ಬಿಜೆಪಿ ಹಿಂದುಳಿದ ವರ್ಗಗಳನ್ನು ಕಡೆಗಣಿಸುತ್ತಿಲ್ಲ ಎನ್ನುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು, ರಾಜ್ಯಸಭಾ ಸದಸ್ಯನಾಗಿರುವ ತಾನು ಹಾಗೂ ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಿರುವ ರಘು ಕೌಟಿಲ್ಯ ಪ್ರತ್ಯಕ್ಷ ಸಾಕ್ಷಿ ಎಂದು ರಾಜ್ಯಸಭಾ ಸದಸ್ಯ ಎಂ.ನಾಗರಾಜ್ ಹೇಳಿದರು.
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಬಿಜೆಪಿ ಹಿಂದುಳಿದ ವರ್ಗಗಳನ್ನು ಕಡೆಗಣಿಸುತ್ತಿಲ್ಲ ಎನ್ನುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು, ರಾಜ್ಯಸಭಾ ಸದಸ್ಯನಾಗಿರುವ ತಾನು ಹಾಗೂ ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಿರುವ ರಘು ಕೌಟಿಲ್ಯ ಪ್ರತ್ಯಕ್ಷ ಸಾಕ್ಷಿ ಎಂದು ರಾಜ್ಯಸಭಾ ಸದಸ್ಯ ಎಂ.ನಾಗರಾಜ್ ಹೇಳಿದರು.
ಇಲ್ಲಿನ ಗುರುಭವನದಲ್ಲಿ ತಾ ಬಿಜೆಪಿ ಹಿಂದುಳಿದ ವರ್ಗಗಳ ಸಮಾವೇಶವನ್ನು ಭಾನುವಾರ ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ತಾನು ಕುರುಬ ಸಮಾಜದವನು, ರಘು ಕೌಟಿಲ್ಯ ಮಡಿವಾಳ ಸಮಾಜದವರು, ಪ್ರಧಾನಿ ಮೋದಿ ಗಾಣಿಗ ಸಮಾಜದವರು, ನಾವೆಲ್ಲರೂ ಹಿಂದುಳಿದ ಸಮಾಜದವರು, ಹೀಗಿದ್ದೂ ವಿರೋಧ ಪಕ್ಷಗಳು ನಮ್ಮ ಬಿಜೆಪಿ ಮುಂದುವರೆದ ಪಕ್ಷ ಮುಂದುವರೆದ ಜನಾಂಗಗಳಿಗೆ ಮಣೆ ಹಾಕುತ್ತದೆ ಎಂದು ಇಲ್ಲದ ಸಲ್ಲದ ಆರೋಪಗಳನ್ನು ಮಾಡುತ್ತಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು. ಮೋದಿಯವರು 13 ವರ್ಷಗಳ ಕಾಲ ಗುಜರಾತ್ ಮುಖ್ಯಮಂತ್ರಿಯಾಗಿ, ಪ್ರಧಾನಮಂತ್ರಿಯಾಗಿ 12 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅದಕ್ಕೆ ಪಕ್ಷ ಅವಕಾಶ ಮಾಡಿಕೊಟ್ಟಿಲ್ಲವೇ ಎಂದು ಪ್ರಶ್ನಿಸಿದರು.
ಸಂಸತ್ ಅಧಿವೇಶನ ನಡೆಯಲು ಕಾಂಗ್ರೆಸ್ ಬಿಟ್ಟಿಲ್ಲ, ಶೇ. 9 ರಷ್ಟು ಸಂಸತ್ ಅಧಿವೇಶನ, ಶೇ.36 ರಷ್ಟು ರಾಜ್ಯಸಭಾ ಅಧಿವೇಶನ ಮಾತ್ರ ನಡೆದಿದೆ. ಆದರೆ ಅದಕ್ಕೆ 72 ಕೋಟಿ ರು. ಖರ್ಚಾಗಿದೆ. ಯಾವ ಮಹತ್ವದ ವಿಷಯಗಳ ಚರ್ಚೆಯೂ ಆಗಲು ಕಾಂಗ್ರೆಸ್ ಬಿಡಲಿಲ್ಲ ಎಂದು ದೂರಿದರು. ಪ್ರಸ್ತುತ ರಾಜ್ಯ ಸಚಿವ ಸಂಪುಟ ಇತ್ತೀಚೆಗೆ ವಿಸ್ತರಣೆಯಾಗಿದ್ದು, ಸಚಿವರಾಗಿರುವವರೆಲ್ಲರೂ ಪೇಮೆಂಟ್ ಕೋಟಾದಲ್ಲಿ ಬಂದವರು, ಇವರ‍್ಯಾರು ಮೆರಿಟ್ ಕೋಟಾದಿಂದ ಬಂದವರಲ್ಲ ಎಂದರು.
ವಿಧಾನ ಪರಿಷತ್ ಸದಸ್ಯ ರಘು ಕೌಟಿಲ್ಯ ಮಾತನಾಡಿ, ಹಿಂದುಳಿದ ವರ್ಗಗಳ ಬಗ್ಗೆ ಮಾತನಾಡುವ ಕಾಂಗ್ರೆಸ್ ಪಕ್ಷ ಕಾಂತರಾಜ್ ವರದಿಯನ್ನು ಏಕೆ ಸ್ವೀಕರಿಸಲಿಲ್ಲ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಅವರು ಸಿ.ಎಂ.ಕುರ್ಚಿಯಿಂದ ಇಳಿದು ಹೋಗಿದ್ದಾರೆ, ಆದರೆ ಈಗಿರುವ ಸಿಎಂ ಕಾಂತರಾಜ್ ವರದಿಯನ್ನು ಜಾರಿಗೊಳಿಸುವ ರಿಸ್ಕ್ ತೆಗೆದುಕೊಳ್ಳುವುದಿಲ್ಲ ಎಂದು ದೂರಿದರು.
ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ನಮ್ಮ ಅವಳಿ ತಾಲ್ಲೂಕಿನಲ್ಲಿ ಪಕ್ಷ ಸಂಘಟನೆ ಸದೃಢವಾಗಿದೆ. ನಾನು ಸಚಿವನಾಗಿದ್ದಾಗ ನಾಲ್ಕು ಸಾವಿರ ಕೋಟಿಗೂ ಅಧಿಕ ಅನುದಾನ ತಂದು ಅಭಿವೃದ್ಧಿಪಡಿಸಿದ್ದೇನೆ, ಈಗ ಕಣ್ಣಿಗೆ ಕಾಣುತ್ತಿರುವ ದೊಡ್ಡ ದೊಡ್ಡ ಕಾಮಗಾರಿಗಳು ಎಲ್ಲವೂ ನನ್ನ ಅವಧಿಯಲ್ಲಾಗಿದೆ ಎಂದರು.
ಒಬಿಸಿ ರಾಜ್ಯ ಉಪಾಧ್ಯಕ್ಷ ಕೆ.ಪಿ.ಕುಬೇರಪ್ಪ, ಒಬಿಸಿ ಜಿಲ್ಲಾಧ್ಯಕ್ಷ ಎಸ್.ಎಸ್.ಬೀರಪ್ಪ, ಜಿಪಂ ಮಾಜಿ ಸದಸ್ಯ ಎಂ.ಆರ್.ಮಹೇಶ್, ತಾ. ಕುರುಬ ಸಮಾಜದ ಅಧ್ಯಕ್ಷ ಎಂ.ಎಸ್.ಫಾಲಾಕ್ಷಪ್ಪ, ಒಬಿಸಿ ತಾಲೂಕು ಘಟಕದ ಅಧ್ಯಕ್ಷ ಕೆ.ಎಂ. ರಘು, ತಾ ಬಿಜೆಪಿ ಅಧ್ಯಕ್ಷ ನಾಗರಾಜ್, ನಗರ ಘಟಕದ ಅಧ್ಯಕ್ಷ ನವೀನ್ ಇಂಚರ, ತಾ ಯುವಮೋರ್ಚಾ ಅಧ್ಯಕ್ಷ ಎಚ್.ಬಿ. ಪುನೀತ್, ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಬಿಜೆಪಿ ವಿವಿಧ ಮೋರ್ಚಾಗಳ ಅಧ್ಯಕ್ಷರು, ಕಾರ್ಯಕರ್ತರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.