ಬಾಗೇಪಲ್ಲಿ : ಚಿಕ್ಕಬಳ್ಳಾಪುರದ ನಂದಿ ಬೆಟ್ಟದಲ್ಲಿ ನಡೆದ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳು ಬಾಗೇಪಲ್ಲಿ ಹೆಸರನ್ನು ‘ಭಾಗ್ಯನಗರ’ ಎಂಬುದಾಗಿ ಮರುನಾಮಕರಣ ಹಾಗೂ 189 ಕೋಟಿ ರು.ಗಳ ವೆಚ್ಚದ ಗಂಟ್ಲಮಲ್ಲಮ್ಮ ಅಣೆಕಟ್ಟು ನಿರ್ಮಾಣ ಮಾಡುವುದಾಗಿ ಘೋಷಿಸಿದ ಬಳಿಕ ವಿವಿಧ ಸಂಘಟನೆಗಳು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದವು.
ತಾಲೂಕಿನ ಪಾತಪಾಳ್ಯದ ಸಮೀಪದ ಗಂಟ್ಲಮಲ್ಲಮ್ಮ ಕಣಿವೆಯಲ್ಲಿ ಸುಮಾರು 189 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಅಣೆಕಟ್ಟು ನಿರ್ಮಾಣದ ಬೃಹತ್ ನೀರಾವರಿ ಯೋಜನೆ, ಭಾಗ್ಯನಗರದಲ್ಲಿ ಸುಮಾರು 16.25 ಕೋಟಿ ವೆಚ್ಚದ ಹೈಟೆಕ್ ಆಸ್ಪತ್ರೆಯ ಜೊತೆಗೆ ‘ಭಾಗ್ಯನಗರ’ ದ ಕನಸಿನ ಜೊತೆಗೆ ನೂತನ ಚೇಳೂರು ತಾಲೂಕಿಗೆ 5.75 ಕೋಟಿ ವೆಚ್ಚದ ಸಮುದಾಯ ಆರೋಗ್ಯ ಕೇಂದ್ರವನ್ನು ಸಚಿವ ಸಂಪುಟದಲ್ಲಿ ಅನುಮೋಧನೆ ಮೂಲಕ ಕನಸು ನನಸಾಗಿದೆ.
ತೆಲುಗು ಭಾಷೆಯಲ್ಲಿರುವ ಪಲ್ಲಿ ಎಂಬ ಪದವನ್ನು ತೆಗೆದು ಬಾಗೇಪಲ್ಲಿಯನ್ನು ಭಾಗ್ಯನಗರ ಎಂಬುದಾಗಿ ಮರುನಾಮಕರಣ ಮಾಡುವಂತೆ ಕಳೆದ ಮೂರು ದಶಕಗಳಿಂದ ನಾನಾರೀತಿಯ ಹೋರಾಟಗಳನ್ನು ಸಾಹಿತಿಗಳು, ಕನ್ನಡ ಪರ ಸಂಘನೆಗಳು , ಕನ್ನಡಪರ ಚಿಂತಕರು ಸೇರಿದಂತೆ ವಿವಿಧ ಸಂಘಟನೆಗಳು ಹೋರಾಟ ನಡೆಸುತ್ತಾ ಬಂದಿದ್ದರು. ಡಾ.ರಾಜ್ ಸೂಚಿಸಿದ್ದ ಹೆಸರು
30 ವರ್ಷಗಳ ಹಿಂದೆ ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಕನ್ನಡ ಚಲಚಿತ್ರ ಖ್ಯಾತ ನಟ ಡಾ.ರಾಜ್‍ಕುಮಾರ್ ರವರು ಭಾಗವಹಿಸಿ ಬಾಗೇಪಲ್ಲಿ ಹೆಸರಿನ ಬದಲಿಗೆ ಭಾಗ್ಯನಗರ ಎಂಬುದಾಗಿ ಮರುನಾಮಕರಣ ಮಾಡುವ ಕಿಚ್ಚು ಇಲ್ಲಿನ ಕನ್ನಡಗರಲ್ಲಿ ಹಚ್ಚಿದ್ದರು. ಇದೇ ಕಾರ್ಯಕ್ರಮದಲ್ಲಿ ಖ್ಯಾತ ಚಲನ ಚಿತ್ರ ನಟ ಉದಯಕುಮಾರ್ ಸಹ ಇದೇ ಮಾತು ಆಡಿದ್ದರು. ಅಂದಿನಿಂದ ಪ್ರಾರಂಭವಾದ ಈ ಹೋರಾಟ ಕರ್ನಾಟಕ ರಕ್ಷಣಾ ವೇಧಿಕೆ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳು ನಾನಾ ರೀತಿಯ ಹೋರಾಟಗಳನ್ನು ನಡೆಸಿಕೊಂಡು ಬಂದಿದ್ದರು.
ಶಾಸಕ ಸುಬ್ಬಾರೆಡ್ಡಿ ಪ್ರಯತ್ನ ಫಲ
ಇಲ್ಲಿನ ಕನ್ನಡಪರ ಹೋರಾಟಗಾರರ ಬಹುದಿನಗಳ ಬೇಡಿಕೆಯಾಗಿದ್ದ ಬಾಗೇಪಲ್ಲಿ ಹೆಸರನ್ನು ಬದಲಿಸಿ ಭಾಗ್ಯನಗರವನ್ನಾಗಿಸುವ ನಿಟ್ಟಿನಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ನಿರಂತರವಾಗಿ ಪ್ರಾಮಾಣಿಕ ಪ್ರಯತ್ನದಿಂದಾಗಿ ವಿದಾನ ಸಭೆ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವ ಜೊತೆಗೆ ಛಲವಿಡದ ತಿವಿಕ್ರಮನಂತೆ ತಮ್ಮ ಪ್ರಯತವನ್ನು ಮುಂದುವರೆಸಿದ ಪರಿಣಾಮವಾಗಿ ನಂದಿ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇನ್ನು ಮುಂದೆ ಬಾಗೇಪಲ್ಲಿ ‘ಭಾಗ್ಯನಗರ’ವಾಗಿ ಹೆಸರು ಬದಲಾವಣೆಯಾಗಿದೆ ಎಂದು ಪ್ರಕಟಿಸಿದ್ದು ದಶಕಗಳ ಕನಸು ನನಸಾಗಲು ಪ್ರಮುಖ ಪಾತ್ರವಹಿಸಿರುವ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ರವರಿಗೆ ಭಾಗ್ಯನಗರದ ಜನರು ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳು ಧನ್ಯವಾದಗಳನ್ನು ತಿಳಿಸಿದರು. ಕರ್ನಾಟಕ ರಕ್ಷಣಾ ವೇದಿಕೆ ತಾ ಅಧ್ಯಕ್ಷ ಕೆ.ಎನ್.ಹರೀಶ್ ನೇತೃತ್ವದಲ್ಲಿ ತೆರೆದ ವಾಹನದಲ್ಲಿ ಕಾರ್ಯಕ್ರ್ತರು ಮೆರವಣಿಗೆಯನ್ನು ನಡೆಸಿ ವಿಜಯೋತ್ಸವವನ್ನು ಆಚರಿಸಿದರು. ಕರವೇ ಸ್ವಾಭಿಮಾನಿ ಬಳಗದ ಅಧ್ಯಕ್ಷ ಬಿಟಿಸಿ ಸೀನಾ ನೇತೃತ್ವದಲ್ಲಿ ಕನ್ನಡ ಬಾವುಟಗಳನ್ನು ಹಿಡಿದು ವಿಜಯೋತ್ಸವ ಆಚರಿಸಿ ಸಿಹಿಯನ್ನು ಹಂಚಿ ಸಂಭ್ರಮಾಚರಣೆಯನ್ನು ನಡೆಸಲಾಯಿತು.
ಸಿಎಂ ಡಿಸಿಎಂಗೆ ಅಭಿನಂದನೆ
ಈ ಸಂದರ್ಭದಲ್ಲಿ ಕನ್ನಡ ಪ್ರಭ ಪತ್ರಿಕೆಯೊಂದಿಗೆ ಮಾತನಾಡಿದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಬಾಗೇಪಲ್ಲಿ ಹೆಸರನ್ನು ಬದಲಿಸಿ ಭಾಗ್ಯನಗರವನ್ನಾಗಿ ಮರುನಾಮಕರಣ ಘೋಷಣೆ ಹಾಗೂ ವಿವಿಧ ಯೋಜನೆಗಳಿಗೆ ಮಂಜೂರು ಮಾಡಿದ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವ ಸಂಪುಟ ಸದಸ್ಯರಿಗೆ ಅಭಿನಂಧನೆ ಸಲ್ಲಿಸಿದ ಅವರು ಬಾಗೇಪಲ್ಲಿ(ಭಾಗ್ಯನಗರ) ವಿಧಾನ ಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.