
ನಗರದಲ್ಲಿ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್‌ರಾಮ್ ಜನ್ಮ ದಿನಾಚರಣೆ ಉದ್ಘಾಟನೆ
ದೇಶದ ಹಸಿವು ನೀಗಿಸಿದ ಹಸಿರು ಕ್ರಾಂತಿ ರೂವಾರಿ ಹಾಗೂ ಅಸಮಾನತೆ ವಿರುದ್ಧ ಸಂಘಟಿತ ಹೋರಾಟ ಕಟ್ಟಿದ ಮಹಾನ್ ಚೇತನ ಡಾ.ಬಾಬು ಜಗಜೀವನ್ ರಾಮ್ ಬದುಕು ಯುವಜನತೆಗೆ ದಾರಿದೀಪ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಹೇಳಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತ ಭಾನುವಾರ ಆಯೋಜಿಸಿದ್ದ ಹಸಿರು ಕ್ರಾಂತಿ ಹರಿಕಾರ, ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್‌ರಾಮ್ ಅವರ 119ನೇ ಜನ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿ ಬಾಬೂಜಿ ಕೇವಲ ಒಬ್ಬ ರಾಜಕಾರಣಿಯಾಗಿರಲಿಲ್ಲ. ಅವರು ಈ ದೇಶದ ರೈತರು, ಕಾರ್ಮಿಕರು ಮತ್ತು ದಲಿತರ ಧ್ವನಿಯಾಗಿದ್ದರು. ಸ್ವಾತಂತ್ರ್ಯ ಹೋರಾಟದಿಂದ ಹಿಡಿದು, ದೇಶದ ರಕ್ಷಣಾ ಸಚಿವರಾಗಿ ಮತ್ತು ಉಪಪ್ರಧಾನಿಯಾಗಿ ನೀಡಿದ ಕೊಡುಗೆ ಅಪಾರ ಎಂದು ತಿಳಿಸಿದರು.ವಿದ್ಯಾರ್ಥಿ ದೆಸೆಯಿಂದಲೇ ದೇಶದ ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧೀಜಿಯೊಂದಿಗೆ ಹೋರಾಡಿದ ಬಾಬೂಜೀ. ದೇಶ ಆಹಾರದ ಕ್ಷಾಮ ಎದುರಿಸುತ್ತಿದ್ದ ಸಂದರ್ಭದಲ್ಲಿ ಕೃಷಿ ಮಂತ್ರಿಯಾಗಿ ರೈತರಿಗೆ ಧೈರ್ಯ ತುಂಬಿ, ‘ಹಸಿರು ಕ್ರಾಂತಿ’ಯ ಮೂಲಕ ಭಾರತವನ್ನು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಹಾಕಿಕೊಟ್ಟ ದಾರಿಯಲ್ಲಿ ನಾವಿಂದು ಸಾಗಬೇಕಿದೆ. ಸಮಾಜ ದಲ್ಲಿ ಇಂದಿಗೂ ಅಲ್ಲಲ್ಲಿ ಕಂಡು ಬರುತ್ತಿರುವ ಅಸ್ಪೃಶ್ಯತೆ ಮತ್ತು ತಾರತಮ್ಯ ಬೇರು ಸಹಿತ ಕಿತ್ತೆಸೆಯಬೇಕು. ಜಾತಿ ವ್ಯವಸ್ಥೆ ನಿರ್ಮೂಲನೆಯಾದಾಗ ಮಾತ್ರ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಗಲು ಸಾಧ್ಯ. ಯುವಕರು ಮತ್ತು ವಿದ್ಯಾರ್ಥಿಗಳು ಬಾಬೂಜೀ ಅವರ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಭಯಮುಕ್ತ ವಾತಾವರಣದಲ್ಲಿ ಎಲ್ಲರೂ ಒಂದಾಗಿ ಬಾಳುವಂತಾಗಬೇಕು ಎಂದರು.
ಬಾಬೂಜಿಯವರು ವಿದ್ಯಾರ್ಥಿ ಜೀವನದಲ್ಲೇ ಅಸ್ಪೃಶ್ಯತೆಯಂತಹ ಸಾಮಾಜಿಕ ಪಿಡುಗುಗಳ ವಿರುದ್ಧ ಧ್ವನಿ ಎತ್ತಿದ್ದರು. ಶಾಲಾ ದಿನಗಳಲ್ಲಿ ಮಡಕೆ ಒಡೆದು ಪ್ರತಿಭಟಿಸುವ ಮೂಲಕ ತಮ್ಮ ಧೈರ್ಯ ಪ್ರದರ್ಶಿಸಿದ್ದರು.
ಜಾತಿ ಪದ್ಧತಿಯ ನಿರ್ಮೂಲನೆಗೆ ಆರ್ಥಿಕ ಸಬಲೀಕರಣ ಅತಿ ಮುಖ್ಯ. ಆರ್ಥಿಕವಾಗಿ ಸದೃಢರಾದಾಗ ಮಾತ್ರ ಗೌರವಯುತ ಜೀವನ ಸಾಧ್ಯ ಎಂದರು.
ಬಾಬು ಜಗಜೀವನ್ ರಾಮ್ ಅವರ ವ್ಯಕ್ತಿತ್ವ ಮತ್ತು ಸಾಧನೆ ಆಳವಾಗಿ ಅಧ್ಯಯನ ಮಾಡುವುದು ಇಂದಿನ ಅಗತ್ಯ. ಅಂತಹ ಮಹಾನ್ ವ್ಯಕ್ತಿಗಳ ಪರಿಚಯ ಮಾಡುವುದು ಸೂಕ್ತವಾಗಲಿದೆ. ಜಗಜೀವನ್ ರಾಮ್ ತೋರಿದ ಹಾದಿ ಕೇವಲ ಭಾರತಕ್ಕೆ ಮಾತ್ರವಲ್ಲ, ಇಡೀ ಪ್ರಪಂಚದ ಶೋಷಿತ ವರ್ಗದ ಹೋರಾಟಕ್ಕೆ ಮಾದರಿಯಾಗಿದೆ ಎಂದರು.
ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಚ್.ಎಸ್.ಕೀರ್ತನಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ. ಜಯಕುಮಾರ್, ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್, ತಹಸೀಲ್ದಾರ್ ರೇಷ್ಮಾ ಶೆಟ್ಟಿ ಇದ್ದರು.
ನಗರದ ತಾಲೂಕು ಕಚೇರಿಯಿಂದ ಕುವೆಂಪು ಕಲಾ ಮಂದಿರದ ವರೆಗೆ ಅಧಿಕಾರಿ ಸಿಬ್ಬಂದಿ ಮರೆವಣಿಗೆ ನಡೆಸಿದರು