ಕನ್ನಡಪ್ರಭ ವಾರ್ತೆ ಉಡುಪಿ
ಜು.4ರಂದು ರಾತ್ರಿ ದೈವಸ್ಥಾನದ ಕಾಣಿಕೆ ಡಬ್ಬಿ ಕಳವಾಗಿತ್ತು, ಈ ಕೃತ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿತ್ತು. ಮರುದಿನ ಭಕ್ತರು ದೈವದ ದರ್ಶನ ನಡೆಸಿ ದೂರು ನೀಡಿದ್ದರು. ಊರಿನ ಸಂಕಷ್ಟ ಪರಿಹರಿಸುವ ದೈವದ ಸನ್ನಿಧಾನದಲ್ಲಿಯೇ ಈ ರೀತಿ ಕಳ್ಳತನ ನಡೆದರೆ ಅಪಚಾರವಾಗುವುದಿಲ್ಲವೇ ಎಂದು ಭಕ್ತರು ಆತಂಕ ವ್ಯಕ್ತಪಡಿಸಿದಾಗ, ರಾತ್ರಿ ಹಗಲು ಕಳೆಯುವುದರಲ್ಲಿ ಕಳ್ಳನನ್ನು ಹುಡುಕಿ ಕೊಡುವುದಾಗಿ ದೈವವು ಅಭಯ ನೀಡಿತ್ತು.
ಜು.6 ರ ಬೆಳಗ್ಗೆ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಮಲಗಿದ್ದ ವ್ಯಕ್ತಿಯೊಬ್ಬನನ್ನು ನೋಡಿದ ಆಟೋ ಚಾಲಕರೊಬ್ಬರು, ದೈವಸ್ಥಾನದ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದ ದೃಶ್ಯದಲ್ಲಿದ್ದ ಕಳ್ಳ ಆತನೇ ಎಂದು ಪತ್ತೆ ಹಚ್ಚಿದ್ದರು. ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು.ಪೊಲೀಸರು ಬಂದು ಆ ವ್ಯಕ್ತಿಯನ್ನು ವಿಚಾರಿಸಿದಾಗ, ಆತ ಬಾಗಲಕೋಟೆ ಜಿಲ್ಲೆಯ ಮುದುಕಪ್ಪ ಎಂದು ತಿಳಿಯಿತು ಮತ್ತು ತಾನೇ ದೈವಸ್ಥಾನದ ಕಳ್ಳತನ ನಡೆಸಿದ್ದು ಎಂದು ಒಪ್ಪಿಕೊಂಡಿದ್ದಾನೆ, ಮಾತ್ರವಲ್ಲ ಉದ್ಯಾವರದಲ್ಲಿಯೂ ಕಳ್ಳತನ ಮಾಡಿದ್ದಾಗಿ ಬಾಯಿ ಬಿಟ್ಟಿದ್ದಾನೆ.
24 ಗಂಟೆಯೊಳಗೆ ಕಳ್ಳನನ್ನು ಹಿಡಿದುಕೊಡುವುದಾಗಿ ಹೇಳಿದ್ದ ಬಬ್ಬುಸ್ವಾಮಿ ದೈವದ ಮಾತು ಸತ್ಯವಾಗಿದ್ದು, ದೈವದ ಕಾರಣಿಕಕ್ಕೆ ಭಕ್ತರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಇದೇ ರೀತಿ ವರ್ಷದ ಹಿಂದೆಯೂ ಇಲ್ಲಿ ಪವಾಡ ನಡೆದಿತ್ತು. ದೈವ ಸನ್ನಿಧಾನದಲ್ಲಿ ನೀರಿನ ನಿತ್ಯ ಬಳಕೆಗಾಗಿ ಬೋರ್ವೆಲ್ ತೋಡಲಾಗಿತ್ತು. ಆದರೆ ನೀರು ಸಿಗದೇ ಹೋದಾಗ ಭಕ್ತರು ದೈವದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿದ್ದರು. ಪ್ರಾರ್ಥನೆ ಮಾಡಿದ ಕೆಲವೇ ಗಂಟೆಗಳಲ್ಲಿ ಬೋರ್ವೆಲ್‌ನಲ್ಲಿ ಸಾಕಷ್ಟು ನೀರು ಸಿಕ್ಕಿತ್ತು ಎಂದು ಭಕ್ತರು ನೆನಪಿಸಿಕೊಂಡಿದ್ದಾರೆ.