ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನೂತನ ಜವಳಿ ಮತ್ತು ಸಿದ್ಧ ಉಡುಪು ನೀತಿ ಅಡಿ ಜವಳಿ ಪಾರ್ಕ್ ಸ್ಥಾಪನೆಗೆ ಖಾಸಗಿ ಉದ್ದಿಮೆದಾರರಿಗೂ ಅವಕಾಶ ಕಲ್ಪಿಸಲಾಗಿದೆ. ಗ್ರೀನ್ ಫೀಲ್ಡ್ ಟೆಕ್ಸಟೈಲ್ ಪಾರ್ಕ್ ಸ್ಥಾಪಿಸಲು ಆಸಕ್ತ ಉದ್ದಿಮೆದಾರರಿಗೆ ಕನಿಷ್ಠ 15 ಎಕರೆ ಭೂಮಿ ಹೊಂದಿದ್ದರೆ ಯೋಜನಾ ವೆಚ್ಚದ ಮೇಲೆ ಶೇ.40 ಇಲ್ಲವೇ ₹40 ಕೋಟಿ ಸಹಾಯಧನ ನೀಡಲಾಗುವುದು ಎಂದು ಜವಳಿ ಸಚಿವ ಶಿವಾನಂದ ಪಾಟೀಲ ವಿಧಾನ ಪರಿಷತ್ತಿಗೆ ತಿಳಿಸಿದರು.ಮಂಗಳವಾರ ಪ್ರಶ್ನೋತ್ತರ ವೇಳೆಯಲ್ಲಿ ಕೇಶವಪ್ರಸಾದ್ ಎಸ್., ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣದಲ್ಲಿ ನೇಕಾರರ ಜೀವನೋಪಾಯ ಉತ್ತೇಜಿಸಲು ಮತ್ತು ಗುಳೆ ಹೋಗುವುದನ್ನು ತಡೆಯಲು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಜವಳಿ ಪಾರ್ಕ್ ಸ್ಥಾಪಿಸಲಾಗುವುದು ಎಂದು ಹೇಳಿದರು.
ಗುಳೇದಗುಡ್ಡ ತಾಲೂಕಿನ ಹಾನಾಪೊರೆ ಎಸ್.ಬಿ. ಗ್ರಾಪಂ ವ್ಯಾಪ್ತಿಯ ಮುರಡಿ ಗ್ರಾಮದಲ್ಲಿ ಜವಳಿ ಪಾರ್ಕ್ ಸ್ಥಾಪನೆಗೆ 15 ಎಕರೆ ಭೂಮಿಯನ್ನು ಬಾಗಲಕೋಟೆಯ ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕರ ಹೆಸರಿಗೆ ಹಸ್ತಾಂತರ ಮಾಡಲಾಗಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಜವಳಿ ಪಾರ್ಕ್ ಸ್ಥಾಪನೆಗೆ ಟ್ರಾಂಜಾಕ್ಷನ್ ಅಡ್ವೈಸರ್ ನೇಮಕಾತಿಗೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ರಾಜ್ಯದಲ್ಲಿ ಸರ್ಕಾರಿ ಒಡೆತನದಲ್ಲಿ ಒಂದು ಜವಳಿ ಪಾರ್ಕ್ ಅಭಿವೃದ್ಧಿಪಡಿಸಲಾಗುತ್ತಿದೆ. ಖಾಸಗಿ ಒಡೆತನದಲ್ಲಿ 6 ಜವಳಿ ಪಾರ್ಕ್ ಗಳಿದ್ದು, 5 ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ಒಂದನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ರಾಜ್ಯದಲ್ಲಿ ಯಾವುದೇ ಜವಳಿ ಪಾರ್ಕ್ ಸ್ಥಗಿತಗೊಂಡಿಲ್ಲ ಎಂದು ಮಾಹಿತಿ ನೀಡಿದರು.ವೈಯಕ್ತಿಕ ಉದ್ದಿಮೆದಾರರು15 ಎಕರೆ ಜಾಗದೊಂದಿಗೆ ಪಾರ್ಕ್ ಸ್ಥಾಪನೆ ಮಾಡಲು ಮುಂದೆ ಬಂದರೆ ಜವಳಿ ನೀತಿ ಯೋಜನೆಯ ಮಾರ್ಗಸೂಚಿ ಅನ್ವಯ ಕ್ರಮ ಕೈಗೊಳ್ಳಲಾಗುವುದು.
- ಶಿವಾನಂದ ಎಸ್. ಪಾಟೀಲ ಸಕ್ಕರೆ ಹಾಗೂ ಜವಳಿ ಸಚಿವಜವಳಿ ಸಚಿವರು