ಸಿದ್ದರಾಮಯ್ಯರಿಂದ ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಗಲಿಲ್ಲ: ಎನ್. ರವಿಕುಮಾರ್ ಆರೋಪ

KannadaprabhaNewsNetwork |  
Published : Jul 09, 2026, 12:45 AM IST
ಎನ್ .ರವಿಕುಮಾರ್  | Kannada Prabha

ಸಾರಾಂಶ

ಕಾಂಗ್ರೆಸ್ ಸರ್ಕಾರದಿಂದ ನಡೆಸಲಾದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ವರದಿಗೆ ಕೋಟ್ಯಂತರ ವ್ಯಯಿಸಿದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ ಎಂದು ವಿಧಾನಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಆಪಾದಿಸಿದರು.

ಬಳ್ಳಾರಿ: ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ನಿರಂತರವಾಗಿ ಮೋಸ ಮಾಡುತ್ತಿದ್ದು, ಕಾಂಗ್ರೆಸ್ ಸರ್ಕಾರದಿಂದ ನಡೆಸಲಾದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ವರದಿಗೆ ಕೋಟ್ಯಂತರ ವ್ಯಯಿಸಿದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ ಎಂದು ವಿಧಾನಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಆಪಾದಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ಪರಿಕಲ್ಪನೆಯ ಮೂಲಕ ಎರಡು ಬಾರಿ ಮುಖ್ಯಮಂತ್ರಿಯಾದರೂ ಹಿಂದುಳಿದ ವರ್ಗಗಳಿಗೆ ನಿರೀಕ್ಷಿತ ನ್ಯಾಯ ಒದಗಿಸಲಿಲ್ಲ. ಅಲ್ಪಸಂಖ್ಯಾತರಿಗೆ ಹಲವು ಯೋಜನೆಗಳನ್ನು ನೀಡಿದರೂ ಹಿಂದುಳಿದ ವರ್ಗಗಳ ಹಿತಾಸಕ್ತಿ ಕಡೆಗಣಿಸಲಾಯಿತು. ಸುಮಾರು ₹160 ಕೋಟಿ ವೆಚ್ಚದಲ್ಲಿ ಸಿದ್ಧಗೊಂಡ ಕಾಂತರಾಜು ವರದಿಯನ್ನು ಸರ್ಕಾರ ಜಾರಿಗೊಳಿಸದೆ ಕೈಬಿಟ್ಟಿತು. ನಂತರ ಸುಮಾರು ₹600 ಕೋಟಿ ವೆಚ್ಚದಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಿದರೂ, ಅದು ಕೂಡ ನನೆಗುದಿಗೆ ಬಿದ್ದಿದೆ. ಹೈಕೋರ್ಟ್ ನಿರ್ದೇಶನದ ನೆಪದಲ್ಲಿ ವರದಿಯನ್ನು ಬಹಿರಂಗಪಡಿಸದೆ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿದೆ. ಹೈಕೋರ್ಟ್ ನಲ್ಲಿ ಸಮರ್ಥವಾಗಿ ವಾದ ಮಂಡಿಸಲಾಗದ ಸರ್ಕಾರ ಎರಡು ಬಾರಿ ಗೈರಾಗುವ ಮೂಲಕ ಹಿಂದುಳಿದ ವರ್ಗದ ಪರವಾದ ಅವರ ನಿಲುವು ಏನೆಂಬುದನ್ನು ಸ್ಪಷ್ಟಪಡಿಸಿದೆ ಎಂದು ಟೀಕಿಸಿದರು.

ರಾಜ್ಯದಲ್ಲಿ 4.16 ಕೋಟಿ ಜನರ ಸಮೀಕ್ಷೆ ನಡೆಸಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, 4.22 ಲಕ್ಷ ಕುಟುಂಬಗಳು ಸಮೀಕ್ಷೆಯಲ್ಲಿ ಭಾಗವಹಿಸಿಲ್ಲ ಹಾಗೂ 34.50 ಲಕ್ಷ ಮನೆಗಳು ಖಾಲಿ ಇದ್ದವು ಎಂಬ ಅಂಶಗಳೂ ವರದಿಯಲ್ಲಿವೆ. ಇಷ್ಟಾದರೂ ವರದಿಯ ಮಾಹಿತಿಯು ಈಗಾಗಲೇ ಸೋರಿಕೆಯಾಗಿದ್ದು, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಯ ಕುರಿತ ಸಂಪೂರ್ಣ ವರದಿಯನ್ನು ಸಾರ್ವಜನಿಕರ ಮುಂದಿಡಬೇಕು ಎಂದು ಒತ್ತಾಯಿಸಿದರು.

56 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿ ಮಾಡುವುದಾಗಿ ಸರ್ಕಾರ ಘೋಷಿಸಿರುವುದನ್ನು ಉಲ್ಲೇಖಿಸಿದ ಅವರು, ಯಾವ ಮೀಸಲಾತಿ ಹಾಗೂ ಯಾವ ಮಾನದಂಡದ ಆಧಾರದಲ್ಲಿ ನೇಮಕಾತಿ ನಡೆಯಲಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ತೀವ್ರವಾಗಿದ್ದು, ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಕಾಡುತ್ತಿದೆ. ಆದರೆ, ಸರ್ಕಾರ ಜನರ ಕಣ್ಣಿಗೆ ಮಂಕುಬೂದಿ ಎರಚುವ ಕೆಲಸ ಮಾಡುತ್ತಿದೆ. ಉದ್ಯೋಗ ಸೃಷ್ಟಿಯ ಯಾವುದೇ ಕಾರ್ಯಯೋಜನೆಗಳಿಲ್ಲ. ಬರೀ ಸುಳ್ಳುಹೇಳಿಕೊಂಡು ಗ್ಯಾರಂಟಿ ಹೆಸರಿನಲ್ಲಿ ಸರ್ಕಾರ ನಡೆಯುತ್ತಿದೆ. ರಾಜ್ಯದಲ್ಲಿ ಬರಗಾಲ ತೀವ್ರವಾಗಿದ್ದು ಸಚಿವ ಕೃಷ್ಣ ಭೈರೇಗೌಡ ಅವರು ಹೊರತುಪಡಿಸಿದರೆ ಉಳಿದಂತೆ ಯಾವ ಸಚಿವರೂ ಓಡಾಡುತ್ತಿಲ್ಲ. ರೈತರ ಸಂಕಷ್ಟಗಳನ್ನು ಕೇಳುತ್ತಿಲ್ಲ.

ಸರ್ಕಾರದ ಸಚಿವರು ರೈತರು ಹಾಗೂ ಜನಸಮುದಾಯಗಳ ಸಮಸ್ಯೆಗಳತ್ತ ಗಮನ ಹರಿಸುವ ಬದಲು ಗ್ಯಾರಂಟಿ ಯೋಜನೆಗಳ ಪ್ರಚಾರದಲ್ಲೇ ತೊಡಗಿದ್ದಾರೆ ಎಂದು ಟೀಕಿಸಿದರು.

ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ವರದಿ, ಮೀಸಲಾತಿ ಹಾಗೂ ನಿರುದ್ಯೋಗದಂತಹ ವಿಷಯಗಳನ್ನು ವಿಧಾನಮಂಡಲ ಅಧಿವೇಶನದಲ್ಲಿ ಬಿಜೆಪಿ ಪ್ರಸ್ತಾಪಿಸಲಿದೆ. ಅಲ್ಲದೆ, ಒಬಿಸಿ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಬಿಜೆಪಿ ಒಬಿಸಿ ಘಟಕದ ವತಿಯಿಂದ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎನ್. ರವಿಕುಮಾರ್ ತಿಳಿಸಿದರು.

ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್‌ ಕುಮಾರ್ ಮೋಕಾ, ಪಕ್ಷದ ಮುಖಂಡರಾದ ಕೆ.ಎ. ರಾಮಲಿಂಗಪ್ಪ, ಅಂಬಿಕಾ, ಅಶ್ವಿನಿ ಶಂಕರ್, ಸುಗುಣ, ಜೀವೇಶ್ವರಿ ರಾಮಕೃಷ್ಣ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವಕರು ಶಿಸ್ತುಬದ್ಧ ಜೀವನಶೈಲಿ ರೂಪಿಸಿಕೊಳ್ಳಲಿ: ವೆಂಕಟೇಶ್
ಮಳೆಗಾಗಿ ಗಜಾಪುರದಲ್ಲಿ ಸಂಭ್ರಮದ ಗಂಗಾಮಾತೆಯ ಹಬ್ಬ