ತಾಂಡಗಳನ್ನು ಸರ್ಕಾರ ಕಂದಾಯ ಗ್ರಾಮಗಳಾಗಿ ಘೋಷಿಸಲಿ

KannadaprabhaNewsNetwork |  
Published : Apr 09, 2025, 12:32 AM IST
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಬಂಜಾರ ಸಂಘದಿಂದ ಏರ್ಪಡಿಸಿದ್ದ ಸಂತ ಶ್ರೀ ಸೇವಾಲಾಲ್ ಮಹಾರಾಜರ 286ನೇ ಜಯಂತ್ಯೋತ್ಸವ ಹಾಗೂ ಬಂಜಾರ ಜಾಗೃತಿ ಸಮಾವೇಶದ ಉದ್ಘಾಟನೆಯನ್ನು ನೆರವೇರಿಸಿದ ಶಾಸಕ ಬಸವರಾಜ ವಿ.ಶಿವಗಂಗಾ | Kannada Prabha

ಸಾರಾಂಶ

ಬಂಜಾರ ಸಮುದಾಯ ವಾಸಿಸುವ ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ಸರ್ಕಾರ ನಿರ್ಧರಿಸಿ, ಘೋಷಣೆ ಮಾಡಬೇಕಾಗಿದೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದ್ದಾರೆ.

- ಚನ್ನಗಿರಿಯಲ್ಲಿ ಸೇವಾಲಾಲ್ ಜಯಂತ್ಯುತ್ಸವ, ಬಂಜಾರ ಜಾಗೃತಿ ಸಮಾವೇಶದಲ್ಲಿ ಡಾ.ಪ್ರಭಾ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ಬಂಜಾರ ಸಮುದಾಯ ವಾಸಿಸುವ ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ಸರ್ಕಾರ ನಿರ್ಧರಿಸಿ, ಘೋಷಣೆ ಮಾಡಬೇಕಾಗಿದೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ಸೋಮವಾರ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಬಂಜಾರ ಸಂಘದಿಂದ ಏರ್ಪಡಿಸಿದ್ದ ಸಂತ ಶ್ರೀ ಸೇವಾಲಾಲ್ ಮಹಾರಾಜರ 286ನೇ ಜಯಂತ್ಯುತ್ಸವ ಹಾಗೂ ಬಂಜಾರ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂರಗೊಂಡನಕೊಪ್ಪದಲ್ಲಿ ಬಂಜಾರ ಸಮುದಾಯದ ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ಹೈಟೆಕ್ ವಸತಿ ಶಾಲೆಯನ್ನು ನಿರ್ಮಿಸಲು ಬಜೆಟ್‌ನಲ್ಲಿ ಹಣ ಮೀಸಲಿಟ್ಟಿದ್ದಾರೆ. ಇದು ಪ್ರಶಂಸನೀಯ ಎಂದರು.

ಬಂಜಾರರ ಕಸೂತಿ ಕಲೆ ಉಳಿಸಿ, ಬೆಳೆಸಲು 2 ಸಾವಿರ ವಿದ್ಯಾರ್ಥಿಗಳಿಗೆ ಕಸೂತಿ ಕಲೆ ತರಬೇತಿಗಾಗಿ ಟೂಲ್ ಕಿಟ್‌ಗಳನ್ನು ನೀಡಿ ತರಬೇತಿ ನೀಡಲು ಉದ್ದೇಶಿಸಲಾಗಿದೆ. ದಾವಣಗೆರೆಯ ಎಸ್.ಎಸ್.ಕೇರ್ ಟ್ರಸ್ಟ್ ವತಿಯಿಂದ ಬಿಪಿಎಲ್ ಕಾರ್ಡ್ ಹೊಂದಿದ ಬಡಜನರಿಗೆ ಕಿಡ್ನಿ ತೊಂದರೆ ಇರುವವರಿಗೆ ಉಚಿತ ಡಯಾಲಿಸಿಸ್ ಸೇವೆ ನೀಡಲಾಗುವುದು. ಮಹಿಳೆಯರು ಗರ್ಭಧಾರಣೆಯ 3ರಿಂದ 5 ತಿಂಗಳ ಒಳಗೆ ನೋಂದಣಿ ಮಾಡಿಸಿ, ಕಾರ್ಡ್‌ ಪಡೆದರೆ ಉಚಿತ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು. ಸಹಜ ಹೆರಿಗೆಯಿಂದ ಹಿಡಿದು ಸಿಜೇರಿಯನ್ ಮೂಲಕವಾದರೂ ಹೆರಿಗೆ ಮಾಡಿಸುತ್ತೇವೆ. ಕಣ್ಣಿನ ಪರೀಕ್ಷೆ ಶಸ್ತ್ರಚಿಕಿತ್ಸೆಯನ್ನು ಬಾಪೂಜಿ ಆಸ್ಪತ್ರೆ ಎಸ್.ಎಸ್. ಹೈಟೆಕ್ ಆಸ್ಪತ್ರೆಯಲ್ಲಿ ನೀಡುತ್ತೇವೆ. ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು.

ಶಾಸಕ ಬಸವರಾಜ ವಿ. ಶಿವಗಂಗಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಚನ್ನಗಿರಿ ಕ್ಷೇತ್ರದ ರಾಜಕಾರಣ ಇತಿಹಾಸದಲ್ಲಿಯೇ ಬಂಜಾರ ಸಮುದಾಯದ 9 ಜನ ತಾಲೂಕುಮಟ್ಟದ ಅಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಇದು ಬಂಜಾರ ಸಮುದಾಯ ಮೇಲೆ ಇಟ್ಟಿರುವ ಅಭಿಮಾನವಾಗಿದೆ. ಲಂಬಾಣಿ ಜನಾಂಗ ನಮ್ಮ ಕಾಂಗ್ರೆಸ್ ಪಕ್ಷವನ್ನು ಕ್ಷೇತ್ರದಲ್ಲಿ ಕೈ ಹಿಡಿದು ಬೆಳೆಸಿದೆ. ಈ ಜನಾಂಗದಲ್ಲಿ ಇರುವ ಸಾಂಪ್ರದಾಯಿಕ ಉಡುಪುಗಳು ವಿಶೇಷವಾಗಿದೆ ಎಂದು ಶ್ಲಾಘಿಸಿದರು.

ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ ಅಧ್ಯಕ್ಷ ಎನ್.ಜಯದೇವ ನಾಯ್ಕ್ ಮಾತನಾಡಿ, ಸುಪ್ರೀಂ ಕೋರ್ಟ್ ಒಳಮೀಸಲಾತಿ ಜಾರಿಗೊಳಿಸಲು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ. ಯಾರಿಗೂ ಅನ್ಯಾಯ ಆಗದಂತೆ ಒಳಮೀಸಲಾತಿ ಜಾರಿಗೆ ಸರ್ಕಾರ ಸಿದ್ಧತೆ ನಡೆಸಿದೆ ಎಂದರು.

ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, 2008ರಲ್ಲಿ ಮುಖ್ಯಮಂತ್ರಿ ಆಗಿದ್ದ ಬಿ.ಎಸ್. ಯಡಿಯೂರಪ್ಪ ಸೂರಗೊಂಡನಕೊಪ್ಪವನ್ನು ಬೆಳಕಿಗೆ ತಂದು ಸುಮಾರು ₹2 ಕೋಟಿ ಅನುದಾನ ನೀಡಿ ಅಭಿವೃದ್ಧಿ ಪ್ರಾರಂಭಿಸಿದ್ದರು. ಆಗಲೇ ಬಂಜಾರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದರು. ಆ ಅಭಿವೃದ್ಧಿ ನಿಗಮದಿಂದ ಕ್ಷೇತ್ರದಲ್ಲಿರುವ 27 ತಾಂಡಗಳಲ್ಲೂ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಿದ್ದೇನೆ ಎಂದರು.

ಲಂಬಾಣಿ ಜನಾಂಗ ತಾಲೂಕಿನ ಕಸಬಾ ಮತ್ತು ಉಬ್ರಾಣಿ ಹೋಬಳಿಗಳಲ್ಲಿ ಹೆಚ್ಚಾಗಿ ವಾಸಮಾಡುತ್ತಿದೆ. ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಗರ್‌ಹುಕುಂ ಜಮೀನು ಸಾಗುವಳಿ ಮಾಡಿದ್ದಾರೆ. ಅವರಿಗೆ ಹಕ್ಕುಪತ್ರಗಳನ್ನು ಕೊಡಿಸಲು ಶಾಸಕನಾಗಿದ್ದಾಗ ಸ್ಕೆಚ್ ಮಾಡಿಸಿದ್ದೆ. ಈಗ ಅವರಿಗೆ ನೋಟಿಸ್ ನೀಡುತ್ತಿದ್ದಾರೆ. ಉಳುವವನಿಗೆ ಭೂಮಿ ಸಿಗಬೇಕು ಎಂದರು.

ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಚಿತ್ರದುರ್ಗ ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಮಹಾಸ್ವಾಮೀಜಿ ವಹಿಸಿ, ಆಶೀರ್ವಚನ ನೀಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲಾಯಿತು. ಅಧ್ಯಕ್ಷತೆಯನ್ನು ತಾಲೂಕು ಬಂಜಾರ ಸಂಘ ಅಧ್ಯಕ್ಷ ಬಿ.ಎನ್.ವೀರೇಶ್ ನಾಯ್ಕ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಮಾಯಕೊಂಡ ಕ್ಷೇತ್ರದ ಶಾಸಕ ಕೆ.ಎಸ್.ಬಸವಂತಪ್ಪ, ಮಾಜಿ ಶಾಸಕರಾದ ಎಂ.ಬಸವರಾಜ ನಾಯ್ಕ್, ಮಹಿಮಾ ಜೆ. ಪಟೇಲ್, ರಾಜ್ಯ ಕೆಪಿಸಿಸಿ ವಕ್ತಾರ ಹೊದಿಗೆರೆ ರಮೇಶ್, ತುಮ್ ಕೋಸ್ ಅಧ್ಯಕ್ಷ ಎಚ್.ಎಸ್. ಶಿವಕುಮಾರ್, ಕೆ.ಪಿ.ಎಸ್.ಸಿ. ಸದಸ್ಯ ನಾಗವೇಣಿ, ಗಾಯಕ ರಮೇಶ್ ಎಂ.ಲಮಾಣಿ, ಕೆಪಿಸಿಸಿ ಸದಸ್ಯ ವಡ್ನಾಳ್ ಜಗದೀಶ್, ಮೊದಲಾದವರು ಹಾಜರಿದ್ದರು.

- - - ಕೋಟ್‌ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಂತ ಸೇವಾಲಾಲ್ ಹೆಸರಿನಲ್ಲಿ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ 1 ಲಕ್ಷ ಪ್ರಶಸ್ತಿಯನ್ನು ನೀಡುತ್ತಿದೆ. ಈ ಬಾರಿ ಸಾಹಿತಿ ಬಿ.ಟಿ. ಲಲಿತಾ ನಾಯಕ್ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ

- ಬಸವರಾಜ ಶಿವಗಂಗಾ, ಶಾಸಕ, ಚನ್ನಗಿರಿ ಕ್ಷೇತ್ರ

- - -

-7ಕೆಸಿಎನ್‌ಜಿ5.ಜೆಪಿಜಿ: ಚನ್ನಗಿರಿಯಲ್ಲಿ ಸಂತ ಶ್ರೀ ಸೇವಾಲಾಲ್ ಮಹಾರಾಜರ 286ನೇ ಜಯಂತ್ಯುತ್ಸವ, ಬಂಜಾರ ಜಾಗೃತಿ ಸಮಾವೇಶದ ಉದ್ಘಾಟನೆಯನ್ನು ಶಾಸಕ ಬಸವರಾಜ ವಿ.ಶಿವಗಂಗಾ ನೆರವೇರಿಸಿದರು. -7ಕೆಸಿಎನ್‌ಜಿ6.ಜೆಪಿಜಿ: ಸಂತ ಸೇವಾಲಾಲ್, ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಪುಷ್ಪನಮನ ಸಲ್ಲಿಸಿದರು. -7ಕೆಸಿಎನ್‌ಜಿ7.ಜೆಪಿಜಿ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗೌರವಿಸಲಾಯಿತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ