ಬಗರ್‌ಹುಕುಂ ತಿದ್ದುಪಡಿಯಿಂದ ರೈತರಿಗೆ ಅನ್ಯಾಯ

KannadaprabhaNewsNetwork |  
Published : Nov 26, 2024, 12:46 AM IST
25ಎಚ್ಎಸ್ಎನ್5 : ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿ.ಶಿವರಾಂ. | Kannada Prabha

ಸಾರಾಂಶ

ಬಗರ್‌ಹುಕುಂ ಭೂಮಿ ಮಂಜೂರಾತಿಗೆ ಇದ್ದ ಸಮಿತಿ ಅಧಿಕಾರ ಮೊಟಕು ಮಾಡಲಾಗಿದೆ. ಸ್ಥಳೀಯ ವಿಧಾನಸಭಾ ಸದಸ್ಯರ ಹೊರತಾಗಿಯೂ ಅರ್ಜಿ ವಜಾಗೊಳಿಸಲು ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ.ಕಂದಾಯ ಇಲಾಖೆ ಸುತ್ತೋಲೆಯು ಬಗರ್‌ಹುಕುಂ ಸಾಗುವಳಿದಾರ ರೈತನಿಗೆ ಕಂಟಕವಾಗಿದ್ದು, ಬಡ ರೈತರಿಗೆ ಆಗುವ ಅನ್ಯಾಯ ತಡೆಯಬೇಕು ಎಂದು ಮಾಜಿ ಸಚಿವ ಬಿ. ಶಿವರಾಂ ತಮ್ಮದೇ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ಕಂದಾಯ ಇಲಾಖೆ ಸುತ್ತೋಲೆಯು ಬಗರ್‌ಹುಕುಂ ಸಾಗುವಳಿದಾರ ರೈತನಿಗೆ ಕಂಟಕವಾಗಿದ್ದು, ಬಡ ರೈತರಿಗೆ ಆಗುವ ಅನ್ಯಾಯ ತಡೆಯಬೇಕು. ಅಗತ್ಯವಿದ್ದರೆ ಸರ್ಕಾರದ ವಿರುದ್ಧ ಹೋರಾಟಕ್ಕೂ ಮುಂದಾಗುತ್ತೇವೆ ಎಂದು ಸರ್ಕಾರದ ನಿರ್ಧಾರದ ವಿರುದ್ಧ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಬಿ. ಶಿವರಾಂ ಗಂಭೀರವಾಗಿ ಆರೋಪಿಸಿ ತಮ್ಮದೇ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಬಗರ್‌ಹುಕುಂ ಭೂಮಿ ಮಂಜೂರಾತಿಗೆ ಇದ್ದ ಸಮಿತಿ ಅಧಿಕಾರ ಮೊಟಕು ಮಾಡಲಾಗಿದೆ. ಸ್ಥಳೀಯ ವಿಧಾನಸಭಾ ಸದಸ್ಯರ ಹೊರತಾಗಿಯೂ ಅರ್ಜಿ ವಜಾಗೊಳಿಸಲು ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಕಂದಾಯ ಭೂ ಕಂದಾಯ ಅಧಿನಿಯಮ ೧೯೬೪ರ ೯೪ಸಿ, ೯೪ಬಿ ,೯೪ಸಿ(೪) ಅವಕಾಶದಂತೆ ರಾಜ್ಯದಲ್ಲಿ ಲಕ್ಷಾಂತರ ಕುಟುಂಬದಿಂದ ೫೦,೫೩,೫೭ ಅಡಿ ಅರ್ಜಿ ಸಲ್ಲಿಕೆ ಆಗಿದೆ. ಅಕ್ರಮ ಸಕ್ರಮಕ್ಕಾಗಿ ಅರ್ಜಿ ಸಲ್ಲಿಸಿ ಕಾದಿದ್ದ ಬಡ ರೈತರಿಗೆ ಸರ್ಕಾರ ಶಾಕ್ ಕೊಟ್ಟಿದೆ. ದಶಕಗಳಿಂದ ಸಾಗುವಳಿ ಮಾಡುತ್ತಿರೋ ಲಕ್ಷ ಲಕ್ಷ ರೈತರಿಗೆ ಈಗ ಸಂಕಷ್ಟ ಎದುರಾಗಿದೆ. ಡಿಸೆಂಬರ್‌ ಮೊದಲ ವಾರದೊಳಗೆ ಅರ್ಜಿ ವಿಲೇವಾರಿ ಮಾಡಲು ಗಡುವು ಕೊಡಲಾಗಿದ್ದು, ಸರ್ಕಾರದ ಗಡುವಿಂದ ರೈತರಿಗೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳ ಮಾತು ಕೇಳಿ ಕಂದಾಯ ಸಚಿವರು ಎಡವಿದ್ದಾರೆ.

ಕಂದಾಯ ಇಲಾಖೆ ಸುತ್ತೋಲೆ ಬಗ್ಗೆ ಯಾವುದೇ ಶಾಸಕರು ಸಚಿವರು ಗಮನಹರಿಸಿಲ್ಲ. ಇಂತಹ ಸುತ್ತೋಲೆ ಇರೋದೇ ಎಷ್ಟೋ ಶಾಸಕರಿಗೆ ಗೊತ್ತಿಲ್ಲ. ಶಾಸಕರ ಅಧಿಕಾರ ಮೊಟಕುಗೊಳಿಸಲಾಗಿದೆ ಎಂದು ದೂರಿದರು. ಈ ಅಧಿಕಾರಿಗಳ ಪರಿಶೀಲನೆ ವೇಳೆ ಅರ್ಜಿ ವಜಾ ಆದರೆ ಕಾನೂನು ಹೋರಾಟಕ್ಕೆ ಅವಕಾಶ ಇಲ್ಲ. ಒಮ್ಮೆ ಐದು ಗುಂಟೆ ಮಂಜೂರಾಗಿ ಮತ್ತೆ ಅರ್ಜಿ ಸಲ್ಲಿಸಿದ್ರು ಅವರಿಗೆ ಮಂಜೂರಿಗೆ ಅವಕಾಶ ರದ್ದು ಮಾಡಲಾಗಿದೆ.

ಮಂಜೂರಾಗಿ ಭೂಮಿಯ ನಿಗದಿತ ಗಡಿಯೊಳಗೆ ಇದ್ದರೂ ಅವಕಾಶ ಇಲ್ಲ ಎಂದು ಸುತ್ತೋಲೆ ಹೊರಡಿಸಿದ್ದಾರೆ. ೧/೧೨/೨೦೨೩ರಂದು ಕಂದಾಯ ಇಲಾಖೆಯಿಂದ ಸುತ್ತೋಲೆ ಬಂದು ೫೦,೫೩,೫೭ ಅಡಿ ಅರ್ಜಿ ಸಲ್ಲಿಸಿದ್ದ ಅರ್ಜ ಶೀಘ್ರ ವಿಲೆವಾರಿಗೆ ಗಡುವು ನೀಡಲಾಗಿದೆ. ಗಡುವು ನೆಪಮಾಡಿ ಬಹುತೇಕ ಅರ್ಜಿ ವಜಾ ಮಾಡಲಾಗುತ್ತಿದೆ ಎಂದು ಸಿಡಿಮಿಡಿಗೊಂಡರು. ಬಡ ರೈತರಿಗೆ ಆಗುವ ಅನ್ಯಾಯ ತಡೆಯಿರಿ ಎಂದು ಒತ್ತಾಯಿಸಿದರು. ಅಗತ್ಯವಿದ್ದರೆ ಸರ್ಕಾರದ ವಿರುದ್ಧ ಹೋರಾಟಕ್ಕೂ ಮುಂದಾಗುತ್ತೇವೆ ಎಂದು ಇದೇ ವೇಳೆ ಎಚ್ಚರಿಕೆ ನೀಡಿದರು. ತಮ್ಮದೇ ಸರ್ಕಾರದ ನಡೆಗೆ ಕಾಂಗ್ರೆಸ್ ಹಿರಿಯ ನಾಯಕ ಬಿ ಶಿವರಾಂ ವಾಗ್ದಾಳಿ ನಡೆಸಿದ ಅವರು, ಒಂದೆಡೆ ಕಾಫಿ ಬೆಳೆಗಾರರಿಗೆ ೨೫ ಎಕರೆ ಬರೆಗೆ ಭೂಮಿ ಗುತ್ತಿಗೆಗೆ ಕಾನೂನು, ಇನ್ನೊಂದೆಡೆ ಬಡ ರೈತರ ಬಗರ್‌ಹುಕುಂ ಭೂಮಿ ವಶಕ್ಕೆ ಪಡೆಯಲು ಪ್ಲಾನ್ ಮಾಡಲಾಗಿದೆ. ಮುಂದೆ ನಡೆಯಲಿರುವ ಅಧಿವೇಶನದ ಒಳಗೆ ಸ್ಪಷ್ಟ ನಿಲುವು ಸಿಗಬೇಕು ಎಂದು ಆಕ್ರೋಶಭರಿತವಾಗಿ ಮಾತನಾಡಿದರು.

ಭೂ ಕಂದಾಯ ಅಧಿನಿಯಮ ೧೦೮ ಸಿ.ಸಿ.ಯಂತೆ ನಮೂನೆ ೫೩ ಮತ್ತು ೫೭ ಅರ್ಜಿಗಳನ್ನು ಯಾವುದೇ ನೋಟಿಸ್ ಅಥವಾ ತಿಳಿವಳಿಕೆ, ಮಾಹಿತಿ ಕೊಡದೇ, ಅಧಿಕಾರಿಗಳ ಹಂತದಲ್ಲೇ ವಜಾ ಮಾಡುವುದರಿಂದ ಬಡ ರೈತರನ್ನು ಅವಕಾಶ ವಂಚಿತರನ್ನಾಗಿ ಈಗಿನ ತಿದ್ದುಪಡಿ ಕಾನೂನು ಮಾಡುತ್ತಿದೆ. ಈ ಕಾನೂನಿಗೆ ಅಮೂಲಾಗ್ರ ಬದಲಾವಣೆಯ ಮೂಲಕ ಮೊದಲಿನಂತೆ ಕಾನೂನನ್ನು ಜಾರಿಗೆ ತರುವುದರ ಮೂಲಕ ಬಡರೈತರಿಗೆ ಅನುಕೂಲ ಮಾಡಿಕೊಡಬೇಕು. ಹತ್ತು ಅಪರಾಧಿಗಳಿಗೆ ಶಿಕ್ಷೆ ಆಗದಿದ್ದರೂ ಪರವಾಗಿಲ್ಲ ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು. ಜಿಲ್ಲಾಧಿಕಾರಿಗಳು ಅರ್ಜಿಗಳನ್ನು ವಜಾ ಮಾಡದೇ ಮತ್ತೊಂದು ಅವಕಾಶಕ್ಕಾಗಿ ನೋಟಿಸ್ ಮತ್ತು ತಿಳಿವಳಿಕೆ ಕೊಟ್ಟು ಪರಿಶೀಲಿಸುವುದರ ಅವಶ್ಯಕವಿದೆ ಎಂದರು. ಅನರ್ಹಗೊಳಿಸಿರುವ ಅರ್ಜಿಗಳನ್ನು ಪರಿಶೀಲಿಸಿದಾಗ ಒಮ್ಮೆ ಮಂಜೂರಾದವರಿಗೆ ಮತ್ತೊಮ್ಮೆ ಮಂಜೂರಾತಿ ಇಲ್ಲ. ಅನುಭವದಲ್ಲಿ ಇರುವುದಿಲ್ಲ.

ಗೋಮಾಳ ಸಾಕಷ್ಟು ಇರುವುದಿಲ್ಲ. ಈ ರೀತಿ ನಾನಾ ಕಾರಣಗಳನ್ನು ಕೊಡುವುದರ ಮೂಲಕ ಅರ್ಜಿಯನ್ನು ತಿರಸ್ಕೃತ ಮಾಡುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತದೆ. ಹಿಂದಿನ ಸಮಿತಿಯ ಮಂಜೂರಾತಿ ಮತ್ತು ಈಗಿನ ಮಂಜೂರಾತಿಯ ವ್ಯತ್ಯಾಸವನ್ನು ಗಮನಿಸಬೇಕು. ಸರ್ಕಾರದ ಗುರಿಗಾಗಿ ಬಡವರಿಗೆ ಅನ್ಯಾಯ ಮಾಡುವುದು ಸರಿಯಲ್ಲ ರೈತರೇ ದೇಶದ ಬೆನ್ನಲುಬು ಎಂಬುದನ್ನು ಮರೆಯಬಾರದು ಎಂದು ಕಾಂಗ್ರೆಸ್ ಸರ್ಕಾರಕ್ಕೆ ಕಾಂಗ್ರೆಸ್‌ ನಾಯಕ ಹಾಗೂ ಮಾಜಿ ಸಚಿವ ಶಿವರಾಂ ಕುಟುಕಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ