ಹಾವೇರಿ: ಜಿಲ್ಲೆಯಲ್ಲಿ ಕೆಂಪು ಮಣ್ಣಿನ ಹಗಲುದರೋಡೆ ಎಗ್ಗಿಲ್ಲದೇ ಸಾಗಿದ್ದು, ಈಗ ಸರ್ಕಾರದ ಜಮೀನಿನ ಮಣ್ಣನ್ನೇ ಲೂಟಿ ಹೊಡೆಯುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ತಾಲೂಕಿನ ಕರ್ಜಗಿ ಬಳಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ)ಗೆ ಸೇರಿರುವ 407 ಎಕರೆ ವಿಸ್ತಾರದ ಜಮೀನಿನ ಮೇಲೆ ಮಣ್ಣುಗಳ್ಳರ ದೃಷ್ಟಿ ಬಿದ್ದಿದೆ. ಹಗಲು- ರಾತ್ರಿಯೆನ್ನದೇ ಈ ಪ್ರದೇಶದಲ್ಲಿನ ಕೆಂಪು ಮಣ್ಣನ್ನು ಬಗೆದು ಸಾಗಿಸಲಾಗುತ್ತಿದೆ. ಮನೆ ಕಟ್ಟುವವರು, ರಸ್ತೆ ಇತ್ಯಾದಿ ನಿರ್ಮಾಣ ಕಾಮಗಾರಿಗೆ ಕೆಂಪು ಮಣ್ಣು(ಗೊರಚು) ಅಗತ್ಯವಿದ್ದು, ಇದನ್ನೇ ಲೂಟಿಕೋರರು ಬಂಡವಾಳ ಮಾಡಿಕೊಂಡಿದ್ದಾರೆ.ಜೆಸಿಬಿಯಿಂದ ಮಣ್ಣು ತೆಗೆದು ಹತ್ತಾರು ಟಿಪ್ಪರ್‌ಗಳ ಮೂಲಕ ಇಲ್ಲಿಯ ಮಣ್ಣನ್ನು ಮಾರಿ ಲಾಭ ಮಾಡಿಕೊಳ್ಳುವ ಮಾಫಿಯಾವೇ ಸೃಷ್ಟಿಯಾಗಿದೆ. ಕೆಂಪು ಮಣ್ಣಿಗೆ ಭಾರಿ ಬೇಡಿಕೆ ಇದ್ದು, ನಗರದಿಂದ ಕೇವಲ 8 ಕಿಮೀ ದೂರದಲ್ಲೇ ಸಿಗುತ್ತಿರುವುದು ಲೂಟಿಕೋರರಿಗೆ ಮತ್ತಷ್ಟು ಲಾಭ ತಂದುಕೊಡುತ್ತಿದೆ. ರಾಮಾಪುರ ಗ್ರಾಮದ ಖಾಸಗಿ ಜಮೀನಿನಲ್ಲಿ ಅನುಮತಿ ಇಲ್ಲದೇ ಮಣ್ಣು ಲೂಟಿ ಮಾಡಲಾಗುತ್ತಿದೆ.
ಕೆಐಎಡಿಬಿ ಅಧಿಕಾರಿಗಳು ಹೇಳಿದರೂ ಲೂಟಿಕೋರರು ಕ್ಯಾರೇ ಎನ್ನುತ್ತಿಲ್ಲ. ನಿರಂತರವಾಗಿ ಮಣ್ಣು ತೆಗೆದು ಹೊಂಡ ಮಾಡಲಾಗಿದ್ದು, ಮಳೆಗಾಲದಲ್ಲಿ ನೀರು ನಿಲ್ಲುವಂತಾಗಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಕೂಡ ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ನೋಡಿದರೆ ಅಧಿಕಾರಿಗಳೂ ಶಾಮೀಲಾಗಿರುವ ಶಂಕೆಯನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ.ಕಟ್ಟುನಿಟ್ಟಿನ ಕ್ರಮ: ಕೆಐಎಡಿಬಿಗೆ ಸೇರಿದ ಜಾಗದಲ್ಲಿ ಮಣ್ಣು ಗಣಿಗಾರಿಕೆ ಮಾಡುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ. ಒಂದು ವೇಳೆ ಅಲ್ಲಿ ಮಣ್ಣು ತೆಗೆದರೆ ಕೇಸ್ ದಾಖಲಿಸುವಂತೆಯೂ ತಿಳಿಸಿದ್ದೇನೆ ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದೇನೆ.ಬೈಚವಳ್ಳಿ ಪಿಎಚ್‌ಸಿಗೆ ಶಾಸಕ ಮಾನೆ ಭೇಟಿ
ಹಾನಗಲ್ಲ: ತಾಲೂಕಿನ ಬೈಚವಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗುರುವಾರ ಶಾಸಕ ಶ್ರೀನಿವಾಸ ಮಾನೆ ಅವರು ದಿಢೀರ್ ಭೇಟಿ ನೀಡಿ ಉತ್ತಮ ಸೇವೆ ನೀಡುತ್ತಿರುವ ಸಿಬ್ಬಂದಿಯನ್ನು ಅಭಿನಂದಿಸಿ, ಸೌಲಭ್ಯಗಳ ಪರಿಶೀಲನೆ ನಡೆಸಿದರು.ಹೊರರೋಗಿಗಳ ವಿಭಾಗ, ಒಳರೋಗಿಗಳ ವಿಭಾಗ, ಔಷಧ ವಿಭಾಗ ಸೇರಿದಂತೆ ಪ್ರತಿಯೊಂದು ವಿಭಾಗಗಳಿಗೂ ತೆರಳಿ ಅಗತ್ಯ ಮಾಹಿತಿ ಪಡೆದರು. ಕೇಂದ್ರವನ್ನು ಸ್ವಚ್ಛವಾಗಿಟ್ಟುಕೊಂಡು ಉತ್ತಮ ಸೇವೆ ನೀಡುತ್ತಿರುವ ಸಿಬ್ಬಂದಿಯ ಸೇವೆ ಸಾರ್ಥಕವಾಗಿದೆ. ರೋಗಿಗಳ ಸೇವೆ ಎಂದರು ಅದು ಭಗವಂತನ ಸೇವೆಯಾಗಿದೆ. ಅಗತ್ಯ ಸೌಲಭ್ಯಗಳನ್ನು ಶೀಘ್ರ ಒದಗಿಸಲಾಗುವುದು ಎಂದರು.ಪ್ರಯೋಗಾಲಯಕ್ಕೆ ಕಾಯಂ ಸಿಬ್ಬಂದಿ ಇಲ್ಲದೇ ರೋಗಿಗಳನ್ನು ಅರಳೇಶ್ವರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗುತ್ತಿದೆ ಎಂಬ ಮಾಹಿತಿ ಸಿಬ್ಬಂದಿ ಗಮನಕ್ಕೆ ತಂದಾಗ ಅರಳೇಶ್ವರ ಗ್ರಾಮಕ್ಕೆ ತೆರಳಲು ಅನಾನುಕೂಲವಾಗಲಿದ್ದು, ಹಾನಗಲ್ಲ ತಾಲೂಕಾಸ್ಪತ್ರೆಗೆ ಕಳುಹಿಸುವಂತೆ ಸೂಚಿಸಿದರು.ನಿತ್ಯವೂ ಕನಿಷ್ಠ ಹೊರರೋಗಿಗಳ ವಿಭಾಗದಲ್ಲಿ 100 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಭಾಗದ ಜನತೆ ಹೆರಿಗೆಗೆ ಮುಂಡಗೋಡ ತಾಲೂಕು ವ್ಯಾಪ್ತಿಗೆ ಬರುವ ಪಾಳಾ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರ ಇಲ್ಲವೇ ಹಾನಗಲ್ಲ ತಾಲೂಕಾಸ್ಪತ್ರೆಗೆ ತೆರಳುತ್ತಾರೆ ಎಂದು ಆಡಳಿತ ವೈದ್ಯಾಧಿಕಾರಿ ಡಾ. ಚನ್ನಬಸಯ್ಯ ವಿರಕ್ತಮಠ ಗಮನ ಸೆಳೆದಾಗ ಸೇವೆ ಇನ್ನಷ್ಟು ಉತ್ತಮ ಪಡಿಸಿ, ಸಾಮಾನ್ಯ ಹೆರಿಗೆಗಳನ್ನು ಸಾಧ್ಯವಾದಷ್ಟು ಕೇಂದ್ರದಲ್ಲಿಯೇ ನೆರವೇರಿಸಿ. ಲಭ್ಯ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಸೇವೆ ನೀಡುವಂತೆ ತಿಳಿಸಿದರು.ಜಿಪಂ ಮಾಜಿ ಸದಸ್ಯ ಟಾಕನಗೌಡ ಪಾಟೀಲ, ಕೆಎಂಎಫ್ ನಿರ್ದೇಶಕ ಚಂದ್ರಪ್ಪ ಜಾಲಗಾರ, ಮುಖಂಡ ಉಮೇಶ ದಾನಪ್ಪನವರ ಇದ್ದರು.