ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್. ಮಾತನಾಡಿ, ಬಾಬು ಜಗಜೀವನರಾಂ ಅವರು ನಮ್ಮ ದೇಶದ ಸಾಮಾಜಿಕ ಸುಧಾರಣೆಗೆ, ಮಹಿಳಾ ಶಿಕ್ಷಣಕ್ಕೆ, ಅಲ್ಪಸಂಖ್ಯಾತ ಹಕ್ಕುಗಳಿಗೆ ಮತ್ತು ಪರಿಸರ ಸಂರಕ್ಷಣೆಗೆ ಅಪಾರವಾದ ಕೊಡುಗೆಗಳನ್ನು ನೀಡಿದ್ದಾರೆ ಎಂದರು.
ಗದಗ: ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಂ ಅವರ 119 ನೇ ಜಯಂತ್ಯತ್ಸವವನ್ನು ಭಾನುವಾರ ಜಿಲ್ಲಾಡಳಿತ ಭವನದಲ್ಲಿ ಆಚರಿಸಲಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ, ದಲಿತಪರ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಜರುಗಿದ ಡಾ. ಬಾಬು ಜಗಜೀವನ ರಾಂ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್. ಅವರು ಪುಷ್ಪನಮನ ಸಲ್ಲಿಸಿದರು.
ನಂತರ ಮಾತನಾಡಿದ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್. ಅವರು, ಬಾಬು ಜಗಜೀವನರಾಂ ಅವರು ನಮ್ಮ ದೇಶದ ಸಾಮಾಜಿಕ ಸುಧಾರಣೆಗೆ, ಮಹಿಳಾ ಶಿಕ್ಷಣಕ್ಕೆ, ಅಲ್ಪಸಂಖ್ಯಾತ ಹಕ್ಕುಗಳಿಗೆ ಮತ್ತು ಪರಿಸರ ಸಂರಕ್ಷಣೆಗೆ ಅಪಾರವಾದ ಕೊಡುಗೆಗಳನ್ನು ನೀಡಿದ್ದಾರೆ ಎಂದರು.
ಹಸಿರು ಕ್ರಾಂತಿ ಸೇರಿದಂತೆ ಆಹಾರ ಭದ್ರತೆ, ಸಮಾನತೆ ಮತ್ತು ನ್ಯಾಯಕ್ಕಾಗಿ ನಿರಂತರ ಹೋರಾಟ ನಡೆಸಿದವರು. ತಮ್ಮದೇ ಚಿಂತನೆಗಳ ಮೂಲಕ ಸಮಾಜದ ಪ್ರಗತಿಗೆ ದಾರಿದೀಪವಾಗಿದ್ದಾರೆ. ನಾವೆಲ್ಲರೂ ಅವರ ಆದರ್ಶಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡು ಹೋಗುವುದು ಅಗತ್ಯವಾಗಿದೆ ಎಂದರು.
ಇಂದು ಸರಳವಾಗಿ ಜಯಂತಿ ಆಚರಣೆ ಮಾಡಲಾಗಿದೆ. ಏ. 14ರಂದು ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ ರಾಂ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ವಿವಿಧ ಇಲಾಖೆ ಮತ್ತು ಸಂಘಟನೆಗಳ ಸಹಯೋಗದಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಎಸ್.ಎನ್. ಬಳ್ಳಾರಿ, ಡಿ.ಜಿ. ಜೋಗಣ್ಣನವರ, ಸತೀಶ್ ಹೂಲಿ, ಬೇಲೂರ, ಪ್ರವೀಣ ಸೂಡಿ, ಡಿವೈಎಸ್‌ಪಿ ಮುರ್ತುಜಾ ಖಾದ್ರಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಡಾ. ನಂದಾ ಹಣಬರಟ್ಟಿ, ಜಿಲ್ಲಾ ವಾರ್ತಾಧಿಕಾರಿ ವಸಂತ ಮಡ್ಲೂರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಎಚ್.ಬಿ. ಹುಲಗಣ್ಣವರ, ಸಮಾಜದ ಪ್ರಮುಖರು, ದಲಿತ ಚಿಂತಕರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಸಮಾಜದ ಹಿರಿಯರು, ಸಾರ್ವಜನಿಕರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.