ಕುಕನೂರು: ರಂಗಭೂಮಿ ಕಲಾವಿದ ದಿ.ಬಾಬಣ್ಣ ಕಲ್ಮನಿಯವರು ಕಲೆಯ ಆರಾಧಕರಾಗಿದ್ದರು ಎಂದು ಹಿರಿಯ ಸಾಹಿತಿ ಡಾ.ಕೆ.ಬಿ. ಬ್ಯಾಳಿ ಹೇಳಿದರು.
ಪಟ್ಟಣದ ಪಂಚಾಕ್ಷರಿ ಸಂಗೀತ ಪಾಠಶಾಲೆಯಲ್ಲಿ ಪಂಚಾಕ್ಷರಿ ಸಾಹಿತ್ಯ ಸಂಗೀತ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಜರುಗಿದ ಹಿರಿಯ ರಂಗಭೂಮಿ ಕಲಾವಿದ ದಿ.ಬಾಬಣ್ಣ ಕಲ್ಮನಿಯವರ ಸ್ವರ ನುಡಿ ನಮನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬದುಕಿರುವವರೆಗೂ ರಂಗಭೂಮಿ ಕಲೆಗೆ ಜೀವನ ಮುಡುಪಾಗಿಟ್ಟ ಬಾಬಣ್ಣ ರಂಗ ಸೇವೆ ಅನನ್ಯ. ಕಲಾತಪಸ್ವಿ ರೆಹಮಾನವ್ವ ಕಲ್ಮನಿ ಹಾಗೂ ಅವರ ಕುಟುಂಬ ರಂಗಭೂಮಿ ಕ್ಷೇತ್ರಕ್ಕೆ ಅಪಾರ ಕೊಡುಗೆ ಕೊಟ್ಟಿದ್ದಾರೆ. ಬಾಬಣ್ಣ ಸಾವಿರಾರು ನಾಟಕಗಳನ್ನಾಡಿ ಸೈ ಎಸಿಕೊಂಡಿದ್ದಾರೆ. ರಂಗಭೂಮಿ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ ಪಡೆದ ಇವರು ಜಿಲ್ಲೆಯಲ್ಲಿ ಮೊದಲಿಗರು. ಯುವ ಕಲಾವಿದರಿಗೆ ಇಂಥ ಕಲಾವಿದರು ಸ್ಫೂರ್ತಿ ಎಂದರು.ಕುಕನೂರ ಡಾ.ಜಿ.ಎಸ್.ಎಂ.ಆರ್. ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಎನ್.ಆರ್. ಕುಕನೂರು ಮಾತನಾಡಿದರು.ಪಂಚಾಕ್ಷರಿ ಸಂಗೀತ ಪಾಠಶಾಲೆಯ ಅಧ್ಯಕ್ಷ ಹಾಗೂ ಸಂಗೀತ ಶಿಕ್ಷಕ ಮುರಾರಿ ಭಜಂತ್ರಿ ಅವರಿಂದ ನುಡಿ ನಮನ ಸೇವೆ ಜರುಗಿತು. ಕಲಾವಿದರಾದ ಖಾದಿರಸಾಬ್ ಸಿದ್ನೆಕೊಪ್ಪ, ಸುಮತಿ ಮಂಜುನಾಥ, ಪದ್ಮಾವತಿ ಭಜಂತ್ರಿ, ಪಾಠಶಾಲೆಯ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ಜರುಗಿತು.ದಿ.ಬಾಬಣ್ಣ ಕಲ್ಮನಿ ಅವರ ಪತ್ನಿ ಮೈಬುಬಿ ಬಾಬಣ್ಣ ಕಲ್ಮನಿ, ಜಿಪಂ ಮಾಜಿ ಅಧ್ಯಕ್ಷ ರಾಮಣ್ಣ ಭಜಂತ್ರಿ, ಸಾಹಿತಿ ಡಾ.ಫಕೀರಪ್ಪ ವಜ್ರಬಂಡಿ, ಡಾ.ಬಸವರಾಜ ಬಣ್ಣದಬಾವಿ, ಪತ್ರಕರ್ತ ಅಲ್ಲಾವುದ್ದೀನ್ ಎಮ್ಮಿ, ಕುಕನೂರಿನ ಅಂಜುಮನ್ ಕಮಿಟಿ ಅಧ್ಯಕ್ಷ ರಶೀದಸಾಬ್ ಉಮಚಿಗಿ, ಹಿರಿಯರಾದ ಹನುಮಂತಪ್ಪ ಜಳ್ಕಿ, ಪತ್ರಕರ್ತ ಬಸವರಾಜ ಕೊಡ್ಲಿ, ಜನಪದ ಕಲಾವಿದ ಶರಣಯ್ಯ ಇಟಿಗಿ, ಪಪಂ ಮಾಜಿ ಸದಸ್ಯ ಕನಕಪ್ಪ ಬ್ಯಾಡರ್, ದಾನಮ್ಮ, ಭಾಸ್ಕರ್ ಆಚಾರ್, ಅಂಬರೀಶ್ ಬಡಿಗೇರ್, ರಾಕೇಶ್ ಇದ್ದರು.