ಧಾರವಾಡ: ಸರ್ಕಾರಿ ಜಾಗ ಸಿಕ್ಕರೆ ಅದನ್ನು ಒತ್ತುವರಿ ಮಾಡಿಕೊಂಡು ಮನೆ, ಇತರೆ ಕಟ್ಟಡ ನಿರ್ಮಿಸುವ ಅಥವಾ ಬೇರೆಯವರಿಗೆ ಮಾರಾಟ ಮಾಡಿ ಹಣ ಗಳಿಸುವ ಪ್ರಕರಣಗಳು ಸಾಮಾನ್ಯವಾಗಿವೆ. ಆದರೆ, ಸರ್ಕಾರಿ ಜಾಗ ಕಬಳಿಕೆ ತಡೆಯಲು ಕೇವಲ ಎರಡು ಗಂಟೆಯಲ್ಲಿ 2500 ಸಸಿ ನೆಡುವ ಮೂಲಕ ವಿನೂತ ವನಮಹೋತ್ಸವ ಇಲ್ಲಿ ಗುರುವಾರ ನಡೆಯಿತು.
ಬಾಡ ಗ್ರಾಮದ 500ಕ್ಕೂ ಹೆಚ್ಚು ಜನರು, ಸುತ್ತಮುತ್ತಲಿನ ಹಳ್ಳಿಯ ಜನರ ಸಹಕಾರ ಪಡೆದುಕೊಂಡು ಗುರುವಾರ ಗುದ್ದಲಿ, ಪಿಕಾಸಿ ಕೈಯಲ್ಲಿ ಹಿಡಿದು ತಮ್ಮೂರಿನ ಗೋಮಾಳಕ್ಕೆ ಹೊಸ ಸ್ಪರ್ಶ ನೀಡಿದ್ದಾರೆ. ಸುಮಾರು 500ಕ್ಕೂ ಹೆಚ್ಚು ಎಕರೆ ಜಮೀನಿದ್ದು ಈ ಪೈಕಿ ಈಗ ಆರುವರೆ ಎಕರೆಯಲ್ಲಿ 25ಕ್ಕೂ ಹೆಚ್ಚು ಬಗೆಯ ಹಣ್ಣು, ಔಷಧಿ ಮತ್ತು ಪರಿಸರ ಸ್ನೇಹಿ ಸಸಿಗಳನ್ನು ನೆಟ್ಟಿದ್ದಾರೆ.ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖ ಮಂಗೇಶ ಭೆಂಡೆ, ಪರಿಸರ ಸಂರಕ್ಷಣೆ ಇಂದಿನ ತುರ್ತು ಅಗತ್ಯ. ಗ್ರಾಮಗಳಲ್ಲಿನ ಜನ ಪರಿಸರಕ್ಕೆ ಒತ್ತು ನೀಡುವ ಸಮಯ ಮತ್ತೆ ಬಂದಿದೆ. ಬೇರೆ ರಾಜ್ಯಗಳಲ್ಲಿ ಪರಿಸರಕ್ಕಾಗಿ ಒಂದು ದಿನ ಸಮಯ ನೀಡುತ್ತಾರೆ. ಊರಿನ ಹಬ್ಬಗಳು ಗ್ರಾಮದ ಪಕ್ಕದ ಕಾಡಿನಲ್ಲಿ ನಡೆಯಬೇಕು. ಗ್ರಾಮಸ್ಥರು ತಾವು ನೆಟ್ಟ ಗಿಡಗಳನ್ನು ಸಂರಕ್ಷಣೆ ಮಾಡಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ದೇವರಹುಬ್ಬಳ್ಳಿಯ ಸಿದ್ದಾಶ್ರಮದ ಸಿದ್ದಶಿವಯೋಗಿಗಳು ಮಾತನಾಡಿ, ಪ್ರಕೃತಿ ದೇವರ ಕೊಡುಗೆ. ಅದನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡುವ ಮಹತ್ವದ ಜವಾಬ್ದಾರಿ ಎಲ್ಲರ ಮೇಲಿದೆ. ಭಗವಂತ ಕೊಟ್ಟ ಉತ್ತಮ ಪರಿಸರ ನಾಶದ ಅಂಚಿಗೆ ಹೋಗಿದೆ. ಹೀಗಾಗಿ ಬಾಡ ಗ್ರಾಮಸ್ಥರು ಮಾದರಿ ಕಾರ್ಯ ಮಾಡಿದ್ದಿರಿ ಎಂದರು.ಗ್ರಾಮದ ಮುಖಂಡ ಕಲ್ಲನಗೌಡ ಪಾಟೀಲ್, ಆರ್‌ಎಸ್‌ಎಸ್ ಹಿರಿಯರಾದ ಶ್ರೀಧರ್ ನಾಡಿಗೇರ, ಮಲ್ಲಿಕಾರ್ಜುನ ಜೋಡಳ್ಳಿ, ನಿಂಗಪ್ಪ ಮಡಿವಾಳರ, ಹನುಮಂತಪ್ಪ ಅಂಬ್ಲೆಣ್ಣವರ, ನಾಗಪ್ಪ ಜೋಡಳ್ಳಿ, ಶಿವಾನಂದ ಮೆಣಸಿನಕಾಯಿ, ಯಲ್ಲಪ್ಪ ಮಾದರ ಇದ್ದರು. ಮಂಜುನಾಥ ವಾಲಿಶೆಟ್ಟರ್ ನಿರೂಪಿದರು. ಬಸವರಾಜ ಕರಮಡಿ ಸ್ವಾಗಸಿದರು. ಪ್ರಕಾಶ ಜೋಡಳ್ಳಿ ವಂದಿಸಿದರು.