ಬಗರ್‌ಹುಕುಂ ಅರ್ಜಿ, ಕಾನೂನು ತೊಡಕು ನಿವಾರಣೆಗೆ ಒತ್ತಾಯ

KannadaprabhaNewsNetwork | Published : Feb 12, 2025 12:36 AM

ಸಾರಾಂಶ

ಬಗರ್‌ಹುಕುಂ ತಿರಸ್ಕೃತ ಅರ್ಜಿಗಳ ಪುನಃ ಪರಿಶೀಲನೆಯೊಂದಿಗೆ ಮಂಜೂರಾತಿ ನೀಡಲು ಅಡ್ಡಿಯಾಗಿರುವ ಕಾನೂನು ತೊಡಕುಗಳ ನಿವಾರಣೆ ಮಾಡುವಂತೆ ಕಂಪ್ಲಿ ತಹಸೀಲ್ದಾರ್ ಶಿವರಾಜ್ ಶಿವಪುರಗೆ ಭೂಮಿ ಮತ್ತು ವಸತಿ ಹತ್ತು ವಂಚಿತರ ಹೋರಾಟ ಸಮಿತಿ ಪದಾಧಿಕಾರಿಗಳು ಸೋಮವಾರ ಮನವಿ ಸಲ್ಲಿಸಿದರು.

ಕಂಪ್ಲಿ: ಬಗರ್‌ಹುಕುಂ ತಿರಸ್ಕೃತ ಅರ್ಜಿಗಳ ಪುನಃ ಪರಿಶೀಲನೆಯೊಂದಿಗೆ ಮಂಜೂರಾತಿ ನೀಡಲು ಅಡ್ಡಿಯಾಗಿರುವ ಕಾನೂನು ತೊಡಕುಗಳ ನಿವಾರಣೆ ಮಾಡುವಂತೆ ತಹಸೀಲ್ದಾರ್ ಶಿವರಾಜ್ ಶಿವಪುರಗೆ ಭೂಮಿ ಮತ್ತು ವಸತಿ ಹತ್ತು ವಂಚಿತರ ಹೋರಾಟ ಸಮಿತಿ ಪದಾಧಿಕಾರಿಗಳು ಸೋಮವಾರ ಮನವಿ ಸಲ್ಲಿಸಿದರು.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಸಮನ್ವಯ ಸಮಿತಿ ಸದಸ್ಯ ವಸಂತರಾಜ ಕಹಳೆ ಮಾತನಾಡಿ, ಗೋಮಾಳ ಭೂಮಿಯ ವಿಚಾರದ ಬಗ್ಗೆ ಸರ್ಕಾರ ಮಾನದಂಡ ಬದಲಾಯಿಸಬೇಕು. ಗೋಮಾಳ ಭೂಮಿಯ ಪರಿಕಲ್ಪನೆಯನ್ನೇ ಪುನರ್‌ ಆಲೋಚಿಸುವ ಅಗತ್ಯವಿದೆ. ಅರಣ್ಯ ಹಕ್ಕು ಕಾಯ್ದೆಯನ್ವಯ ಸಲ್ಲಿಸಿರುವ ಅರ್ಜಿಗಳು ಮಾನ್ಯಗೊಳ್ಳದೇ ಇನ್ನು ಅತಂತ್ರ ಸ್ಥಿತಿಯಲ್ಲಿಯೇ ಇರುವುದರಿಂದ ಸಾಗುವಳಿ ಮಾಡುತ್ತಿರುವ ಭೂಹೀನ ಬಡ ರೈತರು ಆತಂಕಕ್ಕೊಳಗಾಗಿದ್ದಾರೆ. ಇದೇ ಕಾರಣಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳ ಕಿರುಕುಳ ಅನುಭವಿಸಬೇಕಿದೆ. ಅರಣ್ಯ ಹಕ್ಕು ಕಾಯ್ದೆಯನ್ವಯ ಸಲ್ಲಿಸಿರುವ ಎಲ್ಲ ಭೂಹೀನರಿಗೆ ಭೂಮಿ ಮಂಜೂರು ಮಾಡಬೇಕು. ಸಾಗುವಳಿ ಮಾಡುತ್ತಾ ಅರ್ಜಿ ಸಲ್ಲಿಸಿರುವ ಬಹುತೇಕರು ಭೂರಹಿತರೇ ಆಗಿದ್ದಾರೆ. ಅದರಲ್ಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರಿಗೆ ಸಾಮಾಜಿಕ ನ್ಯಾಯವಾಗಿಯೂ ಈ ಭೂಮಿ ಮಂಜೂರಾತಿ ನೀಡುವ ಮೂಲಕ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಬೇಕಾಗಿರುವುದು ಸರ್ಕಾರದ ಜವಾಬ್ದಾರಿಯಾಗಿದೆ. ಪ್ರತಿ ಪಂಚಾಯಿತಿ ಮಟ್ಟದಲ್ಲಿ ವಸತಿ ರಹಿತರಿಗೆ ವಸತಿಯೂ ಮೂಲಭೂತ ಹಕ್ಕಾಗಿ ಪರಿಗಣಿಸಿ ಪ್ರತಿಯೊಬ್ಬರಿಗೂ ಗೌರವಯುತವಾದ ಬದುಕು ಕಟ್ಟಿಕೊಳ್ಳಲು ಇರುವ ಜಾಗ ಮಾನ್ಯ ಮಾಡುವುದು ಮತ್ತು ಜಾಗವಿಲ್ಲದವರಿಗೆ ವಾಸಕ್ಕೆ ಜಾಗ ನೀಡಬೇಕಾಗಿ ಮನವಿ ಮಾಡಿಕೊಂಡರು.

ಸಮಿತಿ ಪದಾಧಿಕಾರಿ ಸಣಾಪುರ ಮರಿಸ್ವಾಮಿ, ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ತಾಲೂಕು ಕಾರ್ಯಕರ್ತೆ ಅರುಣಾ, ಅಖಿಲ ಕರ್ನಾಟಕ ಕಿಸಾನ್ ಜಾಗೃತಿ ಸಂಘದ ಜಿಲ್ಲಾ ಅಧ್ಯಕ್ಷ ಬಿ. ಗಂಗಾಧರ, ಪದಾಧಿಕಾರಿಗಳಾದ ಉಷಾ, ಗುಬಾಜಿ ರಾಮಾಂಜಿನಿ, ಶಿವಪ್ಪ, ಎಂ. ಶಿವಪ್ಪ, ಭೀಮ್ ಆರ್ಮಿಯ ಜಿಲ್ಲಾಧ್ಯಕ್ಷ ಮಣ್ಣೂರು ರವಿ, ಪ್ರಮುಖರಾದ ಟಿ. ರುದ್ರಪ್ಪನಾಯಕ, ದುರುಗೇಶ ಬರಗೂರು, ಈ. ಧನಂಜಯ, ರಮೇಶ್, ಜಿ. ವೆಂಕಟೇಶ, ಜಿ. ರಾಮಯ್ಯ, ಹನುಮಂತಪ್ಪ ಇತರರಿದ್ದರು.

Share this article