ಬತ್ತಿದ ಬಜೆ ಅಣೆಕಟ್ಟೆ: ಉಡುಪಿಗೆ ಜಲಕ್ಷಾಮ ಭೀತಿ

KannadaprabhaNewsNetwork | Published : Apr 30, 2024 2:15 AM

ಸಾರಾಂಶ

ಈ ತಿಂಗಳ ಆರಂಭದಲ್ಲಿ ಬಜೆ ಅಣೆಕಟ್ಟೆಯಲ್ಲಿ 6 ಮೀಟರ್ ನೀರಿತ್ತು. ಎರಡು ವಾರಗಳ ಹಿಂದೆ ಇದು 5 ಮೀಟರ್‌ಗೆ ಇಳಿದಿದ್ದು, ಕಳೆದ ಸೋಮವಾರ ನೀರಿನ ಮಟ್ಟ 4 ಮೀಟರ್ ಆಗಿತ್ತು. ಈ ಸೋಮವಾರ ನೀರಿನ ಮಟ್ಟ ಕೇವಲ 3.50 ಮೀಟರ್ ಗೆ ಇಳಿದಿದೆ. ಮುಂದಿನ 2 ವಾರಗಳಿಗಷ್ಟೇ ಈ ನೀರು ಸಾಕಾಗಬಹುದು ಎಂದು ನಗರಸಭೆ ಅಧಿಕಾರಿಗಳು ಅಂದಾಜಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ನಗರಸಭೆಗೆ ನೀರು ಪೂರೈಕೆ ಮಾಡುವ ಸುವರ್ಣ ನದಿಯಲ್ಲಿ ನೀರು ತೀವ್ರಗತಿಯಲ್ಲಿ ಕಡಿಮೆಯಾಗುತ್ತಿದ್ದು, ಉಡುಪಿ ನಗರಕ್ಕೆ ಕುಡಿಯುವ ನೀರಿನ ಕೊರತೆಯಾಗುವ ಆತಂಕ ಉಂಟಾಗಿದೆ. ನಗರವಾಸಿಗಳಿಗೆ ನೀರಿನ ಪೂರೈಕೆಯಲ್ಲಿ ರೇಷನಿಂಗ್ ನಡೆಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಬಿಸಿಲಿನ ಝಳ ತೀವ್ರವಾಗಿ ಹೆಚ್ಚಿದ್ದು, ನದಿ ಕೆರೆಗಳಲ್ಲಿ ನೀರು ತೀವ್ರಗತಿಯಲ್ಲಿ ಆವಿಯಾಗುತ್ತಿದೆ. ಸುವರ್ಣ ನದಿಯಲ್ಲಿಯೂ ಒಳಹರಿವು ಸಂಪೂರ್ಣ ನಿಂತಿದ್ದು, ಬಜೆ ಮತ್ತು ಶೀರೂರು ಅಣೆಕಟ್ಟೆಯಲ್ಲಿ ಸಂಗ್ರಹವಿರುವ ಅಲ್ಪಸ್ವಲ್ಪ ನೀರು ಕೂಡ ಬತ್ತುತ್ತಿದೆ.

* ನೀರು ಕೊರತೆ ಸಾಧ್ಯತೆ

ಈ ತಿಂಗಳ ಆರಂಭದಲ್ಲಿ ಬಜೆ ಅಣೆಕಟ್ಟೆಯಲ್ಲಿ 6 ಮೀಟರ್ ನೀರಿತ್ತು. ಎರಡು ವಾರಗಳ ಹಿಂದೆ ಇದು 5 ಮೀಟರ್‌ಗೆ ಇಳಿದಿದ್ದು, ಕಳೆದ ಸೋಮವಾರ ನೀರಿನ ಮಟ್ಟ 4 ಮೀಟರ್ ಆಗಿತ್ತು. ಈ ಸೋಮವಾರ ನೀರಿನ ಮಟ್ಟ ಕೇವಲ 3.50 ಮೀಟರ್ ಗೆ ಇಳಿದಿದೆ. ಮುಂದಿನ 2 ವಾರಗಳಿಗಷ್ಟೇ ಈ ನೀರು ಸಾಕಾಗಬಹುದು ಎಂದು ನಗರಸಭೆ ಅಧಿಕಾರಿಗಳು ಅಂದಾಜಿಸಿದ್ದಾರೆ.

ಎರಡು ವಾರದಲ್ಲಿ ನದಿಯಲ್ಲಿ ಒಳಹರಿವು ಉಂಟಾಗುವಷ್ಟು ಮಳೆಯಾಗದಿದ್ದರೆ ಉಡುಪಿ ನಗರದ ಜನತೆ ತೀವ್ರ ನೀರಿನ ಸಂಕಷ್ಟ ಅನುಭವಿಸಬೇಕಾಗುತ್ತದೆ. ಆದರೆ ಇನ್ನೊಂದೆರಡು ವಾರಗಳಲ್ಲಿ ಉತ್ತಮ ಮಳೆಯಾಗುತ್ತದೆ ಎನ್ನುವ ನಂಬಿಕೆ ಅಧಿಕಾರಿಗಳದ್ದು.

ಆದರೂ ರಿಸ್ಕ್ ತೆಗೆದುಕೊಳ್ಳುವುದು ಸಾಧ್ಯವಿಲ್ಲದಿರುವುದರಿಂದ, ಮಳೆ ಬಾರದೆ ಉಂಟಾಗಬಹುದಾದ ಸಂಕಷ್ಟದಿಂದ ಪಾರಾಗಲು, ಈ ವಾರದಿಂದ ನಗರವಾಸಿಗಳಿಗೆ 2 ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಅದಕ್ಕಾಗಿ ನಗರಸಭಾ ವ್ಯಾಪ್ತಿಯನ್ನು 3 ವಲಯಗಳನ್ನಾಗಿ ವಿಂಗಡಿಸಿದ್ದು, ಪರ್ಯಾಯ ದಿನಗಳಂದು ನೀರು ಬಿಡುವುದಕ್ಕೆ ಯೋಚಿಸಲಾಗಿದೆ.

ಸದ್ಯ ಶಿರೂರು ಭಾಗದಲ್ಲಿ ನದಿಯ ತಗ್ಗು ಹೊಂಡಗಳಲ್ಲಿರುವ ನೀರನ್ನು ಪಂಪ್‌ಗಳ ಮೂಲಕ ಕೆಳಗಿನ ಬಜೆ ಅಣೆಕಟ್ಟೆಗೆ ಹರಿಸಲಾಗುತ್ತಿದೆ. ಆದರೆ ಹೊಂಡಗಳಲ್ಲಿ ನೀರು ಖಾಲಿಯಾಗುತ್ತಿದ್ದಂತೆ ನೀರಿನ ಸಮಸ್ಯೆ ಉಲ್ಭಣಿಸಲಿದೆ.

ಕಳೆದ ವರ್ಷವೂ ಸುಮಾರು 20 ದಿನಗಳ ಕಾಲ ನೀರಿನ ಸಮಸ್ಯೆ ಉಂಟಾಗಿದ್ದು, ನಗರದ ಅನೇಕ ವಾರ್ಡುಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗಿತ್ತು. ಈ ಬಾರಿಯೂ ಅಗತ್ಯವಿದ್ದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆಗೂ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ........................

ಹೂಳೆತ್ತದೇ ಇರುವುದೇ ಕೊರತೆಗೆ ಕಾರಣ

ಉಡುಪಿ ನಗರಕ್ಕೆ ಬಜೆ ಅಣೆಕಟ್ಟೆಯಿಂದ ಪಂಪ್ ಮೂಲಕ ನೀರೆತ್ತಿ ಶುದ್ಧೀಕರಿಸಿ ಪೂರೈಕೆ ಮಾಡಲಾಗುತ್ತದೆ. ಬಜೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಮೇಲ್ಗಡೆಯ ಶಿರೂರು ಅಣೆಕಟ್ಟೆಯಿಂದ ನೀರನ್ನು ಬಜೆ ಅಣೆಕಟ್ಟೆಗೆ ಹರಿಸಲಾಗುತ್ತದೆ.

ಆದರೆ ಬಜೆ ಅಣೆಕಟ್ಟೆಯಲ್ಲಿ 6.30 ಮೀಟರ್ ನೀರು ಸಂಗ್ರಹದ ಗರಿಷ್ಟ ಅವಕಾಶ ಇದ್ದರೂ, ಜಲಾಶಯದಲ್ಲಿ ಮರಳು, ಕೆಸರು, ಹೂಳು ತುಂಬಿದ್ದು, ನೀರಿನ ಸಂಗ್ರಹ ಕಡಿಮೆಯಾಗುತ್ತಿದೆ. ಹೂಳೆತ್ತಿದರೆ ನೀರಿನ ಕೊರತೆಯಾಗುವುದಿಲ್ಲ ಎನ್ನುತ್ತಾರೆ ತಜ್ಞರು. ಆದರೆ ಹೂಳೆತ್ತುವುದಕ್ಕೆ ಕಾನೂನಿನ ತೊಡಕಿಗೆ ಎನ್ನುತ್ತಾರೆ ಅಧಿಕಾರಿಗಳು.

Share this article