ಸಂಗೂರು ಕರಿಯಪ್ಪ, ವೀರಮ್ಮರ ಹೋರಾಟದ ಚರಿತ್ರೆ ಎಲ್ಲರಿಗೂ ತಲುಪಲಿ-ಹಳ್ಳಿಕೇರಿ

KannadaprabhaNewsNetwork |  
Published : Jan 21, 2025, 12:35 AM IST
ಪೋಟೋ ಇದೆ. | Kannada Prabha

ಸಾರಾಂಶ

ದೇಶದ ಸ್ವಾತಂತ್ರ್ಯಕ್ಕಾಗಿ ವಿರೋಚಿತವಾಗಿ ಹೋರಾಡಿದವರಲ್ಲಿ ಕರಿಯಪ್ಪ ಯರೇಶೀಮಿ ಹಾಗೂ ವೀರಮ್ಮ ಪ್ರಮುಖರು. ಇಂತಹ ಮಹಾನ್ ವ್ಯಕ್ತಿಗಳ ಜೀವನ ಗಾಥೆಯನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಡೀನ್ ಡಾ. ಎಫ್.ಟಿ. ಹಳ್ಳಿಕೇರಿ ಅಭಿಪ್ರಾಯಪಟ್ಟರು.

ಹಾವೇರಿ: ದೇಶದ ಸ್ವಾತಂತ್ರ್ಯಕ್ಕಾಗಿ ವಿರೋಚಿತವಾಗಿ ಹೋರಾಡಿದವರಲ್ಲಿ ಕರಿಯಪ್ಪ ಯರೇಶೀಮಿ ಹಾಗೂ ವೀರಮ್ಮ ಪ್ರಮುಖರು. ಇಂತಹ ಮಹಾನ್ ವ್ಯಕ್ತಿಗಳ ಜೀವನ ಗಾಥೆಯನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಡೀನ್ ಡಾ. ಎಫ್.ಟಿ. ಹಳ್ಳಿಕೇರಿ ಅಭಿಪ್ರಾಯಪಟ್ಟರು.ನಗರದ ಡಾ. ಮಹದೇವ ಬಣಕಾರ ಜಿಲ್ಲಾ ಕೇಂದ್ರ ಗ್ರಂಥಾಲಯ ಸಭಾಭವನದಲ್ಲಿ ಸೋಮವಾರ ಸ್ವಾತಂತ್ರ್ಯ ಹೋರಾಟಗಾರ ಸಂಗೂರು ಕರಿಯಪ್ಪ ಸ್ಮಾರಕ ಟ್ರಸ್ಟ್ ಆಯೋಜಿಸಿದ್ದ ಸ್ವಾತಂತ್ರ್ಯ ಸಿಂಹ ಕರಿಯಪ್ಪ ಯರೇಶೀಮಿ, ಲಯನ್‌ ಆಫ್‌ ಫ್ರೀಡಂ ಕರಿಯಪ್ಪ ಯರೇಶೀಮಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಸಂಗೂರು ಕರಿಯಪ್ಪ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.ಮಹಾತ್ಮ ಗಾಂಧೀಜಿ ಅವರ ಅನುಯಾಯಿಯಾಗಿದ್ದುಕೊಂಡು ಕರಿಯಪ್ಪ ಅವರು ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಸ್ವಾತಂತ್ರ್ಯ ಸಮರದಲ್ಲಿ ನಾಡಬಾಂಬ್ ಸ್ಫೋಟಗೊಂಡು ಬಲ ಮುಂಗೈ ಕಳೆದುಕೊಂಡರೂ ಆಂಗ್ಲರ ವಿರುದ್ಧ ಜೀವಮಾನವಿಡೀ ಹೋರಾಡಿದ ಕರಿಯಪ್ಪ ಅವರು ನಮ್ಮ ನಾಡಿನ ಮಹಾನ್ ಚೇತನ ಎಂದು ಬಣ್ಣಿಸಿದರು.

ಲೇಖಕ ಲಿಂಗದಹಳ್ಳಿ ಹಾಲಪ್ಪ ಮಾತನಾಡಿ, ಕರಿಯಪ್ಪ ಯರೇಶೀಮಿ ಅವರು ಅತ್ಯಂತ ಬಡತನದಲ್ಲಿಯೇ ಬಾಲ್ಯವನ್ನು ಕಳೆದರು. ಸಹೋದರರ ಸಹಕಾರದೊಂದಿಗೆ ಹಾಗೂ ಗಾಂಧೀಜಿಯವರ ಮಾರ್ಗದರ್ಶನದಲ್ಲಿ ಸ್ವಾತಂತ್ರ್ಯ ಚಳುವಳಿಗೆ ಧುಮಕಿ ಭಾರತ ದೇಶ ಎಂದೂ ಮರೆಯದ ಮಹಾನ್ ಸ್ವಾತಂತ್ರ್ಯ ಸೇನಾನಿಯಾದರು. ಮಹಾತ್ಮ ಗಾಂಧೀಜಿಯವರ ಅಣತಿಯಂತೆ ಗಾಂಧೀಜಿ-ಕಸ್ತೂರಬಾ ಅವರ ಸಾಕು ಮಗಳಾದ ದಲಿತ ಸಮುದಾಯದ ವೀರಮ್ಮ ಅವರನ್ನು ಅಂತರ್ಜಾತಿ ವಿವಾಹವಾದರು. ಬಹುದೊಡ್ಡ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರೂ ಅಂತರ್ಜಾತಿ ವಿವಾಹವಾದ ಪರಿಣಾಮವಾಗಿ ಜಿಡ್ಡುಗಟ್ಟಿದ ಜಾತಿ ವ್ಯವಸ್ಥೆಯಲ್ಲಿ ಮೇಲ್ಜಾತಿಯವರಿಂದ ಸಾಕಷ್ಟು ನೋವು ಅವಮಾನಗಳನ್ನು ಅನುಭವಿಸಿದರು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ ಅಧ್ಯಕ್ಷರೂ ಹಾಗೂ ಶಾಸಕರಾದ ಬಸವರಾಜ ಎನ್ ಶಿವಣ್ಣನವರ ಮಾತನಾಡಿ, ಸಂಗೂರು ಕರಿಯಪ್ಪ ಅವರ ಹೆಸರನ್ನು ಚಿರಸ್ಥಾಯಿಗೊಳಿಸುವ ನಿಟ್ಟಿನಲ್ಲಿ ಸ್ಮಾರಕ ಟ್ರಸ್ಟ್ ಪುಸ್ತಕ ಪ್ರಕಟಣೆ ಮಾಡುವುದು ಸೇರಿದಂತೆ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತಿರುವುದು ಅಭಿಮಾನದ ಸಂಗತಿ. ಟ್ರಸ್ಟ್ ಪದಾಧಿಕಾರಿಗಳ ಆಶಯದಂತೆ ಹಾವೇರಿ ನಗರದಲ್ಲಿರುವ ಜಿಲ್ಲಾ ಕೆಂದ್ರ ಬಸ್ ನಿಲ್ದಾಣಕ್ಕೆ ಸಂಗೂರು ಕರಿಯಪ್ಪ ವೀರಮ್ಮ ದಂಪತಿ ಹೆಸರನ್ನು ನಾಮಕರಣ ಮಾಡಲು ಸರ್ಕಾರದ ಮಟ್ಟದಲ್ಲಿ ಈಗಾಗಲೇ ಪ್ರಯತ್ನಗಳು ನಡೆದಿದ್ದು ಶೀಘ್ರದಲ್ಲಿಯೇ ಈ ಪ್ರಕ್ರೀಯೆಯನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಡಾ. ಎಫ್.ಟಿ. ಹಳ್ಳಿಕೇರಿ, ಡಾ. ಲಿಂಗದಹಳ್ಳಿ ಹಾಲಪ್ಪ, ಯಶೋಧಮ್ಮ ಯರೇಶೀಮಿ, ಚಿಕ್ಕಮ್ಮ ಆಡೂರು, ನಿಶಾ, ವತ್ಸಲ್, ಹೇಮಲತಾ ಕೂರಗುಂದ, ಮೃತ್ಯಂಜಯ ಫ ಕುಲಕರ್ಣಿ, ಕುಮಾರ್ ಎನ್.ಜಿ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಟ್ರಸ್ಟ್ ಅಧ್ಯಕ್ಷರಾದ ಎಸ್ಎಫ್ಎನ್ ಗಾಜಿಗೌಡರ ವಹಿಸಿದ್ದರು. ಪ್ರಾಸ್ತಾವಿಕವಾಗಿ ಟ್ರಸ್ಟ್ ಸದಸ್ಯ ಬಸವರಾಜ ಪೂಜಾರ ಮಾತನಾಡಿದರು. ಮಾಜಿ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಸಾಹಿತಿಗಳಾದ ಸತೀಶ ಕುಲಕರ್ಣಿ, ಸಂಕಮ್ಮ ಸಂಕಣ್ಣನವರ, ಡಾ. ಮೋಹನ್ ಹಂಡೆ, ಅಶೋಕ ನಡಕಟ್ಟಿನ, ಅಬ್ದುಲ್ ಹುಬ್ಬಳ್ಳಿ ಇದ್ದರು.

ಮಂಜುನಾಥ ಗಾಜಿ ನಿರ್ವಹಿಸಿದರು. ಶಶಿಕಲಾ ಕಣಿವೇರ ಸ್ವಾಗತಿಸಿದರು. ಶ್ರೀನಿವಾಸ ಯರೇಶೀಮಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ