ಧಾರವಾಡ: ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ವಿನಯ ಕುಲಕರ್ಣಿ ಅವರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಶುಕ್ರವಾರ ನಗರದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ವಿಜಯೋತ್ಸವ ಆಚರಿಸಿದರು.
ಹಾಗೆಯೇ, ವಿನಯ ಕುಲಕರ್ಣಿ ಅಭಿಮಾನಿ ಬಳಗದಿಂದ ನಗರದ ಗಾಂಧಿಚೌಕ್‌ನಲ್ಲಿ ಸಾವಿರ ಜನರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಮಾಡಲಾಯಿತು. ಬಸವರಾಜ ಜಾಧವ, ಪ್ರಶಾಂತ್ ಕೇಕರೆ, ಗೌರಮ್ಮ ಬೋಲೋಗಿ, ನಾರಾಯಣ ಸುಳ್ಳೋರ, ವಿರೂಪಾಕ್ಷ ವಕ್ಕುಂದ, ಹಿದಾಯತ್ ರಾಯಚೂರು, ಬಾಬು ಜಾದವ್, ಶಿವಾಜಿ ಮಟ್ಟಿ, ಮನಿ ಖಲಂದರ್ ಜಾಗೀರ್ದಾರ, ಮಂಜುನಾಥ ಮಾನೆ, ವಿನಾಯಕ್ ಕಟಿಗೆನ್ನವರ್ ಇದ್ದರು.
ನ್ಯಾಯವನ್ನು ಎತ್ತಿ ಹಿಡಿದ ನ್ಯಾಯಾಂಗಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. ಕೃತಜ್ಞತೆಈ ಪಯಣದಲ್ಲಿ ನಮ್ಮೊಂದಿಗೆ ಅಚಲವಾದ ನಂಬಿಕೆ ಮತ್ತು ಬೆಂಬಲದೊಂದಿಗೆ ನಿಂತ ನಮ್ಮ ಕಾಂಗ್ರೆಸ್ ಪಕ್ಷದ ಹೈಕಮಾಂಡ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಪ್ರತಿಯೊಬ್ಬ ಬೆಂಬಲಿಗರಿಗೂ ಹೃದಯಪೂರ್ವಕ ಧನ್ಯವಾದ ಅರ್ಪಿಸುತ್ತೇವೆ. ನಿಮ್ಮ ಪ್ರೀತಿ, ವಿಶ್ವಾಸ ಮತ್ತು ಬೆಂಬಲ ನಮಗೆ ಅಮೂಲ್ಯವಾಗಿದೆ ಎಂದು ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ವಿನಯ ಕುಲಕರ್ಣಿ ಹೇಳಿದ್ದಾರೆ.
ಶಾಸಕ ವಿನಯ ಕುಲಕರ್ಣಿ ಅವರಿಗೆ ಹೈಕೋರ್ಟ್‌ನಲ್ಲಿ ಜಾಮೀನು ದೊರೆತಿರಬಹುದು. ಆದರೆ, ನ್ಯಾಯದ ಪರ ಕಾನೂನು ಇದ್ದು, ಸುಪ್ರೀಂಕೋರ್ಟ್‌ನಲ್ಲಿ ಇದನ್ನು ಪ್ರಶ್ನಿಸಿ ಅಲ್ಲಿ ನ್ಯಾಯ ಪಡೆಯುತ್ತೇವೆ. ಸದ್ಯ ಯಾವ ಕಾರಣಕ್ಕೆ ಜಾಮೀನು ಮಂಜೂರಾಗಿದೆ ಗೊತ್ತಿಲ್ಲ. ಅದನ್ನು ತಿಳಿದು ಸುಪ್ರಿಂನಲ್ಲಿ ಪ್ರಶ್ನಿಸುತ್ತೇವೆ ಎಂದು ಕೊಲೆಯಾದ ಯೋಗೀಶಗೌಡರ ಸಹೋದರ ಗುರುನಾಥಗೌಡ ಗೌಡರ ಹೇಳಿದ್ದಾರೆ.
ಯೋಗೀಶಗೌಡ ಗೌಡರ ಕೊಲೆ ಆರೋಪಿಗಳಿಗೆ ತಕ್ಕ ಶಿಕ್ಷೆ ಆಗುವ ವರೆಗೂ ನಮ್ಮ ಹೋರಾಟ ಮಾತ್ರ ನಿಲ್ಲೋದಿಲ್ಲ. ಸದ್ಯ ಹೈಕೋರ್ಟ್ ಜಮೀನು ನೀಡಿರುವುದು ನಮಗೂ ಬೇಸರ ತಂದಿದೆ. ಯಾವ ಆಧಾರದ ಮೇಲೆ ಸೆಷೆನ್ಸ್ ನ್ಯಾಯಾಲಯದ ತೀರ್ಪು ಅಮಾನತ್ತು ಇಡಲಾಗಿದೆ ಎಂಬುದನ್ನು ಅರಿತು ಮುಂದಿನ ದಿನಗಳಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗಲಿದ್ದೇವೆ ಎಂದು ಹೋರಾಟಗಾರ ಬಸವರಾಜ ಕೊರವರ ತಿಳಿಸಿದ್ದಾರೆ.