ಶಿವಾನಂದ ಗೊಂಬಿ
ಈ ಭಾಗದ ಮಾದರಿ ರಸ್ತೆಯಾಗಬೇಕಿದ್ದ, ಉತ್ತರ ಕರ್ನಾಟಕದ ಮೊದಲ ಟೆಂಡರ್ ಶ್ಯೂರ್ ರಸ್ತೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನಿರ್ಲಕ್ಷ್ಯ, ನಿರ್ವಹಣೆ ಕೊರತೆಯಿಂದ ಹದಗೆಟ್ಟಿದೆ. ಅನಧಿಕೃತ ಪಾರ್ಕಿಂಗ್, ಡಬ್ಬಾ ಅಂಗಡಿಗಳ ತಾಣವಾಗಿ ಪರಿವರ್ತನೆಯಾಗಿದೆ.
ಏನಿದು?ಟೆಂಡರ್ ಶ್ಯೂರ್ ರಸ್ತೆ ಎನ್ನುವುದು ಅತ್ಯಂತ ಮಾದರಿ ರಸ್ತೆ. ರಾಜಧಾನಿ ಬೆಂಗಳೂರಲ್ಲಿ ಒಂದೆರಡ್ಮೂರು ಕಡೆ ಈ ಮಾದರಿಯ ರಸ್ತೆಗಳನ್ನು ನಿರ್ಮಿಸಲಾಗಿದೆ. ಅಲ್ಲಿ ನಿರ್ವಹಣೆ ಸಮರ್ಪಕವಾಗಿರುವುದರಿಂದ ಮಾದರಿ ರಸ್ತೆಗಳು ಎನಿಸಿವೆ. ಅದೇ ರೀತಿ ಉತ್ತರ ಕರ್ನಾಟಕ ಭಾಗದಲ್ಲಿ ಈ ರಸ್ತೆ ಮಾದರಿ ರಸ್ತೆಯಾಗಲಿ ಎಂಬ ಉದ್ದೇಶದಿಂದ ಸೆಂಟ್ರಲ್ ಕ್ಷೇತ್ರದ ಮಾಜಿ ಶಾಸಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮುತುವರ್ಜಿ ವಹಿಸಿ ಹುಬ್ಬಳ್ಳಿಗೆ ಈ ರಸ್ತೆ ಮಂಜೂರು ಮಾಡಿಸಿದ್ದರು. ಕಾಡಸಿದ್ದೇಶ್ವರ ಕಲಾ ಕಾಲೇಜ್ ವೃತ್ತದಿಂದ ಶಿರೂರು ಪಾರ್ಕ್ ಮೂಲಕ ತೋಳನಕರೆಗೂ 2.19 ಕಿಮೀ ರಸ್ತೆಯನ್ನು ಟೆಂಡರ್ ಶ್ಯೂರ್ ರಸ್ತೆಯನ್ನಾಗಿ ನಿರ್ಮಿಸಲಾಗಿದೆ. 2.19 ಕಿಮೀ ರಸ್ತೆಗೆ ಬರೋಬ್ಬರಿ ₹44 ಕೋಟಿ ಖರ್ಚು ಮಾಡಲಾಗಿದೆ. 2019ರಲ್ಲಿ ಇದರ ಉದ್ಘಾಟನೆಯನ್ನು ನೆರವೇರಿಸಲಾಗಿದೆ.
ಇದೊಂದು ಮಾದರಿ ರಸ್ತೆಯಾಗಬೇಕಿತ್ತು. ಸರಿಯಾಗಿ ಪಾರ್ಕಿಂಗ್, ಅತಿಕ್ರಮಣಕ್ಕೆ ಅವಕಾಶ ಇಲ್ಲದಂತೆ ಇರಬೇಕು. ಬೆಂಗಳೂರಿನ ಬ್ರಿಗೇಡ್, ಎಂ.ಜಿ.ರಸ್ತೆಯಂತೆ ಈ ರಸ್ತೆ ಗೋಚರಿಸಬೇಕಿತ್ತು. ಈ ರಸ್ತೆಯ ಕಲ್ಪನೆಯೇ ಅದಾಗಿತ್ತು. ಬೇರೆ ಬೇರೆ ಊರುಗಳಿಂದ ಈ ರಸ್ತೆ ನಿರ್ವಹಣೆ ನೋಡಲು ಆಗಮಿಸುವಂತಾಗಬೇಕಿತ್ತು. ಆ ರೀತಿ ಇದು ನಿರ್ವಹಣೆ ಮಾಡಬೇಕಿತ್ತು. ಆದರೆ ಇಲ್ಲಿನ ಜನತೆಯೇ ಆ ರಸ್ತೆಗೆ ಹೋಗಲು ಬೇಸರಪಟ್ಟುವಂತಾಗಿದೆ ಎಂಬುದು ಗೋಳು ಜನರದ್ದು.
ಟೆಂಡರ್ ಶ್ಯೂರ್ ರಸ್ತೆಯನ್ನು ಪಿಡಬ್ಲುಡಿಯಿಂದ ಮಾಡಿಸಿ ಪಾಲಿಕೆಗೆ ಹಸ್ತಾಂತರಿಸಲಾಗಿದೆ. 2.19 ಕಿಮೀ ರಸ್ತೆಗೆ ₹44 ಕೋಟಿ ಖರ್ಚಾಗಿತ್ತು. ಇದೊಂದು ಉತ್ತರ ಕರ್ನಾಟಕದಲ್ಲೇ ಮಾದರಿ ರಸ್ತೆಯನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದ ನಿರ್ಮಿಸಲಾಗಿತ್ತು. ಆದರೆ ಪಾಲಿಕೆ ಪೊಲೀಸರ ನಿರ್ಲಕ್ಷ್ಯದಿಂದಾಗಿ ನಿರ್ವಹಣೆಯಾಗುತ್ತಿಲ್ಲ. ನಿರ್ವಹಣೆ ಮಾಡಬೇಕು ಎಂದು ಮಾಹಿತಿ ನೀಡಿದರು ಮಾಜಿ ಸಿಎಂ ಜಗದೀಶ ಶೆಟ್ಟರ್.