ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲೆ ದುಷ್ಪರಿಣಾಮ

KannadaprabhaNewsNetwork | Published : Oct 9, 2023 12:45 AM

ಸಾರಾಂಶ

ಶಿರಹಟ್ಟಿ ತಾಲೂಕಿನ ಕಪ್ಪತ್ತಗುಡ್ಡದ ಕಪ್ಪತ್ತಮಲ್ಲೇಶ್ವರ ದೈವಿವನದಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್, ಸ್ಥಳೀಯ ಸಂಸ್ಥೆ ಲಕ್ಷ್ಮೇಶ್ವರ, ಇಲ್ಲಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಶಿರಹಟ್ಟಿ ವಲಯ ಅರಣ್ಯ ಅಧಿಕಾರಿಗಳು ಸಂಯುಕ್ತ ಆಶ್ರಯದಲ್ಲಿ ೬೯ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಶಿರಹಟ್ಟಿ ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗಿ ಇಡೀ ಜೀವಕುಲಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಶಿರಹಟ್ಟಿ ವಲಯ ಅರಣ್ಯ ಇಲಾಖೆ ಅಧಿಕಾರಿ ರಾಮಪ್ಪ ಪೂಜಾರ ಹೇಳಿದರು. ತಾಲೂಕಿನ ಕಪ್ಪತ್ತಗುಡ್ಡದ ಕಪ್ಪತ್ತಮಲ್ಲೇಶ್ವರ ದೈವಿವನದಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್, ಸ್ಥಳೀಯ ಸಂಸ್ಥೆ ಲಕ್ಷ್ಮೇಶ್ವರ, ಇಲ್ಲಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಶಿರಹಟ್ಟಿ ವಲಯ ಅರಣ್ಯ ಅಧಿಕಾರಿಗಳು ಸಂಯುಕ್ತ ಆಶ್ರಯದಲ್ಲಿ ನಡೆದ ೬೯ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಸಾರ್ವಜನಿಕರಿಗೆ ಹಾಗೂ ಶಾಲಾ ಮಕ್ಕಳಿಗೆ ಅರಣ್ಯ ಹಾಗೂ ವನ್ಯಜೀವಿಗಳು ಮತ್ತು ಅವುಗಳ ಸಂರಕ್ಷಣೆ ಸಂಬಂಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ವತಿಯಿಂದ ವನ್ಯಜೀವಿ ಸಪ್ತಾಹ ಕಾರ್ಯಕ್ರಮ ಪ್ರತಿವರ್ಷವೂ ನಡೆಯುತ್ತಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳನ್ನೊಳಗೊಂಡಂತೆ ಎಲ್ಲರಲ್ಲೂ ಅರಣ್ಯ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಕಾಡು ಎಂದರೆ ಜನರಲ್ಲಿ ನಮ್ಮದು ಎನ್ನುವ ಭಾವನೆ ಮೂಡಿಸಬೇಕು. ಅವರಲ್ಲಿ ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಒಲವು ಹುಟ್ಟುವಂತೆ ಕಾರ್ಯಕ್ರಮ ಕೈಗೊಳ್ಳುವ ಅಗ್ಯಕೂಡ ಇದೆ ಎಂದು ತಿಳಿಸಿದರು. ಮಾನವ ಭೂಮಿ ಮೇಲಿರುವ ಸಕಲ ಜೀವಸಂಕುಲದೊಂದಿಗೆ ಬದುಕಬೇಕು. ಹೀಗಾಗಿ ಹೆಚ್ಚೆಚ್ಚು ಗಿಡ ನೆಟ್ಟು ಪೋಷಿಸಿ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ ಅವರು, ನಮಗೆ ಅಗತ್ಯವಿರುವ ಆಮ್ಲಜನಕ, ಆಹಾರ ಮತ್ತು ಆರೋಗ್ಯಕ್ಕಾಗಿ ಸಸಿ ನೆಡಬೇಕು. ದೇಶಾದ್ಯಂತ ಅರಣ್ಯ ಸಂಪತ್ತು ನಾಶವಾಗುತ್ತಿದ್ದು, ಉಳಿಸುವ ಕಾರ್ಯವಾಗಬೇಕು. ಪರಿಸರ ಸಂರಕ್ಷಣೆಯಾದರೆ ಮಾತ್ರ ಮನುಕುಲಕ್ಕೆ ಉಳಿವು. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆಗಾಗಿ ಸಾರ್ವಜನಿಕರಲ್ಲಿ ಪರಿಸರದ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು. ಮನುಷ್ಯ ಆರೋಗ್ಯವಾಗಿ ಬದುಕಬೇಕಾದರೆ ಉತ್ತಮ ಪರಿಸರದ ಅನಿವಾರ್ಯವಿದೆ. ಪ್ರಕೃತಿಯ ಮೇಲೆ ಮಾನವನ ಅಕ್ರಮಣ ಹೆಚ್ಚಾಗುತ್ತಿದೆ. ಜೀವಪರಿಸರ ಬಿಕ್ಕಟ್ಟು ಉಂಟಾಗಲಿದೆ. ಪ್ರಕೃತಿಯಲ್ಲಿನ ನೈಸರ್ಗಿಕ ಸಂಪತ್ತು ನಾಶವಾಗುತ್ತಿದ್ದು, ಅನೇಕ ಜೀವರಾಶಿಗಳು ಕಣ್ಮರೆಯಾಗುತ್ತಿವೆ ಎಂದರು. ನೂರಾರು ದೇವರ ಪೂಜೆಗಿಂತ ಒಂದು ಮರ ಬೆಳೆಸುವುದು ಉತ್ತಮ. ಪ್ರಕೃತಿಯಿಂದ ಪಾಠ ಕಲಿತ ನಾವು ಅದಕ್ಕಾಗಿ ಏನನ್ನೂ ಮಾಡದೇ ಕಲ್ಲು ಕಟ್ಟಿಗೆಯ ದೇವರುಗಳಿಗೆ ಹಣ ಮತ್ತು ಸಮಯ ಹಾಳುಮಾಡುತ್ತಿದ್ದೇವೆ. ಇದೇ ಸಮಯವನ್ನು ಮರ ಬೆಳೆಸುವುದರಲ್ಲಿ ಕಳೆದರೆ ಮುಂದಿನ ಭವಿಷ್ಯಕ್ಕೆ ಉಪಕಾರವಾಗಲಿದೆ ಎಂದು ಅಭಿಪ್ರಾಯಪಟ್ಟರು. ಇಂದು ಹಲವಾರು ಕಾರಣಗಳಿಂದ ಪರಿಸರ ನಾಶವಾಗುತ್ತಿದೆ. ಆದ್ದರಿಂದ ಪರಿಸರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾದಾಗ ಪರಿಸರ ಸುರಕ್ಷಿತವಾಗಿರುತ್ತದೆ. ಮನೆಯಂಗಳ, ಬೀದಿಯಲ್ಲಿ, ಶಾಲಾ ಆವರಣ, ಸರ್ಕಾರಿ ಕಚೇರಿಗಳ ಆವರಣದಲ್ಲಿ ಕಡ್ಡಾಯವಾಗಿ ಸಸಿ ನೆಡಬೇಕು ಎಂದು ಕರೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ. ಮುಂದಿನಮನಿ ಮಾತನಾಡಿ, ವೈವಿಧ್ಯಮಯ ವನ್ಯ ಜೀವಿಗಳು ಹಾಗೂ ಅವುಗಳ ಆವಾಸಸ್ಥಾನಗಳಿಗೆ ಅಷ್ಟೇ ತೊಂದರೆಗಳು ಹಾಗೂ ಒತ್ತಡಗಳಿವೆ. ಕಾಡಿನ ನಾಶದಿಂದಾಗಿ ವನ್ಯಜೀವಿಗಳ ಆವಾಸ ಸ್ಥಾನ ವಿನಾಶದ ಅಂಚಿನಲ್ಲಿದೆ. ಅನೇಕ ಪ್ರಾಣಿ ವೈವಿಧ್ಯಗಳನ್ನು ಹಾಗೂ ಅಳಿವಿನಂಚಿನಲ್ಲಿರುವ ಜೀವಿಗಳನ್ನು ಸಂರಕ್ಷಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದು ಹೇಳಿದರು. ಈ ವೈವಿಧ್ಯಮಯ ವನ್ಯಜೀವಿಗಳು ಹಾಗೂ ಅವುಗಳ ಆವಾಸಸ್ಥಾನಗಳಿಗೆ ಅಷ್ಟೇ ವೈವಿದ್ಯಮಯ ತೊಂದರೆಗಳು ಹಾಗೂ ಒತ್ತಡಗಳಿವೆ. ಕಳ್ಳ ಬೇಟೆ, ಮರ ಕಡೆಯುವುದು ಅಥವಾ ಇತರ ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ತೆಗೆಯುವಿಕೆ, ಕೃಷಿ, ಮನೆ ಮತ್ತು ನಾನಾ ಉದ್ದೇಶಗಳಿಗೆ ಕಾಡು ಕಡಿಯುವುದು ಒಂದು ಕಡೆಯಾದರೆ, ಕೈಗಾರಿಕೆಗಳು, ಗಣಿಗಳು, ವಿವಿಧ ವಾಣಿಜ್ಯ ಯೋಜನೆಗಳು, ರಸ್ತೆ, ರೈಲು, ವಿದ್ಯುತ್ ತರದ ಅಭಿವೃದ್ಧಿ ಯೋಜನೆಗಳು ಮತ್ತೊಂದು ಕಡೆ. ಇಂತಹ ಒತ್ತಡಗಳನ್ನು ತಡೆಯಲು ಸರ್ಕಾರಗಳು ನಾನಾ ರೀತಿಯ ಕಾನೂನುಗಳನ್ನು, ನಿಯಂತ್ರಣಗಳನ್ನು ತಂದಿದ್ದರೂ ಸಹ ಇವುಗಳನ್ನು ನಿಯಂತ್ರಿಸಲು ಜನರ ಸಹಕಾರ ಮುಖ್ಯವಾಗಿರುತ್ತದೆ ಎಂದು ಹೇಳಿದರು. ಪ್ರಕೃತಿ ನಮಗೆ ಎಲ್ಲವನ್ನು ನೀಡಿದೆ. ಅದನ್ನು ಸಂರಕ್ಷಿಸಿಕೊಂಡು ಹೋಗುವುದು ಮಾನವ ಧರ್ಮ. ಪರಿಸರವು ಮಾನವನ ಏಳ್ಗೆಗೆ ಸಕಾರಾತ್ಮಕವಾಗಿ ಕೊಡುಗೆ ನೀಡಿದೆ. ಸಮಾಜದಲ್ಲಿ ಬದುಕುವ ವ್ಯಕ್ತಿ ತಮ್ಮ ತಮ್ಮ ಮನೆಗಳ ಮುಂದೆ ಸಸಿಯನ್ನು ನೆಟ್ಟು ಪೋಷಣೆ ಮಾಡಬೇಕು. ತನ್ನ ಉದ್ದಾರಕ್ಕಾಗಿ ಸಮತೋಲನವಾದ ಪರಿಸರ ಹುಡುಕುವತ್ತ ಮಾನವ ದಾಪುಗಲು ಹಾಕುತ್ತಿದ್ದಾನೆ. ಈಗಲಾದರೂ ಪರಿಸರ ಕಾಳಜಿ ನಮ್ಮೆಲ್ಲರ ಹೊಣೆಯಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲೂಕಿನ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ವಚ್ಛತಾ ಅಭಿಯಾನ ಅಂಗವಾಗಿ ಕಪ್ಪತ್ತ ಮಲ್ಲಯ್ಯನ ದೇವಸ್ಥಾನಕ್ಕೆ ತೆರಳುವ ಹಾದಿಯಲ್ಲಿ ಪ್ಲಾಸ್ಟಿಕ್ ಕಸವನ್ನು ನಮ್ಮ ವಿದ್ಯಾರ್ಥಿಗಳು ಸಂಗ್ರಹಮಾಡಿ ಚೀಲಗಳಲ್ಲಿ ತುಂಬಿ ವಿಲೇವಾರಿ ಮಾಡಿದರು ಎಂದು ಹೇಳಿದರು. ಈ ಸಂದರ್ಭದಲ್ಲಿ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಸಂಗಮೇಶ ನೀರಲಗಿ, ಲಕ್ಷ್ಮೇಶ್ವರ ತಾಲೂಕಿನ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯದರ್ಶಿಗಳಾದ ಕೆ.ಆರ್. ಲಮಾಣಿ ಶಿರಹಟ್ಟಿ ತಾಲೂಕು ಕಾರ್ಯದರ್ಶಿ ಎಂ.ಎ. ಬುಕ್ಕಿಟಗಾರ, ಗಿರೀಶ್ ಸೃಜನವರ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕ ಶಿಕ್ಷಕಿಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪೋಟೊ-೮ ಎಸ್.ಎಚ್.ಟಿ. ೧ಕೆ ಶಿರಹಟ್ಟಿ ತಾಲೂಕಿನ ಕಪ್ಪತ್ತಗುಡ್ಡದ ಕಪ್ಪತ್ತಮಲ್ಲೇಶ್ವರ ದೈವಿವನದಲ್ಲಿ ನಡೆದ ೬೯ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮದಲ್ಲಿ ವಲಯ ಅರಣ್ಯಾಧಿಕಾರಿ ರಾಮಪ್ಪ ಪೂಜಾರ ಪಾಲ್ಗೊಂಡು ಮಾತನಾಡಿದರು.

Share this article