ಬಾಬು ಜಗಜೀವನ್‌ರಾಂ ಅವರ ಜೀವನ ಆದರ್ಶ ಮೌಲ್ಯಗಳು ಎಲ್ಲರಿಗೂ ಮಾದರಿ

KannadaprabhaNewsNetwork |  
Published : Apr 09, 2025, 12:32 AM IST
ಚಿತ್ರ : 6ಎಂಡಿಕೆ9 : ಡಾ. ಬಾಬು ಜಗಜೀವನ್‌ರಾಂ ಜಯಂತಿ ಕಾರ್ಯಕ್ರಮದ ಉದ್ಘಾಟನೆ.  | Kannada Prabha

ಸಾರಾಂಶ

ಶೋಷಿತ ವರ್ಗಕ್ಕೆ ನ್ಯಾಯ ಒದಗಿಸುವಲ್ಲಿ ಬಾಬು ಜಗಜೀವನ್‌ರಾಂ ಶ್ರಮಿಸಿದ್ದು, ಇಂತಹ ಮಹಾನ್‌ ನಾಯಕರನ್ನು ಸದಾ ಸ್ಮರಿಸುವಂತಾಗಬೇಕು ಎಂದು ಗಣ್ಯರು ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಬಾಬು ಜಗಜೀವನ್ ರಾಮ್ ಅವರು ಹಸಿರು ಕ್ರಾಂತಿಯ ಹರಿಕಾರರಾಗಿ, ರಕ್ಷಣಾ ಸಚಿವರಾಗಿ ಉತ್ತಮ ಕೆಲಸ, ಕಾರ್ಮಿಕ ಸಚಿವರಾಗಿ ದುಡಿಯುವ ವರ್ಗದ ಹಿತರಕ್ಷಣೆ, ಸಮಾಜದ ಶೋಷಿತ ಸಮುದಾಯಗಳ ಧ್ವನಿಯಾಗಿದ್ದ ರಾಷ್ಟ್ರದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಂ ಅವರ ಜೀವನ ಸಾಧನೆಗಳನ್ನು ಪ್ರತಿಯೊಬ್ಬರೂ ಸ್ಮರಿಸುವಂತಾಗಬೇಕು ಎಂದು ಡಾ. ಮಂತರ್‌ಗೌಡ ತಿಳಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಗರದ ಗಾಂಧಿಭವನದಲ್ಲಿ ನಡೆದ ಹಸಿರುಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನ್ ರಾಂ ಅವರ 118 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಶೋಷಿತ ವರ್ಗಕ್ಕೆ ಸಾಮಾಜಿಕ ನ್ಯಾಯ ದೊರಕಿಸುವಲ್ಲಿ ಬಾಬು ಜಗಜೀವನ್ ರಾಂ ಅವರು ಶ್ರಮಿಸಿದ್ದು, ಇಂತಹ ಮಹಾನ್ ನಾಯಕರನ್ನು ಸದಾ ಸ್ಮರಿಸುವಂತಾಗಬೇಕು ಎಂದರು.

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ.ಡಾ.ಶ್ರೀಧರ ಹೆಗಡೆ ಮಾತನಾಡಿ, ಹಸಿರು ಕ್ರಾಂತಿಯ ಹರಿಕಾರ ರಾಷ್ಟ್ರದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಂ ಅವರ ಆದರ್ಶ ಜೀವನ ಮೌಲ್ಯಗಳು ನಮ್ಮೆಲ್ಲರಿಗೂ ಮಾದರಿಯಾಗಿವೆ ಎಂದು ಹೇಳಿದರು.

ಬಾಬು ಜಗಜೀವನ್ ರಾಂ ಅವರು ಬಿಹಾರದಲ್ಲಿ ಬಡ ಕುಟುಂಬದಲ್ಲಿ ಜನಿಸಿ ಬಾಲ್ಯ ಜೀವನವನ್ನು ಕಷ್ಟದಿಂದಲೇ ಎದುರಿಸಿದವರು. ತಮ್ಮ ಜೀವನದುದ್ದಕ್ಕೂ ಹೋರಾಟದ ಮೂಲಕ ಬೆಳವಣಿಗೆ ಕಂಡು ರಾಜಕೀಯ ಪ್ರವೇಶ ಮಾಡಿ ಕೇಂದ್ರ ಸರ್ಕಾರದ ಸಚಿವ ಸಂಪುಟದಲ್ಲಿ ಅತ್ಯಂತ ಕಿರಿ ವಯಸ್ಸಿನ ಸಚಿವರಾಗಿ ಕಾರ್ಯನಿರ್ವಹಣೆ ಮಾಡಿದ ಸಾಧನೆ ಬಾಬು ಜಗಜೀವನ್ ರಾಂ ಅವರದ್ದಾಗಿದೆ ಎಂದರು.

ದೇಶದ ರಕ್ಷಣಾ ಸಚಿವರಾಗಿ ದೇಶದ ಬಾಹ್ಯ ಹಾಗೂ ಆಂತರಿಕ ಭದ್ರತೆಗೆ ಭದ್ರ ಬುನಾದಿ ಹಾಕುವ ಮೂಲಕ ದೇಶದ ಅಭಿವೃದ್ಧಿಗೆ ತಮ್ಮದೇ ಕೊಡುಗೆಯನ್ನು ನೀಡಿದವರು ಎಂದು ಬಾಬು ಜಗಜೀವನ್ ರಾಂ ಅವರ ಆದರ್ಶ ಜೀವನದ ಮೆಲುಕು ಹಾಕಿದರು.

ಪ್ರಮುಖರಾದ ಎಚ್.ಎಲ್.ದಿವಾಕರ, ಪ್ರೇಮ ಕೃಷ್ಣಪ್ಪ, ಪ್ರೇಮಕುಮಾರ್, ಮೋಹನ್ ಮೌರ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇತರರು ಇದ್ದರು.

ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶೇಖರ್ ಸ್ವಾಗತಿಸಿದರು. ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಬಾಲಕೃಷ್ಣ ರೈ ನಿರೂಪಿಸಿ, ವಂದಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ