ದಾವಣಗೆರೆ/ಹೊನ್ನಾಳಿ: ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆ ಮೇಲೆ ಕಲ್ಲು ತೂರಾಟ ಪೂರ್ವನಿಯೋಜಿಕ ಕೃತ್ಯವಾಗಿದೆ. ಕಾಂಗ್ರೆಸ್ ಸರ್ಕಾರವು ಓಲೈಕೆ ರಾಜಕಾರಣ ಮಾಡಿ, ರಾಜ್ಯವನ್ನು ಇಂತಹ ದುಸ್ಥಿತಿಗೆ ತಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ನ್ಯಾಮತಿ ತಾಲೂಕಿನ ಸೂರಕೊಂಡನಕೊಪ್ಪ ಕ್ಷೇತ್ರದಲ್ಲಿ ಶ್ರೀ ಸಂತ ಸೇವಾಲಾಲ್ ಜಯಂತಿ ವೇಳೆ ಕಪ್ಪುಬಟ್ಟೆ ಪ್ರದರ್ಶಿಸಿ, ಪ್ರತಿಭಟನೆ ನಡೆಸಿದ ಲಂಬಾಣಿ ಸಮುದಾಯದ ಮಾಲಾಧಾರಿ ಯುವಕರ ಮೇಲೆ ಎಫ್ಐಆರ್ ಮಾಡಿ, ಬಂಧಿಸಲಾಗುತ್ತಿದೆ. ಎಫ್ಐಆರ್ ದಾಖಲಿಸುವಂತಹ ಘೋರ ಅಪರಾಧವನ್ನು ಮಾಲಾಧಾರಿಗಳು ಮಾಡಿದ್ದಾದರೂ ಏನು? ಸರ್ಕಾರದ ವಿರುದ್ಧ ಪ್ರತಿಭಟಿಸುವುದೇ ಘೋರ ಅಪರಾಧವೇ ಎಂದು ವಿಜಯೇಂದ್ರ ಕಿಡಿಕಾರಿದರು.
ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ ಹಾಗೂ ಇಬ್ಬರು ಆಪ್ತ ಸಹಾಯಕರು ₹5 ಲಕ್ಷ ಲಂಚ ಸ್ವೀಕರಿಸುತ್ತಿರುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆಂಬ ಪ್ರಕರಣ ಬಗ್ಗೆ ಈಗಷ್ಚೇ ಮಾಹಿತಿ ಸಿಕ್ಕಿದೆ. ಇದರ ಬಗ್ಗೆ ಪೂರ್ಣ ಮಾಹಿತಿ ಪಡೆದು, ಮಾತನಾಡುವೆ ಎಂದಷ್ಟೇ ಹೇಳಿದರು.ಮುಂದಿನ ಸಿಎಂ ವಿಜಯೇಂದ್ರ ಅಂತ ಘೋಷಣೆ:
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಅನೇಕ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು. ಮಾರ್ಗದುದ್ದಕ್ಕೂ ಮುಂದಿನ ಮುಖ್ಯಮಂತ್ರಿ ಬಿ.ವೈ.ವಿಜಯೇಂದ್ರಗೆ ಜಯವಾಗಿ ಎಂಬ ಘೋಷಣೆಗಳು ಮೊಳಗುತ್ತಿದ್ದವು.
-(ಫೋಟೋ ಬರಲಿದೆ.)