ರಂಗೇರಿದ ಉಪ ಚುನಾವಣಾ ಕಣ

KannadaprabhaNewsNetwork |  
Published : Mar 25, 2026, 02:00 AM IST
ಕಕಕಕಕಕ | Kannada Prabha

ಸಾರಾಂಶ

ನಾಮಪತ್ರ ಸಲ್ಲಿಕೆ ಅವಧಿ ಮುಗಿದ ಬೆನ್ನಲ್ಲೇ ಅಭ್ಯರ್ಥಿಗಳು ಬಿರುಸಿನ ಪ್ರಚಾರ ಆರಂಭಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ/ದಾವಣಗೆರೆ

ಏ.9ರಂದು ನಡೆಯಲಿರುವ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರಗಳ ಉಪ ಚುನಾವಣೆಯ ನಾಮಪತ್ರಗಳ ಪರಿಶೀಲನೆ ಕಾರ್ಯ ಮಂಗಳವಾರ ಮುಕ್ತಾಯಗೊಂಡಿದ್ದು, ನಾಮಪತ್ರಗಳನ್ನು ವಾಪಸ್‌ ಪಡೆಯಲು ಗುರುವಾರ ಕೊನೆಯ ದಿನವಾಗಿದೆ. ಈ ಮಧ್ಯೆ, ನಾಮಪತ್ರ ಸಲ್ಲಿಕೆ ಅವಧಿ ಮುಗಿದ ಬೆನ್ನಲ್ಲೇ ಅಭ್ಯರ್ಥಿಗಳು ಬಿರುಸಿನ ಪ್ರಚಾರ ಆರಂಭಿಸಿದ್ದಾರೆ.

ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ। ವೀರಣ್ಣ ಚರಂತಿಮಠ ಬಿರುಸಿನ ಪ್ರಚಾರ ಕೈಗೊಂಡಿದ್ದು, ಮತದಾರರ ಮನವೊಲಿಕೆಗೆ ಕಸರತ್ತು ಆರಂಭಿಸಿದ್ದಾರೆ. ಮಂಗಳವಾರ ನಗರ ಆರಾಧ್ಯ ದೈವ ಮೋಟಗಿ ಬಸವೇಶ್ವರ ದೇವರಿಗೆ ಪೂಜೆ ಸಲ್ಲಿಸಿ ನಂತರ 5, 6 ಮತ್ತು 9ನೇ ವಾರ್ಡ್‌ನಲ್ಲಿ ಪಾದಯಾತ್ರೆ ಮೂಲಕ ಮನೆ, ಮನೆಗೆ ತೆರಳಿ ಮತಯಾಚನೆ ಮಾಡುವ ಮೂಲಕ ಪ್ರಚಾರ ಆರಂಭಿಸಿದರು. ಕ್ಷೇತ್ರದಲ್ಲಿ ಹುಮ್ಮಸ್ಸಿನಿಂದ ಬಿಜೆಪಿ ಅಭ್ಯರ್ಥಿ, ಕಾರ್ಯಕರ್ತರು, ಸ್ಥಳೀಯ ನಾಯಕರು ಭರ್ಜರಿ ಪ್ರಚಾರ ನಡೆಸಿದರು.

ಇತ್ತ, ದಾವಣಗೆರೆ ದಕ್ಷಿಣದಲ್ಲೂ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಪತ್ನಿ ಸಂಧ್ಯಾ ಶ್ರೀನಿವಾಸ ಇಲ್ಲಿ ಭರ್ಜರಿ ಪ್ರಚಾರ ನಡೆಸಿದರು. ಈ ವೇಳೆ, ಮುಸ್ಲಿಂ ಮಹಿಳೆಯರು ಸಂಧ್ಯಾರನ್ನು ತಮ್ಮ ಮನೆ ಒಳಗೆ ಕರೆದುಕೊಂಡು ಹೋಗಿ, ಹಿಂದೂ ಸಂಪ್ರದಾಯದಂತೆ ಉಂಡಿ ತುಂಬಿ, ಆಶೀರ್ವಾದ ಮಾಡಿದರು.

ಕಾಂಗ್ರೆಸ್‌ನಿಂದಲೂ ಪ್ರಚಾರ ಆರಂಭ:

ಇದೇ ವೇಳೆ, ಕಾಂಗ್ರೆಸ್‌ ಕೂಡ ಭರ್ಜರಿ ಪ್ರಚಾರ ಆರಂಭಿಸಿದ್ದು, ಅಭ್ಯರ್ಥಿಗಳು ಮನೆ, ಮನೆ ಪ್ರಚಾರ ಕೈಗೊಂಡಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಸಮರ್ಥ ಎಂ.ಶಾಮನೂರು, ತಮ್ಮ ನಂಬಿಕೆಯಂತೆ ಬರಿಗಾಲಿನಲ್ಲಿಯೇ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ನಗರದ ದಕ್ಷಿಣ ಕ್ಷೇತ್ರದ ಹಲವು ಪ್ರದೇಶಗಳಿಗೆ ಕಾಂಗ್ರೆಸ್ ಮುಖಂಡರ ಜೊತೆ ತೆರಳಿ, ಬೆಂಬಲ ಕೋರಿ, ಮತಯಾಚಿಸಿದರು. ಬಾಗಲಕೋಟೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಉಮೇಶ್ ಮೇಟಿ ಕೂಡ ಮನೆ, ಮನೆ ಪ್ರಚಾರ ಆರಂಭಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳೆಯರು ಸಹನ ಶೀಲರು ಹಾಗೂ ಕೆಚ್ಚೆದೆಯ ಹೋರಾಟಗಾರರು- ಡಾ. ಮೀನಾಕ್ಷಿ ಜಂಗಮನಿ
ಅನ್ಯ ಜಿಲ್ಲೆಗೆ ಭದ್ರಾ ನೀರು ಕೊಟ್ಟರೆ ಸಂಕಷ್ಟ: ಆತಂಕ