ಧಾರವಾಡ: ಡಾ. ಬಾಬು ಜಗಜೀವನ ರಾಂ ಈ ರಾಷ್ಟ್ರ ಕಂಡ ಧೀಮಂತ ನಾಯಕರು, ರಾಷ್ಟ್ರ ಭಕ್ತ, ರಾಜಕಾರಣಿ, ರೈತ ನಾಯಕರು ಎಂದು ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಅವರ 118ನೇ ಜಯಂತಿಯಲ್ಲಿ ಮಾತನಾಡಿದ ಅವರು, ಗೋಧಿ ಬೆಳೆ ವಿಸ್ತರಿಸಿ, ವಿತರಿಸುವ ಮೂಲಕ ಭಾರತ ದೇಶವು ಆಹಾರ ಉತ್ಪನ್ನಗಳ ಉತ್ಪಾದನೆಯಲ್ಲಿ ಸ್ವಾವಲಂಬಿ ರಾಷ್ಟ್ರವಾಗಲೂ ಸಹಾಯ ಮಾಡಿದರು. ಬಲಿಷ್ಠ ಭಾರತ ನಿರ್ಮಾಣವಾಗಲು ಅವರ ಕೊಡುಗೆ ಅಪಾರ ಎಂದರು.ಅಸ್ಪೃಶ್ಯತೆ, ಅಸಮಾನತೆ ವಿರುದ್ಧ ಧ್ವನಿ ಎತ್ತಿದ ಅವರು, ರಾಜಕಾರಣ ಸೇರಿದಂತೆ ಸಮಾಜದಲ್ಲಿ ಅಪಾರ ಜನ ಬಲಗಳಿಸಿದ್ದರು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದರು.
ವಿವಿಧ ಇಲಾಖೆಗಳ ವಸತಿನಿಲಯದ ವಿದ್ಯಾರ್ಥಿಗಳಿಗೆ ಡಾ. ಬಾಬು ಜಗಜೀವನ ರಾಂ ಅವರಂತಹ ನಾಯಕರ ಬಗ್ಗೆ ನಿರಂತರ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.ದಿವ್ಯ ಸಾನ್ನಿಧ್ಯ ವಹಿಸಿದ್ದ ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲೂಕಿನ ಚಿಗರಹಳ್ಳಿಯ ಮರುಳಶಂಕರ ದೇವರಗುರು ಪೀಠದ ಸಿದ್ದ ಬಸವ ಕಬೀರ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಮಡಿವಂತಿಕೆ ಒಡೆದು ಹಾಕಿದವರು ದಾರ್ಶನಿಕರಾಗುತ್ತಾರೆ. ಜಾತಿ ವ್ಯವಸ್ಥೆ ನಾಶವಾಗಬೇಕು. ಸಮಾನತೆ, ಸಹಬಾಳ್ವೆಗೆ ಶಿಕ್ಷಣ, ಸಂವಿಧಾನ ಅವಕಾಶ ನೀಡಿವೆ. ಮೂಢನಂಬಿಕೆ ನಂಬದೆ, ವಾಸ್ತವತೆ ಅರಿತು ಬದುಕಬೇಕು ಎಂದು ಹೇಳಿದರು.
ಎಸ್ಪಿ ಡಾ.ಗೋಪಾಲ್ ಎಂ.ಬ್ಯಾಕೋಡ ಮಾತನಾಡಿದರು. ಪ್ರಾಧ್ಯಾಪಕಿ ಪ್ರೊ.ಪವಿತ್ರಾ ಡಾ. ಬಾಬು ಜಗಜೀವನ ರಾಂ ಜೀವನ ಚರಿತ್ರೆ ಕುರಿತು ವಿಶೇಷ ಉಪನ್ಯಾಸ ನೀಡಿದರು.ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಹಾಗೂ ಸ್ನಾತಕೊತ್ತರ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪಿ.ಶುಭ ಸ್ವಾಗತಿಸಿದರು. ಅಪರ ಜಿಲ್ಲಾಧಿಕಾರಿ ಗೀತಾ ಸಿಡಿ, ಡಿಸಿಪಿ ಮಹಾನಿಂಗ ನಂದಗಾವಿ, ಸಮಾಜದ ಮುಖಂಡರಾದ ಅಶೋಕ ಬಂಡಾರಿ, ಎಂ.ಅರವಿಂದ, ಸಂತೋಷ ಸವಣೂರ, ವೆಂಕಟೇಶ ಸಗ್ಗಬಾಲ, ಲಕ್ಷ್ಮಣ ಬಕಾಯಿ ಮತ್ತಿತರರು ಇದ್ದರು.ವಿವಿಧ ಕಲಾತಂಡಗಳೊಂದಿಗೆ ನಗರದ ಪ್ರಮುಖ ಮಾರ್ಗಗಳಲ್ಲಿ ಭಾವಚಿತ್ರದ ಮೆರವಣಿಗೆ ಸಂಚರಿಸಿ, ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಮುಕ್ತಾಯವಾಯಿತು.