ಉಡುಪಿ: ರಾಜ್ಯದ ಪ್ರತಿಷ್ಠಿತ ಸಹಕಾರ ಸಂಸ್ಥೆ ಉಡುಪಿಯ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ 2025-26ನೇ ಸಾಲಿನಲ್ಲಿ 4062.29 ಕೋಟಿ ರು. ವಾರ್ಷಿಕ ವಹಿವಾಟು ನಡೆಸಿ 18.13 ಕೋಟಿ ರು. ಲಾಭ ಗಳಿಸಿದೆ. ಸಂಘದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಸಾಧನೆ ಪ್ರಗತಿಗಳ ಬಗ್ಗೆ ವಿವರ ನೀಡಿದರು.
ಪ್ರಶಸ್ತಿಗಳು, ಸಾಮಾಜಿಕ ಸೇವೆ: ಸಂಘವು 2 ಬಾರಿ ರಾಷ್ಟ್ರ ಪ್ರಶಸ್ತಿ, 9 ಬಾರಿ ರಾಜ್ಯ ಮಟ್ಟದ ಪ್ರಶಸ್ತಿ ಹಾಗೂ 19 ಬಾರಿ ಅವಿಭಜಿತ ದ.ಕ ಜಿಲ್ಲಾ ಪ್ರಶಸ್ತಿಗಳನ್ನು ಪಡೆದು ಯಶಸ್ವಿ ಕ್ರೆಡಿಟ್ ಸಹಕಾರ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ವ್ಯವಹಾರ ಲಾಭದೊಂದಿಗೆ ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸುತ್ತಿರುವ ಸಂಘವು ಪ್ರತಿವರ್ಷ ಸುಮಾರು 25 ಲಕ್ಷ ರು.ಗಳನ್ನು ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಮೀಸಲಿಡುತ್ತಿದೆ.
ಸಹಕಾರ ಮಾಣಿಕ್ಯ ಪ್ರಶಸ್ತಿ: 72ನೇ ಅಖಿಲ ಭಾರತ ಸಹಕಾರ ಸಪ್ತಾಹ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಸಂಘಕ್ಕೆ ಸಹಕಾರ ಮಾಣಿಕ್ಯ ಪ್ರಶಸ್ತಿ, ನಗದು ಬಹುಮಾನ ಹಾಗೂ 5 ಗ್ರಾಂ ಬಂಗಾರದ ಪದಕ ಪಡೆದಿದೆ. ಸಹಕಾರ ಕ್ಷೇತ್ರದಲ್ಲಿ ಸಂಘದ ಉತ್ತಮ ಸೇವೆ. ನಿರ್ವಹಣೆ ಹಾಗೂ ಸಾಧನೆಯನ್ನು ಪರಿಗಣಿಸಿ ಈ ಗೌರವ ದೊರೆತಿದ್ದು, ಉಡುಪಿ ಜಿಲ್ಲೆಯ ಮೊದಲ ಕ್ರೆಡಿಟ್ ಸಹಕಾರ ಸಂಘವಾಗಿ ಈ ಪ್ರಶಸ್ತಿ ಪಡೆದಿದೆ.ಚೇತನಾ ಮೊಬೈಲ್ ಆ್ಯಪ್: ಡಿಜಿಟಲೀಕರಣದ ಭಾಗವಾಗಿ ಅಭಿವೃದ್ಧಿಪಡಿಸಿದ ಚೇತನಾ ಮೊಬೈಲ್ ಆ್ಯಪ್ ಮೂಲಕ ಗ್ರಾಹಕರು ತಮ್ಮ ಖಾತೆಗಳಿಗೆ ಸಂಬಂಧಿಸಿದಂತೆ ಹಣ ವರ್ಗಾವಣೆ, ಸಾಲ ಖಾತೆ ನಿರ್ವಹಣೆ, ಸಂಘದ ನೂತನ ಯೋಜನೆಗಳ ಮಾಹಿತಿಯನ್ನು ಪಡೆಯಬಹುದಾಗಿದೆ. ಈ ಆ್ಯಪ್ ಗೆ ಬಳಕೆದಾರರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಸಂಘದ ಎಲ್ಲ ಶಾಖೆಗಳಲ್ಲಿ ಸೇಫ್ ಲಾಕರ್, ಇ-ಸ್ಟಾಂಪಿಂಗ್, ಪಾನ್ ಕಾರ್ಡ್ ಸೇವೆ, ಹಣ ವರ್ಗಾವಣೆ, ಆರೋಗ್ಯ ಕಾರ್ಡ್, ವಿಮಾ ಸೇವೆಗಳು, ಮೊಬೈಲ್ ಮೂಲಕ ದೈನಿಕ ಠೇವಣಿ ಸಂಗ್ರಹಣೆ, ಶೂನ್ಯ ಬ್ಯಾಲೆನ್ಸ್ ವಿದ್ಯಾನಿಧಿ ಖಾತೆ, ಮಿಸ್ಡ್ ಕಾಲ್ ಸೇವೆ ಹಾಗೂ ಉಚಿತ ಎಸ್‌ಎಂಎಸ್ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.ಸಹಕಾರಿ ಸೌಧ ನಿರ್ಮಾಣ: ಮುಂದಿನ ವರ್ಷದಲ್ಲಿ 750 ಕೋಟಿ ರು. ಠೇವಣೆ ಹಾಗೂ 650 ಕೋಟಿ ರು. ಸಾಲ ವಿತರಣೆ ಸೇರಿದಂತೆ ಒಟ್ಟು ರೂ. 1400 ಕೋಟಿ ವ್ಯವಹಾರ ನಡೆಸುವ ಗುರಿಯನ್ನು ಸಂಸ್ಥೆಯು ಹೊಂದಿದೆ. ಇದಲ್ಲದೇ ಉಡುಪಿಯ ಹೃದಯಭಾಗದಲ್ಲಿ ಈಗಾಗಲೇ ಖರೀದಿಸಿರುವ 1 ಎಕರೆ ಜಾಗದಲ್ಲಿ ಅಂದಾಜು 10 ಕೋಟಿ ರು. ವೆಚ್ಚದಲ್ಲಿ ಸಹಕಾರ ಸೌಧ ನಿರ್ಮಾಣದ ಯೋಜನೆಯನ್ನು ಕೈಗೊಂಡಿದೆ.