ಕೂಡ್ಲಿಗಿ ತಾಲೂಕಿನಲ್ಲಿ ವಿವಿಧ ಕಾಮಗಾರಿ ಪರಿಶೀಲನೆ

KannadaprabhaNewsNetwork | Published : Jan 21, 2025 12:35 AM

ಸಾರಾಂಶ

ಕಾಮಗಾರಿ ಉತ್ತಮವಾಗಿ ಮಾಡಲಾಗಿದೆ.

ಕೂಡ್ಲಿಗಿ: ತಾಲೂಕಿನ ಪೂಜಾರಹಳ್ಳಿ ಬಳಿಯ ಮೆಟ್ಲಿಂಗ್ ರಸ್ತೆ ಹಾಗೂ ಬೆಳ್ಳಗಟ್ಟೆ ಗ್ರಾಪಂ ವ್ಯಾಪ್ತಿಯ ಯರ‍್ರಲಿಂಗನಹಳ್ಳಿ ಗ್ರಾಮದ ಸಿ.ಸಿ ರಸ್ತೆ ಕಾಮಗಾರಿಯನ್ನು ನ್ಯಾ.ನಾಗಮೋಹನ ದಾಸ್ ವಿಚಾರಣಾ ಆಯೋಗದ ಅಧಿಕಾರಿಗಳು ಪರಿಶೀಲನೆ ನಡೆಸಿದರು.ಪೂಜಾರಹಳ್ಳಿ ಗ್ರಾಮ ಹೊರವಲಯಲ್ಲಿ ಕಲ್ಲಹಳ್ಳಿ ರಸ್ತೆ ಬದಿ 2022-23ನೇ ಸಾಲಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ₹5 ಲಕ್ಷ ವೆಚ್ಚದಲ್ಲಿ ಕೈಗೊಂಡಿದ್ದ ಮೆಟ್ಲಿಂಗ್ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು, ಆ ರಸ್ತೆಯ ಕಾಮಗಾರಿಯನ್ನು ನ್ಯಾ.ನಾಗಮೋಹನ ದಾಸ್ ವಿಚಾರಣಾ ಆಯೋಗದ ತಾಂತ್ರಿಕ ತಜ್ಞ ಪ್ರದೀಪ್ ಸರದೇಶಪಾಂಡೆ ಪರಿಶೀಲಿಸಿದರು. ಕಾಮಗಾರಿ ವಿವರವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಿಂದ ಪಡೆದುಕೊಂಡರು.

ತಾಲೂಕಿನ ಬೆಳ್ಳಗಟ್ಟೆ ಗ್ರಾಪಂ ವ್ಯಾಪ್ತಿಯ ರ‍್ರಲಿಂಗನಹಳ್ಳಿಯಲ್ಲಿ 2019-20ನೇ ಸಾಲಿನ ನರೇಗಾ ಯೋಜನೆಯಡಿ ಸಿ.ಸಿ.ರಸ್ತೆ ಕಾಮಗಾರಿ ನಡೆಸಿದ್ದು, ಆ ಕಾಮಗಾರಿಯ ಕುರಿತು ಸ್ಥಳಕ್ಕೆ ಭೇಟಿ ನೀಡಿದ ಆಯೋಗದ ಅಧಿಕಾರಿಗಳು ಪರಿಶೀಲನೆ ನಡೆಸಿದರು.

ಕಾಮಗಾರಿ ಪರಿಶೀಲನೆ ನಂತರ ನ್ಯಾ.ನಾಗಮೋಹನ ದಾಸ್ ವಿಚಾರಣಾ ಆಯೋಗದ ತಾಂತ್ರಿಕ ತಜ್ಞ ಪ್ರದೀಪ್ ಸರದೇಶಪಾಂಡೆ ಮಾತನಾಡಿ, ಕಾಮಗಾರಿ ಉತ್ತಮವಾಗಿ ಮಾಡಲಾಗಿದೆ ಎಂದು ತಿಳಿಸಿದರು. ಎಲ್ಲ ಕಾಮಗಾರಿಗಳನ್ನು ಗುಣಮಟ್ಟ ಕೈಗೊಳ್ಳುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ತಾಪಂ ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಕೆ.ಆರ್. ಪ್ರಕಾಶ್, ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪವಿಭಾಗದ ಎಇಇ ಮಲ್ಲಿಕಾರ್ಜುನ, ನರೇಗಾ ತಾಂತ್ರಿಕ ಸಂಯೋಜಕ ಬಿ.ಮಹೇಶ್, ಪಿಡಿಒಗಳಾದ ಪೂಜಾರಹಳ್ಳಿ ಎಚ್.ಸಿ. ನಾರಾಯಣಪ್ಪ, ಬೆಳ್ಳಗಟ್ಟ ಪಿಡಿಒ ಹನುಮಂತಪ್ಪ, ತಾಂತ್ರಿಕ ಸಹಾಯಕರಾದ ಬಾಳಪ್ಪ ಭೀಮಪ್ಪ ಸಜ್ಜನ್, ಪಿ.ಎಂ.ಬಸವೇಶ್ವರಸ್ವಾಮಿ, ಗ್ರಾಪಂ ಸಿಬ್ಬಂದಿ ಇದ್ದರು.

ಹುಡೇಂ ಗ್ರಾಮದ ಸಿ.ಸಿ ರಸ್ತೆ ಪರಿಶೀಲನೆ: ಕೂಡ್ಲಿಗಿ ತಾಲೂಕಿನ ಹುಡೇಂ ಗ್ರಾಮದಲ್ಲಿ 2019-2020ನೇ ಸಾಲಿನ ಎಸ್‌ಸಿಪಿ ಯೋಜನೆಯಡಿ ₹5 ಲಕ್ಷ ವೆಚ್ಚದಲ್ಲಿ ಕೈಗೊಂಡಿದ್ದ ಸಿ.ಸಿ ರಸ್ತೆಯನ್ನು ತಾಂತ್ರಿಕ ತಜ್ಞ ಪ್ರದೀಪ್ ಸರದೇಶಪಾಂಡೆ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಆಯೋಗದ ತಾಂತ್ರಿಕ ತಂಡದ ಶ್ರೀಧರ್, ಪಿಆರ್‌ಇಡಿ ಎಇಇ ಮಲ್ಲಿಕಾರ್ಜುನ ಇದ್ದರು. ಇದಲ್ಲದೆ, ಕ್ಷೇತ್ರ ವ್ಯಾಪ್ತಿಯ ಭೈರದೇವರಗುಡ್ಡ ಗ್ರಾಮದ ಬಳಿಯ ಕೆರೆ ನಿರ್ವಹಣಾ ಕಾಮಗಾರಿಯನ್ನು ತಂಡದ ಮಂಜುನಾಥ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆ ಜೆಇ ಮೇಡಂರಾಜು ಸೇರಿ ಇತರರಿದ್ದರು.

Share this article