ಕನ್ನಡಪ್ರಭ ವಾರ್ತೆ ಮೈಸೂರುದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಹಿನ್ನೆಲೆಯಲ್ಲಿ ಜ.26 ರಂದು ದೇಶಾದ್ಯಂತ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಟ್ರ್ಯಾಕ್ಟರ್ ರ್ಯಾಲಿ ನಡೆಸಲು ಕರೆ ನೀಡಲಾಗಿದೆ. ಅದರಂತೆ ರಾಜ್ಯದಲ್ಲೂ ಜಿಲ್ಲಾ, ತಾಲೂಕು ಮಟ್ಟದಲ್ಲಿ ಟ್ರ್ಯಾಕ್ಟರ್ ರ್ಯಾಲಿ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿ ಗಡಿಯಲ್ಲಿ ದೇಶದ ರೈತರ ಹಿತಕ್ಕಾಗಿ ಹೋರಾಡುತ್ತಿದ್ದ ದಲೈವಾಲಾ 53 ದಿನಗಳ ಉಪವಾಸ ಕೈಬಿಟ್ಟು ವೈದ್ಯಕೀಯ ಚಿಕಿತ್ಸೆಗೆ ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ. ದೇಶದ ರೈತರೆಲ್ಲ ಅವರ ಪ್ರಾಣದ ಬಗ್ಗೆ ಆತಂಕಗೊಂಡಿದ್ದರು ಎಂದರು.ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ, ಕಾನೂನು ಜಾರಿಗಾಗಿ ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ ರಾಜಕೀಯೇತರ ಸಂಘಟನೆಯ ರಾಷ್ಟ್ರೀಯ ಸಂಚಾಲಕ ಜಗಜಿತ್ ಸಿಂಗ್ ದಲೈವಾಲಾ 53 ದಿನದ ಉಪವಾಸ ಸತ್ಯಾಗ್ರಹ ನಿಲ್ಲಿಸಿ ವೈದ್ಯಕೀಯ ಚಿಕಿತ್ಸೆಗೆ ಸಮ್ಮತಿ ಸೂಚಿಸಿದ್ದಾರೆ. ಆದರೆ, ಬೇಡಿಕೆ ಈಡೆರುವ ತನಕ ಚಳವಳಿ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ. ಉಪವಾಸ ನಿರತ ದಲೈವಾಲ ನಿರ್ಧಾರ ರೈತರ ಹೋರಾಟದ ಶಕ್ತಿ ಹೆಚ್ಚಿಸಿದೆ ಎಂದು ಅವರು ಹೇಳಿದರು.ಕಳೆದ ಮೂರು ದಿನಗಳಿಂದ 124 ರೈತರು ದಲೈವಾಲ ಉಪವಾಸ ಬೆಂಬಲಿಸಿ, ನಾವು ಪ್ರಾಣ ತ್ಯಾಗಕ್ಕೆ ಸಿದ್ದ ಎಂದು ಉಪವಾಸ ಆರಂಭಿಸಿದರು. ಅವರು ಸಹ ಉಪವಾಸವನ್ನು ಕೈಬಿಟ್ಟಿದ್ದಾರೆ. ಆದರೆ, ಸಮಸ್ಯೆ ಬಗೆಹರಿಯುವ ತನಕ ಹೋರಾಟ ಮುಂದುವರಿಯುತ್ತದೆ ಎಂದರು.ದೇಶದ ಸ್ವಾತಂತ್ರಕ್ಕಾಗಿ ಪ್ರಾಣ ಕಳೆದುಕೊಂಡ ಸ್ವತಂತ್ರ ಹೋರಾಟಗಾರರ ದೇಶದ ಗಡಿಯಲ್ಲಿ ಗಡಿ ರಕ್ಷಣೆಗಾಗಿ ಹುತಾತ್ಮರಾದರೇ, ದೇಶದ ಜನರ ಆಹಾರ ಭದ್ರತೆಯಾಗಿ ದುಡಿದು ಹುತಾತ್ಮರಾದ ರೈತರ ನೆನಪಿನ ದಿನ ರಾಜ್ಯ ಮಟ್ಟದಲ್ಲಿ ಜ.30 ರಂದು ದಾವಣಗೆರೆಯಲ್ಲಿ ಆಚರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.ರೈತ ಮುಖಂಡರಾದ ದೇವನೂರು ವಿಜಯೇಂದ್ರ, ಸಾತಗಳ್ಳಿ ಬಸವರಾಜು, ಹಳ್ಳಿಕೆರೆಹುಂಡಿ ಪ್ರಭುಸ್ವಾಮಿ, ಕುರುಬೂರ್ ಪ್ರದೀಪ್, ವಾಜಮಂಗಲ ನಾಗೇಂದ್ರ ಇದ್ದರು.----ಬಾಕ್ಸ್... ಚೈತ್ರಾಗೆ ಅಭಿನಂದನೆವಿಶ್ವಕಪ್ ಖೋ ಖೋ ಪಂದ್ಯದಲ್ಲಿ ವಿಶ್ವ ಕಪ್ ಗೆದ್ದು ಜಯಭೇರಿ ಬಾರಿಸಿದ ಪುರುಷ. ಮಹಿಳೆಯರ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ಮಹಿಳೆಯರ ಭಾರತ ತಂಡದಲಿ ಉತ್ತಮ ಆಟ ಆಡುವ ಮೂಲಕ ಪ್ರಶಸ್ತಿಗೆ ಬಾಜನರಾಗಿರುವ ನಮ್ಮ ರಾಜ್ಯದ ಹಿರಿಮೆ ಹೆಚ್ಚಿಸಿದ ನಮ್ಮ ಊರಿನ ಚೈತ್ರಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.ರಾಜ್ಯ ಸರ್ಕಾರ ಅಭಿನಂದನೆ ಹೇಳಿದರೆ ಸಾಲದು, ಇಂತಹ ಕ್ರೀಡಾಪಟುಗಳಿಗೆ ವಿಶೇಷ ಪ್ರೋತ್ಸಾಹ ನೀಡಲು ಮುಂದಾಗಬೇಕು. ಈಗಾಗಲೇ ಮಹಾರಾಷ್ಟ್ರ ಸರ್ಕಾರ ಅಲ್ಲಿನ ಕ್ರೀಡಾಪಟುಗೆ 3 ಕೋಟಿ ರೂ. ಪ್ರೋತ್ಸಾಹ ಧನ ಘೋಷಣೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ವಿಶೇಷ ಗಮನ ಹರಿಸಿ, ಪ್ರೋತ್ಸಾಹ ದನ ನೀಡಬೇಕು ಎಂದು ಅವರು ಒತ್ತಾಯಿಸಿದರು.ಟಿ. ನರಸೀಪುರ ತಾಲೂಕಿನ ಸರ್ವ ಸಂಘ ಸಂಸ್ಥೆಗಳು ಸಾರ್ವಜನಿಕರಿಂದ ಜ.21 ರಂದು ಚೈತ್ರಾ ಅವರಿಗೆ ಅಭೂತಪೂರ್ವ ಸ್ವಾಗತ ನೀಡಿ, ಅಭಿನಂದನಾ ಸಮಾರಂಭ ನಡೆಸಲಾಗುತ್ತಿದೆ ಎಂದರು.