ಲಾಠಿ ಚಾರ್ಜ್ ನ್ಯಾಯಾಂಗ ತನಿಖೆಗೆ ಆದೇಶ ಸರ್ಕಾರಕ್ಕೆ ಹಿನ್ನಡೆ

KannadaprabhaNewsNetwork | Published : Apr 6, 2025 1:48 AM

ಸಾರಾಂಶ

ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಹೋರಾಟಗಾರರ ಮೇಲೆ ನಡೆಸಿದ ಪೊಲೀಸ್ ಲಾಠಿ ಚಾರ್ಜ್‌ ವಿರೋಧಿಸಿ ಹೈಕೋರ್ಟ್ ಮೊರೆ ಹೋಗಲಾಗಿತ್ತು. ಈ ಘಟನೆ ಕುರಿತು ನಿವೃತ್ತ ನ್ಯಾಯಾಧೀಶರ ಮೂಲಕ ನ್ಯಾಯಾಂಗ ತನಿಖೆಗೆ ಮಾಡಬೇಕೆಂದು ಹೈಕೋರ್ಟ್ ಏ.4ರಂದು ಆದೇಶ ನೀಡಿದ್ದರಿಂದ ರಾಜ್ಯ ಸರಕಾರಕ್ಕೆ ಮೊದಲ ಹಿನ್ನಡೆಯಾಗಿದೆ ಹಾಗೂ ನಮ್ಮ ಹೋರಾಟಕ್ಕೆ ನ್ಯಾಯ ಸಿಗುವ ಭರವಸೆ ಇದೆ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

ನರಗುಂದ: ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಹೋರಾಟಗಾರರ ಮೇಲೆ ನಡೆಸಿದ ಪೊಲೀಸ್ ಲಾಠಿ ಚಾರ್ಜ್‌ ವಿರೋಧಿಸಿ ಹೈಕೋರ್ಟ್ ಮೊರೆ ಹೋಗಲಾಗಿತ್ತು. ಈ ಘಟನೆ ಕುರಿತು ನಿವೃತ್ತ ನ್ಯಾಯಾಧೀಶರ ಮೂಲಕ ನ್ಯಾಯಾಂಗ ತನಿಖೆಗೆ ಮಾಡಬೇಕೆಂದು ಹೈಕೋರ್ಟ್ ಏ.4ರಂದು ಆದೇಶ ನೀಡಿದ್ದರಿಂದ ರಾಜ್ಯ ಸರಕಾರಕ್ಕೆ ಮೊದಲ ಹಿನ್ನಡೆಯಾಗಿದೆ ಹಾಗೂ ನಮ್ಮ ಹೋರಾಟಕ್ಕೆ ನ್ಯಾಯ ಸಿಗುವ ಭರವಸೆ ಇದೆ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.ಅವರು ಶನಿವಾರ ತಮ್ಮ ಸ್ವಗೃಹದಲ್ಲಿನ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದ ವೀರಶೈವ ಪಂಚಮಸಾಲಿ ಸಮಾಜದ ಹೋರಾಟಗಾರರ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್‌ ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ವರ್ತನೆಯನ್ನು ಖಂಡಿಸಲಾಗಿತ್ತು. ಲಾಠಿ ಚಾರ್ಜ್‌ ಮಾಡಿರುವ ಪೊಲೀಸ್‌ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು ಮತ್ತು ನ್ಯಾಯಾಂಗ ತನಿಖೆಗೊಳಪಡಿಸಬೇಕೆಂದು ಹೈಕೋರ್ಟ್‌ನಲ್ಲಿ ತೀರ್ಪು ಬಂದಿದೆ ಎಂದರು.ರಾಜ್ಯದಲ್ಲಿನ 80 ಲಕ್ಷ ಜನಸಂಖ್ಯೆವುಳ್ಳ ಪಂಚಮಸಾಲಿ ಸಮಾಜದ ಅತ್ಯಂತ ಹಿಂದುಳಿದ ಬಡ ಜನತೆಗೆ ಶೈಕ್ಷಣಿಕ ಮತ್ತು ಔದ್ಯೋಗಿಕ ಸವಲತ್ತುಗಳನ್ನು ಒದಗಿಸುವ ಉದ್ದೇಶದಿಂದ 2ಎ ಮೀಸಲಾತಿ ನೀಡಬೇಕೆಂದು ಹೋರಾಟ ಮಾಡಲಾಗುತ್ತಿದೆ. ಇದರ ಹಿಂದೆ ಯಾವುದೇ ದುರುದ್ದೇಶವಿಲ್ಲ. ಆದರೆ ರಾಜ್ಯ ಸಿಎಂ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರವು ನಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನವನ್ನು ಮಾಡಿದೆ ಎಂದರು.ಮುಸ್ಲಿಂರಿಗೆ ಮೀಸಲಾತಿ ನೀಡಿದರೆ ಅದು ಸಂವಿಧಾನ ವಿರೋಧವಲ್ಲ, ವೀರಶೈವ ಪಂಚಮಸಾಲಿ ಸಮಾಜದಲ್ಲಿನ ಹಿಂದುಳಿದ ಜನರಿಗೆ ಮೀಸಲಾತಿ ನೀಡಿರೆಂದು ಕೇಳಿದರೆ ಅದು ಸಂವಿಧಾನದ ವಿರೋಧವಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿ ಕೆ. ಶಿವಕುಮಾರ ಹೇಳುವುದನ್ನು ನೋಡಿದರೆ, ಇವರು ಮುಸ್ಲಿಂ ಓಲೈಕೆ ರಾಜಕಾರಣ ಮಾಡುತ್ತಿರುವುದು ಎದ್ದು ಕಾಣುತ್ತಿದೆ ಎಂದರು.

ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಡಾ.ಸಿ. ಕೆ. ರಾಚನಗೌಡ್ರ, ನಾಗನಗೌಡ ತಿಮ್ಮನಗೌಡ್ರ, ಎಸ್ .ಆರ್. ಪಾಟೀಲ, ನಿಂಗಣ್ಣ ಗಾಡಿ, ಪ್ರಕಾಶಗೌಡ ತಿರಕನಗೌಡ್ರ ಹಾಗೂ ಪುರಸಭೆ ಸದಸ್ಯರು ಹಾಗೂ ಸಮಾಜ ಬಾಂಧವರಿದ್ದರು.

Share this article