ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಬೇಬಿ ಮಠದ ಆವರಣದಲ್ಲಿ ಮಂಗಳವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಅರಸರ ಕಾಲದಿಂದಲೂ ಆಚರಿಸಿಕೊಂಡು ಬಂದಿರುವ ಬೇಬಿ ಬೆಟ್ಟದ ಜಾತ್ರಾ ಮಹೋತ್ಸವ ಆಚರಣೆಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ವಿಶೇಷ ಒತ್ತು ನೀಡಿ ಜಾತ್ರೆ ಯಶಸ್ವಿಗೆ ಸಕಲ ಸಿದ್ಧತೆ ಕೈಗೊಂಡಿದ್ದಾರೆ ಎಂದರು.
ಜಾತ್ರೆಗೆ ಆಗಮಿಸುವ ಜನ ಮತ್ತು ರಾಸುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಆಹಾರ, ಚಿಕಿತ್ಸೆ, ವಿದ್ಯುತ್ ಸಂಪರ್ಕ ಸೇರಿ ಅಗತ್ಯವಿರುವ ಎಲ್ಲಾ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ಜಾತ್ರಾ ಮಹೋತ್ಸವ ಪಕ್ಷಾತೀತವಾಗಿ ನಡೆಯುತ್ತಿದೆ. ಎಲ್ಲಾ ಪಕ್ಷದವರೂ ಭಾಗವಹಿಸಲಿದ್ದಾರೆ ಎಂದು ಹೇಳಿದರು.ರಾಜ್ಯದ ವಿವಿಧ ಮೂಲೆಗಳಿಂದ ಜಾತ್ರೆಗೆ ದನಗಳು ಆಗಮಿಸುತ್ತಿವೆ. ಆಯ್ಕೆಯಾದ ಉತ್ತಮ ರಾಸುಗಳ ಪ್ರತಿ ವಿಭಾಗಕ್ಕೂ 10 ಚಿನ್ನದ ಬಹುಮಾನ ನೀಡಲಾಗುತ್ತಿದೆ ಎಂದು ಹೇಳಿದರು.
ರೈತಸಂಘ ತಾಲೂಕು ಅಧ್ಯಕ್ಷ ಕೆನ್ನಾಳು ವಿಜಯಕುಮಾರ್ ಮಾತನಾಡಿ, ನಾಳೆಯಿಂದ ನಡೆಯುವ ಜಾತ್ರಾ ಮಹೋತ್ಸವದ ಎಲ್ಲಾ ಸಾಂಸ್ಕೃತಿಕ, ಕ್ರೀಡೆ ಮತ್ತು ವೇದಿಕೆ ಕಾರ್ಯಕ್ರಮಗಳ ದಿವ್ಯ ಸಾನಿಧ್ಯವನ್ನು ಶ್ರೀ ರಾಮಯೋಗೀಶ್ವರ ಮಠದ ಶಿವಬಸವ ಸ್ವಾಮೀಜಿ ಮತ್ತು ಶ್ರೀ ದುರ್ದಂಡೇಶ್ವರ ಮಠದ ಪೀಠಾಧ್ಯಕ್ಷ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ವಹಿಸಲಿದ್ದಾರೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಅಧ್ಯಕ್ಷತೆಯಲ್ಲಿ ಜಾತ್ರೆ ನಡೆಯಲಿದೆ ಎಂದು ತಿಳಿಸಿದರು.
ಫೆ.27 ರಂದು ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಶಿವಾರ ಉಮೇಶ್ ಅವರಿಂದ ಗಾನ ಮಂಜರಿ, ಫೆ.28 ರಂದು ವಾಲಿಬಾಲ್ ಪಂದ್ಯಾವಳಿ ಮತ್ತು ಕು.ಚಾಂದಿನಿ ಅವರಿಂದ ಭರತನಾಟ್ಯ, ರಾಗಿಮುದ್ದನಹಳ್ಳಿ ಗ್ರಾಮಸ್ಥರಿಂದ ಧರ್ಮರಾಜ್ಯ ಸ್ಥಾಪನೆ ಎಂಬ ಪೌರಾಣಿಕ ನಾಟಕ ನಡೆಯಲಿದೆ. ಮಾ.1 ರಂದು ಮಹಿಳಾ ಕ್ರೀಡಾಕೂಟ ಮತ್ತು ಕಲಾಧಾರ ಸ್ಕೂಲ್ ಆಫ್ ಡ್ಯಾನ್ಸ್ ಅವರಿಂದ ಭರತ ನಾಟ್ಯ, ಸರ್ಕಾರಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ ಎಂದು ಹೇಳಿದರು.
ಚಿತ್ರನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಮಾಂಗಲ್ಯ ವಿತರಣೆ ಮಾಡಲಿದ್ದಾರೆ. ಹಾಸ್ಯ ನಟ ಚಿಕ್ಕಣ್ಣ ವರನಿಗೆ ಪಂಚೆ, ಶರ್ಟ್, ನಟ ಧನ್ವೀರ್ ವರನಿಗೆ ಕೈಗಡಿಯಾರ, ದುಬೈನ ರೋಹಿತ್ ವಧುವಿಗೆ ಧಾರೆ ಸೀರೆ, ಉದ್ಯಮಿ ಮೋಹನ್ ರಾಜ್ ಅವರು ವಧುವಿಗೆ ಕಾಲ್ಗೆಜ್ಜೆ, ಕಾಲುಂಗರವನ್ನು ತಮ್ಮ ಸ್ವತಃ ಖರ್ಚಿನಲ್ಲಿ ನೀಡಲಿದ್ದಾರೆ. ಅಂದು ಸಂಜೆ ಮಡೆನೂರು ಮನು ಅವರಿಂದ ಹಾಸ್ಯ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊನಾಗಾನಹಳ್ಳಿ ಕೃಷ್ಣೇಗೌಡ, ರೈತಸಂಘ ಮುಖಂಡರಾದ ರಾಘವ ಪ್ರಕಾಶ, ಷಡಾಕ್ಷರಿ, ಚಿಕ್ಕಾಡೆ ವಿಜೇಂದ್ರ, ಪುಟ್ಟೇಗೌಡ,ಡಿಂಕಾ ದೇವರಾಜು ಇತರರು ಇದ್ದರು.