ಗದಗ: ಬಗರಹುಕುಂ ಸಾಗುವಳಿದಾರರು ಹಾಗೂ ಅರಣ್ಯ ಅವಲಂಬಿತ ರೈತರಿಗೆ ಹಕ್ಕುಪತ್ರ ನೀಡದೇ ವಿಳಂಬ ಧೋರಣೆ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಶುಕ್ರವಾರ ಪೊರಕೆ ಹಿಡಿದು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಹಿಳೆಯರು ಹಾಗೂ ವಿವಿಧ ಸಂಘಟನೆಯ ಮುಖಂಡರು ಭಾಗವಹಿಸಿ ರೈತರಿಗೆ ಬೆಂಬಲ ಸೂಚಿಸಿದರು.
ಈ ಸಂದರ್ಭದಲ್ಲಿ ಧನ್ನುರಾಮ ತಂಬೂರಿ, ರಮೇಶ ಮಜ್ಜೂರ, ಚಂಬಣ್ಣ ಪರಸಾಪೂರ, ಶಾಂತವ್ವ ನಾಗಾವಿ, ಶಶಿಕಲಾ ಆಮಟೆ, ಸೋಮನಾಥ ಪೂಜಾರ, ನಬಿಸಾಬ ನದಾಫ, ಈಶಪ್ಪ ಕಡಕೋಳ, ದ್ಯಾಮಣ್ಣ ಲಮಾಣಿ, ಪರಶುರಾಮ ಜಲ್ಲಿಗೇರಿ, ಫಿರೋಜ್ ನದಾಫ್, ಖಾದೀರ್ ಸಾಬ್, ಮಹಮ್ಮದ್ ಶಲವಡಿ ಸೇರಿದಂತೆ ಅನೇಕ ರೈತರು, ಮಹಿಳೆಯರು ಭಾಗವಹಿಸಿ ಅರಣ್ಯ ಅವಲಂಬಿತ ಬಗರಹುಕುಂ ಸಾಗುವಳಿದಾರ ರೈತರಿಗೆ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು.ಸತತ 19 ದಿನಗಳಿಂದ ಬಗರಹುಕುಂ ಸಾಗುವಳಿದಾರರು ಹಾಗೂ ಅರಣ್ಯ ಅವಲಂಬಿತ ರೈತರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಈಗಾಗಲೇ, ದೀಡ್ ನಮಸ್ಕಾರ, ಪೊರಕೆ ಚಳವಳಿ ನಡೆಸಿದ್ದು ಸೆ 6ರ ಶನಿವಾರ ನಗರದ ಮುಳುಗುಂದ ನಾಕಾದಿಂದ ಜಿಲ್ಲಾಡಳಿತ ಭವನದ ವರೆಗೂ ರೈತರೆಲ್ಲ ಸೇರಿ ಸಾಮೂಹಿಕ ಉರುಳು ಸೇವೆಗೆ ನಿರ್ಧರಿಸಲಾಗಿದೆ ಎಂದು ಹೋರಾಟಗಾರ ರವಿಕಾಂತ ಅಂಗಡಿ ಹೇಳಿದರು.