ಕನ್ನಡಪ್ರಭ ವಾರ್ತೆ ತಿಪಟೂರು
ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಂಡೆ ಕೊಬ್ಬರಿಗೆ ಬೆಂಬಲ ಬೆಲೆ ನೀಡಬೇಕೆಂದು ರಾಜ್ಯ ಸರ್ಕಾರ ಉತ್ಪಾದನ ವೆಚ್ಚದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದರೂ ಇದ್ಯಾವುದನ್ನೂ ಪರಿಗಣಿಸದೆ ಕೇಂದ್ರ ಸರ್ಕಾರ ೨೦೨೪-೨೫ನೇ ಸಾಲಿಗೆ ಉಂಡೆ ಕೊಬ್ಬರಿಯ ಬೆಂಬಲ ಬೆಲೆಯನ್ನು ಒಂದು ಕೆ.ಜಿ.ಗೆ ಕೇವಲ ೧ ರೂ ಹೆಚ್ಚಿಸಿ ರೈತ ಸಮುದಾಯಕ್ಕೆ ಅವಮಾನ ಮಾಡಿದೆ. ಚುನಾವಣಾ ಸಮಯದಲ್ಲಿ ಹೇಳಿದ ಮಾತಗಳನ್ನು ಸರ್ಕಾರ ಮರೆತಿದೆ. ಕೊಬ್ಬರಿ ಬೆಂಬಲ ಬೆಲೆಯನ್ನು ನಿರ್ಧರಿಸುವಲ್ಲಿ ಸಮಾನ ಜವಾಬ್ದಾರಿ ಹೊತ್ತಿರುವ ಕೇಂದ್ರದ ವಿರೋಧ ಪಕ್ಷವು ಈ ವಿಚಾರದಲ್ಲಿ ಪ್ರತಿಕ್ರಿಯಿಸದೆ ಮೌನ ವಹಿಸುರುವುದು ವಿಷಾದನೀಯ. ಆದ್ದರಿಂದ ಕೊಬ್ಬರಿ ನಂಬಿ ಜೀವನ ಮಾಡುತ್ತಿರುವ ರೈತರ ಪರ ರೈತ ಸಂಘ ಸೇರಿದಂತೆ ಇತರ ಎಲ್ಲಾ ಸಂಘಟನೆಗಳು ಬೆಂಬಲವಾಗಿ ನಿಂತು ಉಂಡೆ ಕೊಬ್ಬರಿಗೆ ವೈಜ್ಞಾನಿಕ ಬೆಲೆಗೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರೈತ ಬಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮನವಿ ಮಾಡಿದರು. ಹಸಿರು ಸೇನೆ ಜಿಲ್ಲಾ ಕಾರ್ಯದರ್ಶಿ ತಿಮ್ಲಾಪುರ ದೇವರಾಜು ಮಾತನಾಡಿ, ಕೇಂದ್ರ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲದಂತಾಗಿದೆ. ರೈತರನ್ನು ಮುಗಿಸುವ ಹುನ್ನಾರದಿಂದ ಮೂರು ಕೃಷಿ ಕರಾಳ ಕಾನೂನುಗಳನ್ನು ಜಾರಿಗೆ ತರಲಾಗಿತ್ತು. ಆದರೆ ರೈತರ ಹೋರಾಟ ಮಾಡಿ ಹಿಂಪಡೆಯುವಂತೆ ಮಾಡಿದರು. ಆದರೆ ಈಗ ಮತ್ತೆ ಕೇಂದ್ರ ಸರ್ಕಾರ ರೈತರನ್ನು ಕಡೆಗಣಿಸುತ್ತಿದ್ದು ಕೊಬ್ಬರಿಗೆ ವೈಜ್ಞಾನಿಕ ಬೆಲೆ ನೀಡುವಲ್ಲಿ ಮೀನಮೇಷ ಎಣಿಸುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರಾಂತ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಚನ್ನಬಸವಣ್ಣ, ರೈತ ಸಂಘದ ಯೋಗೀಶ್ವರಸ್ವಾಮಿ, ಬೆಲೆಕಾವಲು ಸಮಿತಿಯ ಶ್ರೀಕಾಂತ್ ಕೆಳಹಟ್ಟಿ, ವಿದ್ಯುತ್ ಗುತ್ತಿಗೆದಾರರ ಸಂಘದ ರವೀಂದ್ರ, ರೈತ ಮುಖಂಡರಾದ ಸಿದ್ದಯ್ಯ, ರಾಜಮ್ಮ, ಅಲ್ಲಭಕಾಶ್, ಸತೀಶ್, ತಿಮ್ಮೇಗೌಡ, ಗಂಗಾಧರಪ್ಪ, ಬಿಳಿಗೆರೆ ನಾಗೇಶ್ ಮತ್ತಿತರರಿದ್ದರು.