ದಾವಣಗೆರೆ: ಬಾಲ್ಯದಲ್ಲಿ ಕಂಡುಂಡ ನೋವು, ಸಂಕಷ್ಟ, ಸವಾಲು, ಅವಮಾನಗಳೇ ಭವಿಷ್ಯದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಇಡೀ ದೇಶಕ್ಕೆ ಬೆಳಕು ನೀಡುವ ಪ್ರಖರ ಸೂರ್ಯನಾಗಿ ಹೊರ ಹೊಮ್ಮಲು ಕಾರಣವಾಯಿತು ಎಂದು ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ, ಕನ್ನಡಪ್ರಭ ಹಿರಿಯ ಪ್ರಧಾನ ವರದಿಗಾರ ನಾಗರಾಜ ಎಸ್.ಬಡದಾಳ್ ತಿಳಿಸಿದರು.
ಇಡೀ ಜಗತ್ತಿಗೆ ಶ್ರೇಷ್ಠ ಸಂವಿಧಾನ ನೀಡಿದ ಅಂಬೇಡ್ಕರ್ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದ್ದಾರೆ. ಶಾಲಾ ವಾರ್ಷಿಕೋತ್ಸವದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್‌ರ ಬಾಲ್ಯ ಜೀವನದ ಮೇಲೆ ಬೆಳಕು ಚೆಲ್ಲುವ ಪ್ರಯತ್ನವನ್ನು ಸಂಸ್ಥೆಯ ಆಡಳಿತ ಮಂಡಳಿದ ಭರತ್ ಸಿಂಗ್, ವಿಶ್ವಜಿತ್ ಸಿಂಗ್, ಶಾಲಾ ಶಿಕ್ಷಕರು ಹಾಗೂ ಮಕ್ಕಳು ಮಾಡಿರುವುದು ಇತರರಿಗೂ ಪ್ರೇರಣೆಯಾಗಿದೆ ಎಂದು ಹೇಳಿದರು.
ಪ್ರತಿಯೊಬ್ಬರ ಜೀವನದಲ್ಲೂ ಶಿಕ್ಷಕರು, ತಂದೆ, ತಾಯಿ ಹೀಗೆ ಯಾರಾದರೂ ಪ್ರೇರಣೆಯಾಗಿರುತ್ತಾರೆ. ಮಹಾತ್ಮ ಗಾಂಧಿ ವಸತಿಯುತ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಾಗ ಅಲ್ಲಿನ ದೈಹಿಕ ಶಿಕ್ಷಣ ಶಿಕ್ಷಕರಾದ ಸುರೇಶ್ ಜೈನ್ ನಿತ್ಯ ಪ್ರಾರ್ಥನೆ ಮಾಡುವುದು, ಪತ್ರಿಕೆಗಳನ್ನು ಓದುವುದು, ಎನ್‌ಸಿಸಿ ಸಾರ್ಜೆಂಟ್ ಹೀಗೆ ಅವಕಾಶ, ಜವಾಬ್ದಾರಿಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸುತ್ತಾ ಬಂದರು. ಹೀಗೆ ಸಾಕಷ್ಟು ಮಕ್ಕಳ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸುವ ಕೆಲಸ ಶಿಕ್ಷಕರು, ಸಂಸ್ಥೆಗಳು ಮಾಡುತ್ತಿರುವುದು ಗಮನಾರ್ಹ ಎಂದು ತಿಳಿಸಿದರು. ಹಿರಿಯ ಪತ್ರಕರ್ತ, ಪ್ರತಿಮಾ ಸಭಾದ ಅಧ್ಯಕ್ಷ ಬಾ.ಮ.ಬಸವರಾಜಯ್ಯ ಮಾತನಾಡಿ, ಬೆಳಕು ಹಂಚಿದ ಬಾಲಕ ನಾಟಕವು ಎಲ್ಲರನ್ನೂ ಒಂದು ಕ್ಷಣ ಬಾಬಾ ಸಾಹೇಬ್ ಅಂಬೇಡ್ಕರ್‌ರ ಬಾಲ್ಯ ಜೀವನಕ್ಕೆ ಕರೆದೊಯ್ದಿತು. ಎಲ್ಲಾ ಮಕ್ಕಳು ಅದ್ಭುತವಾಗಿ ಅಭಿನಯಿಸುವ ಮೂಲಕ ಮನಸೂರೆಗೊಂಡಿದ್ದಾರೆ ಎಂದ ಅವರು, ಕಳೆದ 3 ದಶಕದಿಂದಲೂ ಭರತ್ ಸಿಂಗ್‌ರ ನೇತೃತ್ವದಲ್ಲಿ ಸಂಸ್ಥೆ ಉತ್ತಮವಾಗಿ ಶಿಕ್ಷಣ ಸೇವೆ ಮಾಡಿಕೊಂಡು, ಬಡ, ಮಧ್ಯಮ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಆದರ್ಶ ಗುಣಗಳನ್ನು ಬಿತ್ತುವ ಕೆಲಸ ಮಾಡುತ್ತಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಆರ್.ಭರತ್ ಸಿಂಗ್ ಮಾತನಾಡಿ, 30 ವರ್ಷಗಳ ಹಿಂದೆ ತಮ್ಮ ಸಂಸ್ಥೆಯನ್ನು ಆರಂಭಿಸಿದಾಗಿನಿಂದ ಈವರೆಗೂ ದಾವಣಗೆರೆ ಮಾಧ್ಯಮದವರು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಶಾಲೆಯ ಮಕ್ಕಳ ಕಲೆ, ಪ್ರತಿಭೆ, ಕ್ರೀಡೆ, ಶೈಕ್ಷಣಿಕ ಸಾಧನೆ ಗುರುತಿಸಿ, ಪ್ರೋತ್ಸಾಹಿಸುವ ಕೆಲಸ ಮಾಡುತ್ತಿರುವುದು ಸಂಸ್ಥೆಯ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.
ರಂಗಕರ್ಮಿ ಎಸ್.ಎಲ್.ಸಂತೋಷ್ ನಿರ್ದೇಶನದಲ್ಲಿ ಶ್ರೀಪಾದ ಭಟ್ಟ ಸಂಗೀತದಲ್ಲಿ, ಹಿರಿಯ ರಂಗಕರ್ಮಿ ಎಸ್.ಎಸ್.ಸಿದ್ದರಾಜು ಧ್ವನಿ, ಬೆಳಕಿನಲ್ಲಿ ಬೆಳಕು ಹಂಚಿದ ಬಾಲಕ ಅಂಬೇಡ್ಕರ್ ಕುರಿತ ಮಕ್ಕಳ ನಾಟಕ ಗಮನ ಸೆಳೆಯಿತು. ದಿವಂಗತ ಪುನೀತ್ ರಾಜಕುಮಾರ ತರಹದ್ದೇ ವಸ್ತ್ರ ಧರಿಸಿದ್ದ 16 ಮಕ್ಕಳು ಅಪ್ಪು ಹಾಡಿಗೆ ಹೆಜ್ಜೆ ಹಾಕಿದ್ದು, ಮೂಕಾಭಿನಯ ಹೀಗೆ ಕಿಕ್ಕಿರಿದು ಸೇರಿದ್ದ ಸಭಾಂಗಣದಲ್ಲಿ ಮಕ್ಕಳ ಸಾಂಸ್ಕೃತಿಕ ಲೋಕ ಅನಾವರಣಗೊಂಡಿತು.