು ಹಣ್ಣು, ತರಕಾರಿ, ಹೂವು, ತಿಂಡಿ ಪದಾರ್ಥಗಳನ್ನು ಮಾರಾಟ ಮಾಡಿ ತಮ್ಮ ವ್ಯಾಪಾರ ಕೌಶಲ್ಯ ಪ್ರದರ್ಶಿಸಿ ಸಡಗರಪಟ್ಟರು.

ಶುಕ್ರವಾರ ನಡೆದ ಮಕ್ಕಳ ಸಂತೆಯಲ್ಲಿ ನಗರಪಾಲಿಕೆ ಆಯುಕ್ತೆ ಅಶ್ವಿಜ ಮಕ್ಕಳಿಂದ ತರಕಾರಿ ಖರೀದಿ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಕ್ಕಳಲ್ಲಿ ವ್ಯಾವಹಾರಿಕ ಪ್ರಜ್ಞೆ ಬೆಳೆಸಲು ಹಾಗೂ ಗಣಿತ ಜ್ಞಾನ ಹೆಚ್ಚಿಸಲು ಇಲಾಖೆಯಿಂದ ಪಠ್ಯೇತರ ಚಟುವಟಿಕೆಯಾಗಿ ಶಾಲೆಗಳಲ್ಲಿ ಮಕ್ಕಳ ಸಂತೆಏರ್ಪಡಿಸಲಾಗುತ್ತದೆ. ಮಕ್ಕಳು ಇಂತಹ ಚಟುವಟಿಕೆಗಳ ಮೂಲಕ ಪರಸ್ಪರ ಬೆರೆಯುವ, ಸಂಭ್ರಮಿಸುವ ಜೊತೆಗೆ ಕ್ರಿಯಾಶೀಲತೆ ಬೆಳೆಸಿಕೊಳ್ಳಬೇಕು ಎಂದರು.

ವಿದ್ಯಾರ್ಥಿಗಳಿಗೆ ಓದು ಮುಖ್ಯ. ಗುರಿ ಇಟ್ಟುಕೊಂಡು ಚೆನ್ನಾಗಿ ಓದಿ, ತಮ್ಮ ಗುರಿ ಸಾಧಿಸಲು ಗಮನ ನೀಡಬೇಕು. ಶಿಕ್ಷಕರು, ಪೋಷಕರು ನೀಡುವ ಮಾರ್ಗದರ್ಶನ ಅನುಸರಿಸಿ ಆದರ್ಶ ಗುಣಗಳನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ನಗರ ಪಾಲಿಕೆ ಉಪಮೇಯರ್ ಟಿ.ಕೆ. ನರಸಿಂಹಮೂರ್ತಿ ಮಾತನಾಡಿ, ಶಾಲಾ ಸಂತೆಯಿಂದ ಕುಟುಂಬದ ದೈನಂದಿನ ವ್ಯಾಪಾರ, ವ್ಯವಹಾರದ ಬಗ್ಗೆ ಮಕ್ಕಳು ಅರಿವು ಬೆಳೆಸಿಕೊಳ್ಳಲು ಅವಕಾಶವಿದೆ. ವ್ಯಾವಹಾರಿಕ ಜ್ಞಾನದಿಂದ ಮುಂದೆ ಶಿಸ್ತುಬದ್ಧ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ, 20 ನೇ ವಾರ್ಡ್ ಸದಸ್ಯ ಎ.ಶ್ರೀನಿವಾಸ್ ಮಾತನಾಡಿ, ಬಿ.ಎ. ಗುಡಿ ಪಾಳ್ಯ ಶಾಲೆಯಲ್ಲಿ ಉತ್ತಮ ಶೈಕ್ಷಣಿಕ ವಾತಾವರಣವಿದ್ದು, ಮಕ್ಕಳು ಭವಿಷ್ಯ ರೂಪಿಸಿಕೊಳ್ಳಲು ಶಾಲೆ ಬೂನಾದಿಯಗಿದೆ. ಶಾಲೆಗೆ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಲಾಗುವುದು. ಸರ್ಕಾರಿ ಶಾಲೆಯ ಸರ್ವತೋಮುಖ ಬೆಳವಣಿಗೆಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಪೋಷಕರಿಗೆ ಮನವಿ ಮಾಡಿದರು.

ಎಸ್‌ಡಿಎಂಸಿ ಅಧ್ಯಕ್ಷೆ ಶೋಭಾ, ಮುಖ್ಯ ಶಿಕ್ಷಕಿ ಸೌಭಾಗ್ಯಮ್ಮ ಸೇರಿದಂತೆ ಎಸ್‌ಡಿಎಂಸಿ ಸದಸ್ಯರು, ಮಕ್ಕಳ ಪೋಷಕರು ಹಾಜರಿದ್ದು ಮಕ್ಕಳ ಸಂತೆಯಲ್ಲಿ ಖರೀದಿ ಮಾಡಿ ಮಕ್ಕಳಲ್ಲಿ ಉತ್ಸಾಹ ಮೂಡಿಸಿದರು.

ಫೋಟೊಬಿ.ಎ. ಗುಡಿಪಾಳ್ಯದ ಸರ್ಕಾರಿ ಶಾಲೆಯಲ್ಲಿ ನಡೆದ ಮಕ್ಕಳ ಸಂತೆಮೇಳಕ್ಕೆ ನಗರಪಾಲಿಕೆ ಆಯುಕ್ತೆ ಅಶ್ವಿಜ ಮಕ್ಕಳಿಂದ ತರಕಾರಿ ಖರೀದಿ ಮಾಡಿ ಚಾಲನೆ ನೀಡಿದರು

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ