ಬೈಲಹೊಂಗಲ ಮಾಜಿ ಶಾಸಕ ಬೋಳಶೆಟ್ಟಿ ಪುತ್ರನ ಕೊಲೆ?

KannadaprabhaNewsNetwork |  
Published : Mar 25, 2026, 02:00 AM IST
ಶಂಕಿತ ಮೃತ ರಾಜು ಬೋಳಶೆಟ್ಟಿ | Kannada Prabha

ಸಾರಾಂಶ

ಧಾರವಾಡ ಸಮೀಪದ ರಾಮಾಪುರ ಗ್ರಾಮದ ಬಳಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಕ್ಷೇತ್ರದ ಮಾಜಿ ಶಾಸಕ ಬಾಬುರಾವ್ ಬೋಳಶೆಟ್ಟಿ ಅವರ ಪುತ್ರ ರಾಜು ಬೋಳಶೆಟ್ಟಿ (53) ಸಂಶಯಾಸ್ಪದ ರೀತಿಯಲ್ಲಿ ತಮ್ಮ ಕಾರಿನಲ್ಲಿಯೇ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮಂಗಳವಾರ ಪತ್ತೆಯಾಗಿದ್ದಾರೆ.

ಧಾರವಾಡ:

ಸಮೀಪದ ರಾಮಾಪುರ ಗ್ರಾಮದ ಬಳಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಕ್ಷೇತ್ರದ ಮಾಜಿ ಶಾಸಕ ಬಾಬುರಾವ್ ಬೋಳಶೆಟ್ಟಿ ಅವರ ಪುತ್ರ ರಾಜು ಬೋಳಶೆಟ್ಟಿ (53) ಸಂಶಯಾಸ್ಪದ ರೀತಿಯಲ್ಲಿ ತಮ್ಮ ಕಾರಿನಲ್ಲಿಯೇ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮಂಗಳವಾರ ಪತ್ತೆಯಾಗಿದ್ದಾರೆ.

ರಾಮಾಪುರ ಸಮೀಪವಿರುವ ರೈಲ್ವೆ ಹಳಿ ಪಕ್ಕದ ದಟ್ಟ ಅರಣ್ಯ ಹಾಗೂ ನಿರ್ಜನ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಮಧ್ಯಾಹ್ನ 2.30ರ ಸುಮಾರಿಗೆ ಕಾರೊಂದು ಹೊತ್ತಿ ಉರಿಯುತ್ತಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲಿಸಿದಾಗ, ಕಾರಿನೊಳಗೆ ವ್ಯಕ್ತಿಯೊಬ್ಬರ ಮೃತದೇಹ ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವುದು ಕಂಡುಬಂದಿದೆ. ​ಮೃತ ವ್ಯಕ್ತಿ ಬೈಲಹೊಂಗಲ ತಾಲೂಕಿನ ಉಡಕೇರಿ ಗ್ರಾಮದ ನಿವಾಸಿ ರಾಜು ಬೋಳಶೆಟ್ಟಿ ಎಂದು ಪೊಲೀಸರು ಶಂಕಿಸಿದ್ದಾರೆ. ಮೃತ ವ್ಯಕ್ತಿ ಮಾಜಿ ಶಾಸಕ ಬಾಬುರಾವ್ ಬೋಳಶೆಟ್ಟಿ ಅವರ ಪುತ್ರರಾಗಿದ್ದು, ತಮಗೆ ಸೇರಿದ ವ್ಯಾಗನಾರ್‌ ಕಾರಿನಲ್ಲಿಯೇ ಸುಟ್ಟು ಹೋಗಿದ್ದು, ದೇಹವನ್ನು ಗುರುತಿಸಲಾಗದಷ್ಟು ಬೆಂಕಿ ಆಹುತಿ ತೆಗೆದುಕೊಂಡಿದೆ.

ಹೋದವರು ಬರಲಿಲ್ಲ:

ತಂದೆ ಮಾಜಿ ಶಾಸಕರಾಗಿದ್ದರೂ ಪುತ್ರ ರಾಜು ಅವರಿಗೆ ರಾಜಕೀಯ ವ್ಯಾಮೋಹ ಇರಲಿಲ್ಲ‌‌. ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ಜೊತೆಗೆ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದರು. ಸುತ್ತಲೂ ಹಳ್ಳಿಗಳಲ್ಲಿ ಮುಖಂಡನಾಗಿ ರಾಜಿ ಪಂಚಾಯಿತಿ ನಡೆಸುತ್ತಿದ್ದರು. ಆದರೆ, ಸೋಮವಾರ ಸಂಜೆ ಮನೆಯಿಂದ ಹೊರಗೆ ಹೋದವರು ಮರಳಿ ಬಂದಿರಲಿಲ್ಲ. ಇತ್ತ, ದಟ್ಟ ಅರಣ್ಯದಲ್ಲಿ ರಾಜು ಬೋಳಶೆಟ್ಟಿಗೆ ಸೇರಿದ ಕಾರು ಸುಟ್ಟು ಭಸ್ಮವಾಗಿದೆ. ಸ್ಥಳಕ್ಕೆ ಆಗಮಿಸಿದ ಕುಟುಂಬದ ಸದಸ್ಯರು ಕಣ್ಣೀರು ಹಾಕಿದರು.

ಘಟನಾ ಸ್ಥಳವು ಅತ್ಯಂತ ನಿರ್ಜನ ಪ್ರದೇಶವಾಗಿದ್ದು, ದುಷ್ಕರ್ಮಿಗಳು ರಾಜು ಅವರನ್ನು ಅಪಹರಿಸಿ ತಂದು ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಹತ್ಯೆಯ ನಂತರ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಶವವನ್ನು ಕಾರಿನಲ್ಲೇ ಇರಿಸಿ ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿಯಾಗಿರುವ ಸಾಧ್ಯತೆ ದಟ್ಟವಾಗಿದೆ.

ವಿಷಯ ತಿಳಿದು ಪೊಲೀಸ್‌ ಅಧೀಕ್ಷಕ ಗಂಜನ್‌ ಆರ್ಯ ಹಾಗೂ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ವಿಧಿ-ವಿಜ್ಞಾನ ತಂಡ ಮತ್ತು ಶ್ವಾನದಳ ಭೇಟಿ ನೀಡಿ ಸಾಕ್ಷಿ ಸಂಗ್ರಹಿಸಿವೆ. ರಾಮಾಪುರ ಬಳಿ ನಡೆದ ಕಾರಿನ ದುರಂತ ಪ್ರಕರಣದಲ್ಲಿ ಪ್ರಾಥಮಿಕ ತನಿಖೆಯಲ್ಲಿ ಮೃತವ್ಯಕ್ತಿ ರಾಜು ಬೋಳಶೆಟ್ಟಿ ಎಂದು ಶಂಕಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಡಿಎನ್‌ಎ ಪರೀಕ್ಷೆ ಮಾಡಲಾಗುತ್ತಿದೆ. ಜೊತೆಗೆ ಕೊಲೆಯ ಮಾಡಿರಬಹುದಾದ ಸಾಧ್ಯತೆಗಳಿದ್ದು ಆರೋಪಿಗಳ ಹುಡುಕಾಟ ಸಹ ನಡೆದಿದೆ.

ಗುಂಜನ್‌ ಆರ್ಯ ಎಸ್ಪಿ-ಧಾರವಾಡ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳೆಯರು ಸಹನ ಶೀಲರು ಹಾಗೂ ಕೆಚ್ಚೆದೆಯ ಹೋರಾಟಗಾರರು- ಡಾ. ಮೀನಾಕ್ಷಿ ಜಂಗಮನಿ
ಅನ್ಯ ಜಿಲ್ಲೆಗೆ ಭದ್ರಾ ನೀರು ಕೊಟ್ಟರೆ ಸಂಕಷ್ಟ: ಆತಂಕ