ಬೈರಮಂಗಲ-ಕಂಚುಗಾರನಹಳ್ಳಿ ಬಂದ್ ಭಾಗಶಃ ಯಶಸ್ವಿ

KannadaprabhaNewsNetwork |  
Published : Jul 22, 2025, 01:15 AM IST
21ಕೆಆರ್ ಎಂಎನ್ 3.ಜೆಪಿಜಿಹಾರೋಹಳ್ಳಿ-ಬಿಡದಿ ಮುಖ್ಯರಸ್ತೆಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವುದು. | Kannada Prabha

ಸಾರಾಂಶ

ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆಗಾಗಿ ಭೂ ಸ್ವಾಧೀನ ವಿರೋಧಿಸಿ ರೈತಪರ ಹಾಗೂ ಪ್ರಗತಿಪರ ಸಂಘಟನೆಗಳು ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಸೋಮವಾರ ಕರೆ ನೀಡಿದ್ದ ಬಂದ್ ಭಾಗಶಃ ಯಶಸ್ವಿಯಾಯಿತು.

ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆಗಾಗಿ ಭೂ ಸ್ವಾಧೀನ ವಿರೋಧಿಸಿ ರೈತಪರ ಹಾಗೂ ಪ್ರಗತಿಪರ ಸಂಘಟನೆಗಳು ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಸೋಮವಾರ ಕರೆ ನೀಡಿದ್ದ ಬಂದ್ ಭಾಗಶಃ ಯಶಸ್ವಿಯಾಯಿತು.

ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಪಂ ರೈತರ ಭೂ ಹಿತರಕ್ಷಣಾ ಸಂಘದ ವತಿಯಿಂದ ನಮ್ಮ ಭೂಮಿ - ನಮ್ಮ ಹಕ್ಕು ಹೋರಾಟದ ಅಡಿಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಭೂಸ್ವಾಧೀನ ವಿರೋಧಿಸಿ ಬಂದ್ ಹಾಗೂ ಸಾಮೂಹಿಕ ಪ್ರತಿಭಟನೆ ನಡೆಯಿತು.

ಬಂದ್ ಗೆ ಕರೆ ಕೊಟ್ಟಿದ್ದ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಬೈರಮಂಗಲ ಗ್ರಾಮದಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಎತ್ತಿನಗಾಡಿ, ಟ್ರ್ಯಾಕ್ಟರ್ ಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸುವ ಮೂಲಕ ರೈತರು ಹಾರೋಹಳ್ಳಿ-ಬಿಡದಿ ಮುಖ್ಯರಸ್ತೆಯಲ್ಲಿ ಪ್ರತಿಭಟನೆಗಿಳಿದರು. ಇದರಿಂದ 2 ಗಂಟೆಗಳಿಗೂ ಹೆಚ್ಚು ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.

ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಕಂದಾಯ ಗ್ರಾಮಗಳಾದ ಬೈರಮಂಗಲ, ಬನ್ನಿಗಿರಿ, ಮಂಡಲಹಳ್ಳಿ, ಕಂಚುಗಾರನಹಳ್ಳಿ, ಕಂಚುಗಾರನಹಳ್ಳಿ ಕಾವಲ್, ಕೆಂಪಯ್ಯನಪಾಳ್ಯ, ಅರಳಾಳುಸಂದ್ರ, ಹೊಸೂರು, ಕೆ.ಜಿ.ಗೊಲ್ಲರಪಾಳ್ಯ ಇನ್ನಿತರ ಗ್ರಾಮಗಳು ಸೇರಿದಂತೆ ಹಾರೋಹಳ್ಳಿ ಹೋಬಳಿಯ ವಡೇರಹಳ್ಳಿ ಗ್ರಾಮದ ಭಾಗಶಃ ಜಮೀನುಗಳು ಸೇರಿ ಒಟ್ಟು 24 ಗ್ರಾಮಗಳ 9600 ಎಕರೆ ಭೂಮಿಯ ಸ್ವಾಧೀನವನ್ನು ತಕ್ಷಣವೇ ಕೈಬಿಡಬೇಕು ಎಂದು ಪ್ರತಿಭಟನಾಕಾರರು ಸರ್ಕಾರವನ್ನು ಒತ್ತಾಯಿಸಿದರು.

ರೈತರ ಪ್ರತಿಭಟನೆಯಿಂದಾಗಿ ಹಾರೋಹಳ್ಳಿ-ಬಿಡದಿ ಮುಖ್ಯರಸ್ತೆಯಲ್ಲಿ ವಾಹನಗಳ ಸಂಚಾರ ಅಸ್ತವ್ಯಸ್ತವಾಯಿತು. ಕೆಲಸಮಯದ ನಂತರ ರಸ್ತೆ ತೆರವಿಗೆ ಮುಂದಾದ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮುಕಿ ನಡೆಯಿತು.

ನಂತರ ಡಿವೈಎಸ್ಪಿ ಶ್ರೀನಿವಾಸ್ ಪ್ರತಿಭಟನಾಕಾರರ ಮನವೊಲಿಸಿ ಸ್ಥಳಕ್ಕೆ ತಹಸೀಲ್ದಾರ್ ಅವರನ್ನು ಕರೆಯಿಸುವುದಾಗಿ ಭರವಸೆ ನೀಡಿ ಅವರಿಗೆ ತಮ್ಮ ಅಹವಾಲು ಸಲ್ಲಿಸುವಂತೆ ಅಲ್ಲಿಯವರೆಗೆ ವೇದಿಕೆಗೆ ತೆರಳುವಂತೆ ಮಾಡಿದ ಮನವಿಗೆ ಪ್ರತಿಭಟನಾಕಾರರು ಸ್ಪಂದಿಸಿ ರಸ್ತೆ ತೆರವು ಮಾಡಿದರು. ಬಳಿಕ ರಾಮನಗರ ತಹಸೀಲ್ದಾರ್ ತೇಜಸ್ವಿನಿ ಅವರಿಗೆ ತಮ್ಮ ಹಕ್ಕೊತ್ತಾಯದ ಮನವಿ ಸಲ್ಲಿಸಿದರು. ಸಂಜೆ ವೇಳೆಗೆ ಪ್ರತಿಭಟನೆಯನ್ನು ಹಿಂಪಡೆದರು.

ಪ್ರತಿಭಟನೆಯಲ್ಲಿ ಚಿತ್ರನಟ ಹೋರಾಟಗಾರ ಚೇತನ್ ಅಹಿಂಸಾ, ರೈತಸಂಘ ಮುಖಂಡ ಹೊನ್ನೂರು ಪ್ರಕಾಶ್, ಯಶವಂತ್, ಬೈರೇಗೌಡ, ಮಲ್ಲಿಕಾರ್ಜುನ್, ಮಾದೇಗೌಡ, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಬಿ.ಗೋಪಾಲ್, ಜನತಾ ಪರಿವಾರದ ವಾಣಿಶೆಟ್ಟಿ, ನಾಗೇಶ್, ತಾಪಂ ಮಾಜಿ ಸದಸ್ಯ ಪ್ರಕಾಶ್, ರೈತರ ಹಿತರಕ್ಷಣಾ ಸಂಘದ ಅಧ್ಯಕ್ಷ ಕೆ.ರಾಮಯ್ಯ, ಪದಾಧಿಕಾರಿಗಳಾದ ಮಂಡಲಹಳ್ಳಿ ನಾಗರಾಜು, ಬಿ.ಎಂ.ಶ್ರೀನಿವಾಸರೆಡ್ಡಿ, ಶೇಷಪ್ಪ, ಗಿರಿಧರ್ ರಾಮಯ್ಯ, ಚೌಕಹಳ್ಳಿನಾರಾಯಣರೆಡ್ಡಿ, ಯುವ ಮುಖಂಡ ಸಂದೀಪ್ ಮತ್ತಿತರರು ಭಾಗವಹಿಸಿದ್ದರು.

21ಕೆಆರ್ ಎಂಎನ್ 3.ಜೆಪಿಜಿ

ಹಾರೋಹಳ್ಳಿ-ಬಿಡದಿ ಮುಖ್ಯರಸ್ತೆಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವುದು.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ