ಸವಾಲು ಮೆಟ್ಟಿನಿಂತ ನಾಯಕ ಬಾಬೂಜಿ

KannadaprabhaNewsNetwork |  
Published : Jul 07, 2025, 12:17 AM IST
ಸಿಕೆಬಿ-2 ಮಾಜಿ ಉಪ‌ಪ್ರಧಾನಿ ಡಾ. ಬಾಬು ಜಗಜೀವನರಾಂ ಅವರ 39 ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವೈ.ನವೀನ್ ಭಟ್ ಮಾತನಾಡಿದರು | Kannada Prabha

ಸಾರಾಂಶ

ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಹತ್ತು ಹಲವು ಗಂಭೀರ ಸಮಸ್ಯೆಗಳಿದ್ದವು. ಅನಕ್ಷರತೆ, ಬಡತನ, ಅಪೌಷ್ಟಿಕತೆ, ಆಹಾರದ ಕೊರತೆ ಮತ್ತಿತರ ಸಮಸ್ಯೆಗಳು ಸವಾಲುಗಳಾಗಿದ್ದವು. ಅಂತಹ ಸಂದರ್ಭದಲ್ಲಿ ಸವಾಲುಗಳನ್ನು ದಿಟ್ಟತನದಿಂದ ಮೆಟ್ಟಿ ನಿಂತು ಅಭಿವೃದ್ಧಿಗೆ ನಾಂದಿ ಹಾಡಿದ ಮಹಾನ್ ನಾಯಕರಲ್ಲಿ ಬಾಬೂಜಿ ಒಬ್ಬರು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ‌ಪ್ರಧಾನಿ ಡಾ. ಬಾಬು ಜಗಜೀವನರಾಂ ಕ್ರಾಂತಿಕಾರಕ ನಿಲುವು ಮತ್ತು ಅಭಿವೃದ್ಧಿಯ ಒಲವು ಎರಡನ್ನೂ ಮೈಗೂಡಿಸಿಕೊಂಡಿದ್ದ ಅಪ್ರತಿಮ ನಾಯಕ ಹಾಗೂ ಹೋರಾಟಗಾರ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವೈ.ನವೀನ್ ಭಟ್ ತಿಳಿಸಿದರು.

ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಭಾನುವಾರ ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಮಾಜಿ ಉಪ‌ಪ್ರಧಾನಿ ಡಾ. ಬಾಬು ಜಗಜೀವನರಾಂ ಅವರ 39 ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸವಾಲು ಮೆಟ್ಟಿನಿಂತ ನಾಯಕ

ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಹತ್ತು ಹಲವು ಗಂಭೀರ ಸಮಸ್ಯೆಗಳಿದ್ದವು. ಅನಕ್ಷರತೆ, ಬಡತನ, ಅಪೌಷ್ಟಿಕತೆ, ಆಹಾರದ ಕೊರತೆ ಮತ್ತಿತರ ಸಮಸ್ಯೆಗಳು ಸವಾಲುಗಳಾಗಿದ್ದವು. ಅಂತಹ ಸಂದರ್ಭದಲ್ಲಿ ಸವಾಲುಗಳನ್ನು ದಿಟ್ಟತನದಿಂದ ಮೆಟ್ಟಿ ನಿಂತು ಅಭಿವೃದ್ಧಿಗೆ ನಾಂದಿ ಹಾಡಿದ ಮಹಾನ್ ನಾಯಕರಲ್ಲಿ ಡಾ. ಬಾಬು ಜಗಜೀವನರಾಂ ಕೂಡಾ ಒಬ್ಬರು ಎಂದರು.

ಅಂದಿನ ಕೇಂದ್ರ ಸರ್ಕಾರದಲ್ಲಿ ಹಲವು ಮಹತ್ವದ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿ ಆ ಖಾತೆಗಳಿಗೆ ಸೂಕ್ತ ನ್ಯಾಯ ಕೊಟ್ಟು ಇಂದು ಪ್ರಾತಃಸ್ಮರಣೀಯರಾಗಿ ಉಳಿದಿದ್ದಾರೆ. ಆಹಾರದ ಸಮಸ್ಯೆ ಅತ್ಯಂತ ಗಂಭೀರವಾಗಿದ್ದಾಗ ದೇಶದ ಆಹಾರ ಉತ್ಪಾದನೆಯನ್ನು ಹೆಚ್ಚಿಸಲು ಹಲವು ಮಹತ್ವದ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಹಸಿರು ಕ್ರಾಂತಿಗೆ ನಾಂದಿ ಹಾಡಿದರು. ದೇಶದ ಜನರ ಹಸಿವು ನೀಗಿಸಿದ ದೂರದೃಷ್ಟಿಯ ಧೀಮಂತ ನಾಯಕರಲ್ಲಿ ಬಾಬು ಜಗಜೀವನರಾಂ ಪ್ರಮುಖರು ಎಂದರು.

ನಿರಂತರ ಅಧ್ಯಯನಶೀಲ ಬಾಬೂಜಿ

ಬಾಬು ಜಗಜೀವನರಾಂ ಅವರು ಕಾಶಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿ ಸಂಸ್ಕೃತ ಭಾಷೆಯನ್ನೂ ಕಲಿತು ನಿರಂತರ ಅಧ್ಯಯನಶೀಲರಾಗಿ ಭಾರತೀಯ ಸಂಸ್ಕೃತಿಗೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳು, ಆಶಯಗಳ ಮುಂದುವರೆದ ಭಾಗವಾಗಿ ಬಾಬು ಜಗಜೀವನರಾಂ ಕಾಣುತ್ತಾರೆ. ಬಿಹಾರ ರಾಜ್ಯ ಮೂಲದವರಾದ ಬಾಬೂಜಿರವರು ದೇಶಕ್ಕೆ ಅನೇಕ ಕಾಣಿಕೆಗಳನ್ನು ನೀಡಿ ಹೋಗಿದ್ದಾರೆ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ಅವರು ದೇಶದ ಎರಡು ಕಣ್ಣುಗಳಿದ್ದಂತೆ. ಅವರು ಮಾದರಿ ನಾಯಕರಾಗಿದ್ದಾರೆ. ಅಂತ ಆದರ್ಶಪುರುಷರ ಚಿಂತನೆ, ಆಶಯಗಳ ಹಾದಿಯಲ್ಲಿ ವಿದ್ಯಾರ್ಥಿ ಯುವಜನರು ಸಾಗಿ ಮಹತ್ವವಾದುದನ್ನು ಸಾಧಿಸಿ ದೇಶಕ್ಕೆ ಕೊಡುಗೆಗಳನ್ನು ಸಮರ್ಪಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಈ ಇಬ್ಬರೂ ಮಹನೀಯರನ್ನು ಮತ್ತಷ್ಟು ತಿಳಿದುಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಗಿರಣಿ ಮಾಲೀಕರ ವಿರುದ್ಧ ಹೋರಾಟ

ಮಂಚೇನಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಧ್ಯಾಪಕ ಡಾ. ಯುವರಾಜ್ ಉಪನ್ಯಾಸ ನೀಡಿ, ಸ್ವಾತಂತ್ರ್ಯ ಭಾರತದ ಉಪ ಪ್ರಧಾನ ಮಂತ್ರಿಯಾಗಿ ಸಮಾಜದ ಅಭಿವೃದ್ಧಿಗಾಗಿ ಬಾಬು ಜಗಜೀವನರಾಂ ಅವರು ಹೆಚ್ಚು ಶ್ರಮಿಸಿದ್ದಾರೆ. ಬನಾರಸ್‌ ವಿಶ್ವವಿದ್ಯಾಲಯದಲ್ಲಿ ಬಿ.ಎಸ್.ಸಿ ಓದುವ ಸಂದರ್ಭದಲ್ಲಿ ಅಲ್ಲಿ ಕೆಲಸ ಮಾಡುವವರಿಂದ ಶೋಷಣೆಗೆ ಒಳಗಾದ ದಲಿತರನ್ನು ಕಂಡು ಅಲ್ಲಿರುವ ಎಲ್ಲಾ ದಲಿತ ಕಾರ್ಮಿಕರನ್ನು ಒಗ್ಗೂಡಿಸಿ ಗಿರಣಿ ಮಾಲಿಕರ ವಿರುದ್ಧ ಬೃಹತ್ ಪ್ರತಿಭಟನೆಯನ್ನು ನಡೆಸಿ ಜಯ ಸಾಧಿಸಿದ್ದರು ಎಂದರು.

ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್,ಸಮಾಜಕಲ್ಯಾಣ ಇಲಾಖೆಯ ಉಪ ನಿರ್ಧೇಶಕ ತೇಜಾನಂದರೆಡ್ಡಿ,ಸಹಾಯಕ ನಿರ್ದೇಶಕ ಶೇಷಾದ್ರಿ, ಸರ್ಕಲ್ ಇನ್ಸ್ ಪೆಕ್ಟರ್ ಮಂಜುನಾಥ್, ನಿವೃತ್ತ ಶಿಕ್ಷಕ ಸರ್ದಾರ್ ಚಾಂದ್ ಪಾಷ, ದಲಿತ ಮುಖಂಡರಾದ ಬಿ.ವಿ‌.ಆನಂದ್. ಹೆಚ್.ಶ್ರೀನಿವಾಸ್, ವೇಣು, ಪಟ್ರೇನಹಳ್ಳಿ ಕೃಷ್ಣ, ಮಂಜುನಾಥ್, ಜೀವಿಕ ರತ್ನಮ್ಮ, ಕೇಶವ, ಸಮುದಾಯದ ಮುಖಂಡರು ಇದ್ದರು.

PREV